ಆರೋಗ್ಯ ಗಳಿಸಿಕೊಳ್ಳಲು ಗಾಣದ ಎಣ್ಣೆ ಬಳಸಿ

KannadaprabhaNewsNetwork |  
Published : Jan 10, 2026, 01:15 AM IST
4 | Kannada Prabha

ಸಾರಾಂಶ

ಇವತ್ತಿನ ಜೀವನ ಶೈಲಿಯಲ್ಲಿ ಆಹಾರ ಎಲ್ಲರಿಗೂ ಸಿಗುತ್ತಿದೆ. ಆದರೆ, ಪೌಷ್ಟಿಕ ಆಹಾರ ಸಿಗುತ್ತಿಲ್ಲ.

ಕನ್ನಡಪ್ರಭ ವಾರ್ತೆ ಮೈಸೂರುಸಾಂಪ್ರದಾಯಿಕ ಆಹಾರಗಳನ್ನು ಬಳಸುವ ಮೂಲಕ ಆರೋಗ್ಯವನ್ನು ಗಳಿಸಿಕೊಳ್ಳಬೇಕಾಗಿದೆ. ಗಾಣದ ಎಣ್ಣೆ ಬಳಕೆ ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಬೇಕು ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕರೆ ನೀಡಿದರು.ನಗರದ ನಂಜರಾಜ ಬಹದ್ದೂರು ಛತ್ರದಲ್ಲಿ ಸಹಜ ಸಮೃದ್ಧ ಮತ್ತು ದೇಸಿರಿ ನ್ಯಾಚುರಲ್ಸ್ ಸಂಯುಕ್ತವಾಗಿ ಆಯೋಜಿಸಿರುವ ಮೂರು ದಿನಗಳ ದೇಸಿ ಎಣ್ಣೆ ಮೇಳದಲ್ಲಿ ಶುಕ್ರವಾರ ಅವರು ಎತ್ತಿನ ಗಾಣಕ್ಕೆ ಚಾಲನೆ ನೀಡಿ ಮಾತನಾಡಿದರು.ಇವತ್ತಿನ ಜೀವನ ಶೈಲಿಯಲ್ಲಿ ಆಹಾರ ಎಲ್ಲರಿಗೂ ಸಿಗುತ್ತಿದೆ. ಆದರೆ, ಪೌಷ್ಟಿಕ ಆಹಾರ ಸಿಗುತ್ತಿಲ್ಲ. ಆರ್ಥಿಕತೆ ಸಾಧಿಸುವ ಭರದಲ್ಲಿ ಆರೋಗ್ಯವನ್ನು ಕಳೆದುಕೊಳ್ಳುತ್ತಿದ್ದೇವೆ. ಸಾಂಪ್ರದಾಯಿಕವಾಗಿ ಉತ್ಪಾದನೆಯಾಗುತ್ತಿದ್ದ ದೇಸಿ ಗಾಣದ ಎಣ್ಣೆಗಳು ನಮ್ಮ ಹಿರಿಯರ ಆರೋಗ್ಯವನ್ನು ಕಾಪಾಡಿದ್ದವು. ಗ್ರಾಹಕರಿಗೆ ಇದರ ಮಹತ್ವ ತಿಳಿಸಲು, ಗಾಣದ ಎಣ್ಣೆಯಲ್ಲಿರುವ ಪೋಷಕಾಂಶಗಳ ಬಗ್ಗೆ ಅಧ್ಯಯನ ಮಾಡಿ, ಅದರ ಪ್ರಯೋಜನಗಳನ್ನು ಗ್ರಾಹಕರಿಗೆ ತಿಳಿಸಬೇಕಿದೆ ಎಂದರು.ದೇಸಿ ಎಣ್ಣೆ ಮೇಳ ಉದ್ಘಾಟಿಸಿದ ಮಂಟೇಸ್ವಾಮಿ ಮಠ, ಕಪ್ಪಡಿ ಕ್ಷೇತ್ರದ ಮಠಾಧಿಪತಿ ವರ್ಚಸ್ವೀ ಶ್ರೀಕಂಠ ಸಿದ್ಧಲಿಂಗ ರಾಜೇ ಅರಸ್ ಮಾತನಾಡಿ, ಗಾಣದ ಎಣ್ಣೆಗಳು ಸ್ಥಳೀಯ ಆಹಾರ ಸಂಸ್ಕೃತಿಗೆ ಪೂರಕವಾಗಿವೆ. ಇವುಗಳ ಬಳಕೆಯಿಂದ ರೈತರ ಜೀವನ ಮಟ್ಟ ಸುಧಾರಿಸುತ್ತದೆ. ಸ್ಥಳೀಯರಿಗೆ ಉದ್ಯೋಗ ಲಭಿಸುತ್ತದೆ ಎಂದು ಹೇಳಿದರು. ಸಿ.ಎಫ್.ಟಿ.ಆರ್.ಐ. ನಿರ್ದೇಶಕ ಡಾ. ಗಿರಿಧರ್ ಪರ್ವತಂ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಗಾಣದ ಎಣ್ಣೆಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಆದಾಗ್ಯೂ ದೇಶಿಯ ಮಾರುಕಟ್ಟೆ ಬೇಡಿಕೆಯ ಶೇ.45 ರಷ್ಟು ಖಾದ್ಯ ತೈಲ ಮಾತ್ರ ಉತ್ಪಾದನೆಯಾಗುತ್ತಿದೆ. 16.5 ಮಿಲಿಯ ಟನ್ ಖಾದ್ಯ ತೈಲ ಹೊರದೇಶಗಳಿಂದ ಆಮದಾಗುತ್ತಿದೆ. ರೈತ ಗುಂಪುಗಳು, ಮಹಿಳಾ ಸಂಘಗಳು ಈ ಅವಕಾಶವನ್ನು ಬಳಸಿಕೊಂಡು ಸ್ಥಳೀಯವಾಗಿ ಎಣ್ಣೆ ಉತ್ಪಾದನೆ ಮಾಡಿ ಲಾಭಗಳಿಸಬಹುದು ಎಂದರು. ಪ್ರಿಸಿಷನ್ ಮೆಡಿಸಿನ್ ವಿಜ್ಞಾನಿ ಡಾ. ಮಮತಾ ಶೇಖರ್ ಮಾತನಾಡಿ, ಗೃಹ ಕೈಗಾರಿಕೆ ಉತ್ಪನ್ನಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಳ್ಳೆಯ ಬೇಡಿಕೆ ಇದೆ. ಅಮೇರಿಕಾದಲ್ಲಿ ಗಾಣದ ಎಣ್ಣೆಗೆ ಬಹಳ ಬೇಡಿಕೆ ಇದೆ. ಆದರೆ, ಅವನ್ನು ರಫ್ತು ಮಾಡಲು ಇರುವ ಮಾನದಂಡಗಳು ಕಠಿಣವಾಗಿವೆ. ಇದರಿಂದ ಸಣ್ಣ ಉದ್ದಿಮೆದಾರರು ರಫ್ತುದಾರರಾಗುವ ಅವಕಾಶ ಇಲ್ಲದಂತಾಗಿದೆ. ಈ ಮಾನದಂಡಗಳನ್ನು ಸರಳಗೊಳಿಸಲು ಸರ್ಕಾರ ಸಹಕರಿಸಬೇಕು ಎಂದು ಕೋರಿದರು. ರೋಟರಿ ಕ್ಲಬ್ ಮೈಸೂರು ಅಧ್ಯಕ್ಷ ಡಿ. ರವಿಶಂಕರ್, ಮೈಸೂರು ಕಲ್ಯಾಣ ಮಂಟಪ ಸಂಘದ ಅಧ್ಯಕ್ಷ ಎಸ್. ಮೂರ್ತಿ, ಸಹಜ ಸಮೃದ್ಧದ ನಿರ್ದೇಶಕ ಜಿ. ಕೃಷ್ಣಪ್ರಸಾದ್, ದೇಸಿರಿ ನ್ಯಾಚುರಲ್ಸ್ ಸಹ ಸಂಸ್ಥಾಪಕರಾದ ಎನ್. ಯೋಗೀಶ್, ಎಚ್.ಆರ್. ನವೀನ್ ಕುಮಾರ್, ಎಂ. ಮಹೇಶ, ಸಹಜ ಸೀಡ್ಸ್ ನ ಕೆ. ಮಂಜು ಮೊದಲಾದವರು ಇದ್ದರು.----ಬಾಕ್ಸ್... ಸಂಸದರಿಗೆ 3 ಬೇಡಿಕೆ ಸಲ್ಲಿಕೆಎತ್ತಿನ ಗಾಣದ ಎಣ್ಣೆದ ಬಗ್ಗೆ ಅಧ್ಯಯನ ಮಾಡಿ ಜನರಿಗೆ ಮುಟ್ಟಿಸಬೇಕು. ಎಫ್ಎಸ್‌ಐಎಲ್ ಪಟ್ಟಿಯಲ್ಲಿ ಎತ್ತಿನ ಗಾಣದ ಎಣ್ಣೆ ಸೇರ್ಪಡೆ ಮಾಡಬೇಕು. ಮರದ ಗಾಣ ಬಳಕ್ಕೆ ಬಳಸುವ ಬಾಗೇಮರವನ್ನು ಸಂರಕ್ಷಣೆ ಮಾಡಬೇಕು. ಈ ಮರದಲ್ಲಿ ಔಷಧಿಯ ಗುಣಗಳಿವೆ. ಹುಣಸೂರು, ಪಿರಿಯಾಪಟ್ಟಣ ಭಾಗದಲ್ಲಿ ಹೊಗೆಸೊಪ್ಪು ಸುಡಲು ಬಾಗೇ ಮರವನ್ನು ಬಳಸಲಾಗುತ್ತಿದೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ದೇಸಿರಿ ನ್ಯಾಚುರಲ್ ಸಹ ಸಂಸ್ಥಾಪಕ ಎಚ್.ಆರ್. ನವೀನ್‌ ಕುಮಾರ್ ಮನವಿ ಸಲ್ಲಿಸಿದರು.----ಬಾಕ್ಸ್... 50 ಬಗೆಯ ಎಣ್ಣೆಗಳ ಪ್ರದರ್ಶನ ಮೂರು ದಿನಗಳ ಕಾಲ ನಡೆಯಲಿರುವ ದೇಸಿ ಎಣ್ಣೆ ಮೇಳದಲ್ಲಿ ಸಾಂಪ್ರದಾಯಿಕವಾಗಿ ಬಳಕೆಯಲ್ಲಿದ್ದ 50 ಬಗೆಯ ಎಣ್ಣೆಗಳ ಪ್ರದರ್ಶನ ಮತ್ತು ಮಾಹಿತಿ ನೀಡಲಾಗುತ್ತಿದೆ. ಬಗೆ ಬಗೆಯ ಗಾಣದ ಎಣ್ಣೆ ಕೊಳ್ಳಲು ಸಿಗುತ್ತಿದೆ. ಎತ್ತಿನ ಗಾಣದ ಎಣ್ಣೆಯ ಉತ್ಪಾದನೆಯನ್ನು ಪ್ರಾಯೋಗಿಕವಾಗಿ ನೋಡಬಹುದು. ಮೇಳಕ್ಕಾಗಿ ಎತ್ತಿನ ಗಾಣ ಹಾಕಲಾಗಿದೆ. ಹರಳೆಣ್ಣೆ ಬೇಯಿಸಿ ಎಣ್ಣೆ ತೆಗೆಯುವ ಪ್ರಾತ್ಯಕ್ಷಿಕೆಯನ್ನು ಮೇಳದಲ್ಲಿ ಖುದ್ದಾಗಿ ನೋಡಬಹುದು.ಸಿ.ಎಫ್.ಟಿ.ಆರ್.ಐ ವಿಜ್ಞಾನಿಗಳು ಕಲಬೆರಕೆ ಎಣ್ಣೆಯನ್ನು ಪತ್ತೆ ಹಚ್ಚುವ ವಿಧಾನವನ್ನು ತೋರಿಸುತ್ತಿದ್ದಾರೆ. ಜೆಎಸ್ಎಸ್ ಆರ್ಯುವೇದ ಮಹಾವಿದ್ಯಾಲಯದ ವೈದ್ಯರಿಂದ ಉಚಿತ ಸಲಹೆ ಮತ್ತು ಎಣ್ಣೆ ಬಳಕೆಯ ಮಾರ್ಗದರ್ಶನ ಸಿಗುತ್ತಿದೆ. ಆಹಾರ ತಜ್ಞರು ವಿವಿಧ ದೇಹ ಪ್ರಕೃತಿಗಳಿಗೆ ಯೋಗ್ಯವಾದ ಎಣ್ಣೆಗಳ ಬಳಕೆಯ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ.52 ಮಳಿಗೆಗಳಲ್ಲಿ ಸಾವಯವ ಉತ್ಪನ್ನ, ಮೌಲ್ಯವರ್ಧಿತ ಪದಾರ್ಥಗಳು, ಬೀಜ, ಹಣ್ಣಿನ ಗಿಡ ಮತ್ತು ಸಹಜ ಸೌಂದರ್ಯ ವರ್ಧಕಗಳು ಮಾರಾಟಕ್ಕೆ ಸಿಗುತ್ತವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಯಣ್ಣನ ವೀರಭೂಮಿ ಶೀಘ್ರ ಲೋಕಾರ್ಪಣೆ
ಅಕ್ರಮ ಬಾಂಗ್ಲಾ ವಲಸಿಗರನ್ನು ಹೊರಗಟ್ಟಿ