ಬೆಂಗಳೂರು : ರಾಜ್ಯದಲ್ಲಿ ಮುಂದಿನ ಮೂರು ದಿನ ಮಳೆ ಇನ್ನಷ್ಟು ಚುರುಕುಗೊಳ್ಳಲಿದ್ದು, 14 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ಕಳೆದೊಂದು ವಾರದಲ್ಲಿ ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಇನ್ನೂ ಒಂದು ವಾರ ರಾಜ್ಯದಲ್ಲಿ ಮಳೆ ಮುಂದುವರೆಯಲಿದೆ.
ತುಮಕೂರು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಚಿತ್ರದುರ್ಗ ಜಿಲ್ಲೆಗಳಿಗೆ ಮೇ 19 ಹಾಗೂ 20, ಬಾಗಲಕೋಟೆ, ಬೀದರ್, ಧಾರಾವಾಡ, ಗದಗ, ಹಾವೇರಿ ಜಿಲ್ಲೆಗಳಿಗೆ ಮೇ 20 ಹಾಗೂ 21, ಕರಾವಳಿಯ ಮೂರು ಜಿಲ್ಲೆಗಳಿಗೆ ಮೇ 22ಕ್ಕೆ ಹವಾಮಾನ ಇಲಾಖೆಯು ಆರೆಂಜ್ ಅಲರ್ಟ್ ಎಚ್ಚರಿಕೆ ನೀಡಿದೆ.
ರಾಜಧಾನಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ದಾವಣಗೆರೆ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ಕೊಪ್ಪಳ, ವಿಜಯಪುರ, ರಾಯಚೂರು ಜಿಲ್ಲೆಗಳಿಗೆ ಮುಂದಿನ ಎರಡ್ಮೂರು ದಿನಕ್ಕೆ, ಕರಾವಳಿ ಜಿಲ್ಲೆಗಳಿಗೆ ಇಡೀ ವಾರಕ್ಕೆ ಯೆಲ್ಲೋ ಅಲರ್ಟ್‌ನ ಎಚ್ಚರಿಕೆ ನೀಡಲಾಗಿದೆ. ರಾಜ್ಯದಲ್ಲಿ ಮೇ 23 ರಿಂದ ಮಳೆ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ರಾಜ್ಯದ 7ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯ ಆರ್ಭಟ ಮುಂದುವರಿದಿದ್ದು, ರಾಜಧಾನಿ ಬೆಂಗಳೂರು, ಹುಬ್ಬಳ್ಳಿ ಸೇರಿ ರಾಜ್ಯದ 7ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಭಾನುವಾರವೂ ಮಳೆಯಾಗಿದೆ.ಬೆಂಗಳೂರಿನಲ್ಲಿ ಸಂಜೆ ವೇಳೆ ಉತ್ತಮ ಮಳೆಯಾಗಿದ್ದು, ವಾಹನ ಸವಾರರು ಪರದಾಡುವಂತಾಯಿತು. ಧಾರವಾಡ ಜಿಲ್ಲೆಯ ಹಲವೆಡೆಯೂ ಗುಡುಗು-ಮಿಂಚು ಸಹಿತ ಮಳೆಯಾಗಿದೆ.
ಬಳ್ಳಾರಿ ಜಿಲ್ಲೆಯ ಹಲವೆಡೆ ಉತ್ತಮ ಮಳೆಯಾಗಿದ್ದು, ತಾಲೂಕಿನ ಗೊಲ್ಲರ ನಾಗೇನಹಳ್ಳಿ ಗ್ರಾಮದಲ್ಲಿ ಸಿಡಿಲು ಬಡಿದು 6 ಕುರಿಗಳು ಅಸು ನೀಗಿವೆ. ಬಳ್ಳಾರಿ ನಗರದಲ್ಲಿ 20ಕ್ಕೂ ಅಧಿಕ ಮರಗಳು ನೆಲಕ್ಕುರುಳಿವೆ. ವಿದ್ಯುತ್ ವ್ಯತ್ಯಯವಾಗಿದೆ. ಬಳ್ಳಾರಿ ಜಿಲ್ಲೆಯ ಸಂಡೂರು, ಸಿರುಗುಪ್ಪ ಹಾಗೂ ಕಂಪ್ಲಿಯಲ್ಲಿ ತುಂತುರು ಮಳೆಯಾಗಿದೆ.ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನಲ್ಲಿ ಭಾನುವಾರ ಬೆಳಗಿನ ಜಾವ ಮೂರ್ನಾಲ್ಕು ಗಂಟೆಗಳ ಕಾಲ ಭಾರೀ ಮಳೆ ಸುರಿದಿದೆ. ಬೆಳಗಿನ 2 ಗಂಟೆಗೆ ಆರಂಭವಾದ ಮಳೆ, 6 ಗಂಟೆಗೆ ವರೆಗೂ ನಿರಂತರ ಸುರಿದಿದೆ. ಉತ್ತರ ಕನ್ನಡದಲ್ಲಿ ಭಾನುವಾರ ಕೆಲವೆಡೆ ಗುಡುಗು ಮಿಂಚಿನ ಅಬ್ಬರದೊಂದಿಗೆ ಭಾರಿ ಮಳೆ ಸುರಿದರೆ, ಕೆಲವೆಡೆ ಸಾಧಾರಣ ಮಳೆಯಾಗಿದೆ.
ಚಿಕ್ಕಮಗಳೂರು, ರಾಯಚೂರು ಜಿಲ್ಲೆಯಾದ್ಯಂತ ವ್ಯಾಪಕ ಮಳೆಯಾಗುತ್ತಿದ್ದು, ಸಿಂಧನೂರು, ಮಸ್ಕಿ, ಲಿಂಗಸುಗೂರು ವ್ಯಾಪ್ತಿಯಲ್ಲಿ ಕಟಾವು ಮಾಡಿ ಜಮೀನಿನಲ್ಲಿ ಸಂಗ್ರಹಿಸಿಟ್ಟಿದ್ದ ಭತ್ತದ ಬೆಳೆಗಳು ಹಾನಿಗೀಡಾಗಿವೆ.
ಹವಾಮಾನ ವೈಪರೀತ್ಯ: ಸಿಎಂ ಚಿಕ್ಕಮಗಳೂರು, ಶಿವಮೊಗ್ಗ ಪ್ರವಾಸ ರದ್ದು
ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿಗದಿಯಾಗಿದ್ದ ಶಿವಮೊಗ್ಗ ಚಿಕ್ಕಮಗಳೂರು ಪ್ರವಾಸ ರದ್ದುಪಡಿಸಿಕೊಂಡು ಭಾನುವಾರ ಬೆಂಗಳೂರಲ್ಲೇ ಉಳಿದರು.ಮುಖ್ಯಮಂತ್ರಿಗಳು ಮೊದಲೇ ನಿಗದಿಯಾಗಿದ್ದ ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲಾ ಪ್ರವಾಸ ಕೈಗೊಂಡು ಜಿಲ್ಲೆಗಳ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕಿತ್ತು. ಇದಕ್ಕಾಗಿ ಭಾನುವಾರ ಬೆಳಗ್ಗೆ 10.30ಕ್ಕೆ ಎಚ್‌ಎಎಲ್ ವಿಮಾನ ನಿಲ್ದಾಣದಿಂದ ವಿಶೇಷ ವಿಮಾಣದಲ್ಲಿ ಪ್ರಯಾಣ ಬೆಳೆಸಬೇಕಿತ್ತು. ಕಾರ್ಯಕ್ರಮ ಮುಗಿಸಿ ಸಂಜೆ 5.30ಕ್ಕೆ ಬೆಂಗಳೂರಿಗೆ ವಾಪಸಾಗಬೇಕಿತ್ತು. ಆದರೆ, ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಪ್ರವಾಸ ಕಾರ್ಯಕ್ರಮ ರದ್ದುಪಡಿಸಿ ಬೆಂಗಳೂರಲ್ಲೇ ಉಳಿದರು ಎಂದು ಮುಖ್ಯಮಂತ್ರಿಗಳ ಕಚೇರಿ ತಿಳಿಸಿದೆ.