ನವೆಂಬರ್ 21ರಿಂದ 3 ದಿನ ‘ಕಡಲ ಉತ್ಸವ’

KannadaprabhaNewsNetwork |  
Published : Nov 15, 2026, 02:15 AM IST
ಕಡಲ ಉತ್ಸವದ ಕರಪತ್ರಗಳನ್ನು ಬಿಡುಗಡೆ ಮಾಡಲಾಯಿತು. | Kannada Prabha

ಸಾರಾಂಶ

ನ. 21ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉತ್ಸವ ಉದ್ಘಾಟಿಸಲಿದ್ದಾರೆ. ಮೀನುಗಾರಿಕೆ ಸಚಿವ ಕೆ.ಎಸ್. ಬಸವಂತಪ್ಪ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದು, ಶಾಸಕ ಸತೀಶ್ ಸೈಲ್ ಅಧ್ಯಕ್ಷತೆ ವಹಿಸಲಿದ್ದಾರೆ.

ಕಾರವಾರ: ವಿಶ್ವ ಮೀನುಗಾರಿಕೆ ದಿನಾಚರಣೆ ಅಂಗವಾಗಿ ಕಾರವಾರ ಮೀನು ಮಾರುಕಟ್ಟೆ ಮಹಿಳಾ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ನ. 21ರಿಂದ 23ರ ವರೆಗೆ ಮೂರು ದಿನಗಳ ‘ಕಡಲ ಉತ್ಸವ’ವನ್ನು ನಗರದ ಟ್ಯಾಗೋರ್ ಕಡಲತೀರದಲ್ಲಿ ಆಯೋಜಿಸಲಾಗಿದೆ ಎಂದು ಹರಿಕಾಂತ ಮಹಾಜನ ಸಂಘದ ಶೈಕ್ಷಣಿಕ ಸಮಿತಿ ಅಧ್ಯಕ್ಷ ಶಿವಾನಂದ ತಾಂಡೇಲ್ ತಿಳಿಸಿದರು.ಶನಿವಾರ ಉತ್ಸವದ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದ ಅವರು, ನ. 21ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉತ್ಸವ ಉದ್ಘಾಟಿಸಲಿದ್ದಾರೆ. ಮೀನುಗಾರಿಕೆ ಸಚಿವ ಕೆ.ಎಸ್. ಬಸವಂತಪ್ಪ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದು, ಶಾಸಕ ಸತೀಶ್ ಸೈಲ್ ಅಧ್ಯಕ್ಷತೆ ವಹಿಸಲಿದ್ದಾರೆ. ಹಾವೇರಿಯ ನಿಜಶರಣ ಅಂಬಿಗರ ಚೌಡಯ್ಯ ಗುರುಪೀಠದ ಶಾಂತಭೀಷ್ಮ ಚೌಡಯ್ಯ ಗೌರವ ಉಪಸ್ಥಿತಿ ವಹಿಸಲಿದ್ದಾರೆ.

ವಿಧಾನಪರಿಷತ್ ಸದಸ್ಯ ಗಣಪತಿ ಉಳ್ವೇಕರ್, ಜಿಲ್ಲಾಧಿಕಾರಿ ಬೋಯರ್ ಹರ್ಷಲ್ ನಾರಾಯಣರಾವ್ ಹಾಗೂ ಜಿಲ್ಲಾ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷ ಪ್ರಶಾಂತ ತಾಂಡೇಲ್ ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.ನ. 22ರಂದು ನಡೆಯುವ ಕಾರ್ಯಕ್ರಮದಲ್ಲಿ ಉಪಸಭಾಧ್ಯಕ್ಷ ಮಂಕಾಳ ಎಸ್. ವೈದ್ಯ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಉಪಸ್ಥಿತರಿರುವರು. ಶಾಸಕ ಸತೀಶ್ ಸೈಲ್ ಅಧ್ಯಕ್ಷತೆ ವಹಿಸುವರು. ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಹಾಗೂ ನಗರಸಭೆ ಆಯುಕ್ತ ಜಗದೀಶ ಹುಲಗೆಜ್ಜಿ ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳಲಿದ್ದಾರೆ. ನ. 23ರಂದು ಸಮಾರೋಪ ಸಮಾರಂಭ ನಡೆಯಲಿದೆ.ನ. 21 ಮತ್ತು 22ರಂದು ಸಾರ್ವಜನಿಕರಿಗಾಗಿ ಈಜು, ದೋಣಿ ಓಡಿಸುವುದು, ಬೀಸುಬಲೆ ಬಳಸಿ ಮೀನು ಹಿಡಿಯುವುದು, ರಂಗೋಲಿ ಹಾಗೂ ಚಿತ್ರಕಲಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ನ. 21ರಂದು ಮೀನುಗಾರಿಕೆ ವೃತ್ತಿಗೆ ಸಂಬಂಧಿಸಿದ ಸ್ತಬ್ಧಚಿತ್ರಗಳೊಂದಿಗೆ ಬೃಹತ್ ಮೆರವಣಿಗೆ ನಡೆಯಲಿದ್ದು, ಕರಾವಳಿಯ ಸಂಸ್ಕೃತಿ, ಮೀನುಗಾರರ ಪರಂಪರೆ ಹಾಗೂ ಕಡಲಿನ ಸೊಬಗನ್ನು ಪರಿಚಯಿಸಲಾಗುತ್ತದೆ.ಉತ್ಸವದ ಅಂಗವಾಗಿ ಮೂರು ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ನ. 21ರಂದು ಸರಿಗಮಪ ಹಾಗೂ ಇಂಡಿಯನ್ ಐಡಲ್ ಖ್ಯಾತಿಯ ಶ್ರೀನಿಧಿ ಶಾಸ್ತ್ರಿ ಮತ್ತು ನಟಿ ನಯನಾ ನಾಗರಾಜ್ ಕಾರ್ಯಕ್ರಮ ನೀಡಲಿದ್ದಾರೆ. ನ. 22ರಂದು ‘ಪ್ರೇಮದ ಊರಲಿ’ ಖ್ಯಾತಿಯ ಹಿನ್ನೆಲೆ ಗಾಯಕಿ ನಿನಾದ ನಾಯಕ ಹಾಗೂ ನ. 23ರಂದು ಇಂಡಿಯನ್ ಐಡಲ್ ಖ್ಯಾತಿಯ ನಚೀಕೇತ ಲೆಲೆ ಸಂಗೀತ ಸಂಜೆ ನಡೆಸಿಕೊಡಲಿದ್ದಾರೆ.ಮೀನುಗಾರರ ಮುಖಂಡ ಗಣಪತಿ ಮಾಂಗ್ರೆ, ಉತ್ಸವದ ಮೂಲಕ ಪ್ಲಾಸ್ಟಿಕ್ ಮುಕ್ತ ಸಮುದ್ರದ ಸಂದೇಶವನ್ನು ಜನರಿಗೆ ತಲುಪಿಸುವ ಉದ್ದೇಶ ಹೊಂದಲಾಗಿದೆ. ಲಕ್ಷಾಂತರ ಜಲಚರಗಳ ಆವಾಸಸ್ಥಾನವಾಗಿರುವ ಸಮುದ್ರವನ್ನು ಪ್ಲಾಸ್ಟಿಕ್ ಮಾಲಿನ್ಯದಿಂದ ರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.

ಮಹಿಳಾ ಮೀನುಗಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷೆ ಸುಶೀಲಾ ಹರಿಕಂತ್ರ, ವಕೀಲೆ ಪದ್ಮಾ ತಾಂಡೇಲ್, ಚೇತನ್ ಹರಿಕಂತ್ರ, ರೋಹಿದಾಸ ಬಾನಾವಳಿ ಹಾಗೂ ರೋಶನ್ ಹರಿಕಂತ್ರ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಫಿಲ್ಟರ್‌ ಮಾಡದೇ ಕಲುಷಿತ ನೀರು ಪೂರೈಕೆ ?
ಚಳಿಗಾಲದ ಅಧಿವೇಶನಕ್ಕೆ ಹೆಸ್ಕಾಂ ಸಕಲ ಸಿದ್ಧತೆ