ಹೂಡಿಕೆದಾರರಿಗೆ ದುಪ್ಪಟ್ಟು ಲಾಭದ ಆಸೆ ತೋರಿಸಿ ಖಾಸಗಿ ಕಂಪನಿಯೊಂದು 54ಕ್ಕೂ ಹೆಚ್ಚು ಮಂದಿಗೆ 2.76 ಕೋಟಿ ರು. ವಂಚನೆ ಮಾಡಿರುವ ಪ್ರಕರಣ ಆರ್‌.ಟಿ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಹೂಡಿಕೆದಾರರಿಗೆ ದುಪ್ಪಟ್ಟು ಲಾಭದ ಆಸೆ ತೋರಿಸಿ ಖಾಸಗಿ ಕಂಪನಿಯೊಂದು 54ಕ್ಕೂ ಹೆಚ್ಚು ಮಂದಿಗೆ 2.76 ಕೋಟಿ ರು. ವಂಚನೆ ಮಾಡಿರುವ ಪ್ರಕರಣ ಆರ್‌.ಟಿ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಈ ಸಂಬಂಧ ಡಾ.ಜಯನಾಯಕ್‌ ಸೇರಿದಂತೆ 55 ಮಂದಿ ದೂರು ನೀಡಿದ್ದು, ಸ್ಮಾರ್ಟ್ ಕ್ವಾಂಟ್‌ ಸರ್ವಿಸ್‌ ಎಂಟರ್‌ಪ್ರೈಸಸ್‌ ಕಂಪನಿಯ ಮ್ಯಾನೇಜರ್‌ ಸೇರಿ 14 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಪ್ರಕರಣ ವಿವರ:

ಕಂಪನಿಯಲ್ಲಿ ಹೂಡಿಕೆ ಮಾಡಿದರೆ ಆ ಹಣವನ್ನು ಬೇರೆ ಕಡೆ ಟ್ರೇಡಿಂಗ್‌ನಲ್ಲಿ ಹೂಡಿಕೆ ಮಾಡಿ ಬರುವ ಲಾಭವನ್ನು ಕೊಡುತ್ತೇವೆ ಎಂದು ಕಂಪನಿ 2025 ರಿಂದ 2026 ಏಪ್ರಿಲ್ ತಿಂಗಳವರೆಗೂ 55 ಕ್ಕೂ ಹೆಚ್ಚು ಜನರಿಗೆ ನಂಬಿಸಿ ಹೂಡಿಕೆ ಮಾಡಿಸಿಕೊಂಡಿದ್ದರು. ಆರಂಭದಲ್ಲಿ ಕಂಪನಿಯು ಕೆಲವರಿಗೆ ಹೇಳಿದಷ್ಟು ಲಾಭದ ಹಣ ನೀಡಿತ್ತು. ಇದರಿಂದ ಹೂಡಿಕೆದಾರರಿಗೆ ಕಂಪನಿಯ ಮೇಲೆ ನಂಬಿಕೆ ಬರಲು ಆರಂಭವಾಯಿತು. ನಂತರ ಹೂಡಿಕೆದಾರರು ತಮ್ಮ ಕುಟುಂಬದವರಿಗೆ ಮತ್ತು ಸ್ನೇಹಿತರಿಗೆ ಹೇಳಿ ಹೂಡಿಕೆ ಮಾಡಿಸಿದ್ದರು. ಒಬ್ಬೊಬ್ಬರು 40 ಸಾವಿರದಿಂದ ಲಕ್ಷಗಟ್ಟಲೆ ಹೂಡಿಕೆ ಮಾಡಿದ್ದರು. ಕಂಪನಿಯವರು ಟ್ರೇಡಿಂಗ್‌ನಲ್ಲಿ ಹೂಡಿಕೆ ಮಾಡಿ ಅಧಿಕ ಲಾಭ ನೀಡುವ ಆಮಿಷವೊಡ್ಡಿದ್ದರು. ಈ ಆಮಿಷಕ್ಕೊಳಗಾದ 54 ಕ್ಕೂ ಹೆಚ್ಚು ಜನರು ಸುಮಾರು 2.76 ಕೋಟಿ ರು. ಹೂಡಿಕೆ ಮಾಡಿದ್ದರು. ಹೂಡಿಕೆ ಜಾಸ್ತಿಯಾಗುತ್ತಿದಂತೆ ಕಂಪನಿಯವರು ಆ ಹಣವನ್ನು ಸ್ವಂತಕ್ಕೆ ಬಳಸಿಕೊಂಡಿದ್ದಾರೆ ಎನ್ನಲಾಗಿದೆ. ನಂತರ ಕಚೇರಿಗೆ ಬೀಗ ಹಾಕಿ ಸಿಬ್ಬಂದಿ ನಾಪತ್ತೆಯಾಗಿದ್ದಾರೆ. ಮೋಸ ಹೋದವರು ಇದೀಗ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.