ಡೋಣಿ-ಕುಷ್ಟಗಿ ಮಾರ್ಗದ ಅಡೆತಡೆ ನಿವಾರಣೆಗೆ 3 ತಿಂಗಳ ಗಡುವು

KannadaprabhaNewsNetwork |  
Published : Jun 13, 2026, 02:30 AM IST
ಕುಷ್ಟಗಿಯಲ್ಲಿ ನಿರ್ಮಾಣವಾಗುತ್ತಿರುವ ಬೃಹತ್ 400ಕೆವಿ ವಿದ್ಯುತ್ ಉಪಕೇಂದ್ರದ ಕಾಮಗಾರಿ ಸ್ಥಳಕ್ಕೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ ಡಾ. ವಿ. ರಾಮ್ ಪ್ರಸಾತ್ ಮನೋಹರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. | Kannada Prabha

ಸಾರಾಂಶ

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ ಡಾ. ವಿ. ರಾಮ್ ಪ್ರಸಾತ್ ಮನೋಹರ್ ಪಟ್ಟಣದಲ್ಲಿ ನಿರ್ಮಾಣವಾಗುತ್ತಿರುವ ಬೃಹತ್ 400 ಕೆವಿ ವಿದ್ಯುತ್ ಉಪಕೇಂದ್ರದ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕುಷ್ಟಗಿ: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್)ದ ವ್ಯವಸ್ಥಾಪಕ ನಿರ್ದೇಶಕ ಡಾ. ವಿ. ರಾಮ್ ಪ್ರಸಾತ್ ಮನೋಹರ್ ಪಟ್ಟಣದಲ್ಲಿ ನಿರ್ಮಾಣವಾಗುತ್ತಿರುವ ಬೃಹತ್ 400 ಕೆವಿ (ಇಎಚ್‌ವಿ) ವಿದ್ಯುತ್ ಉಪಕೇಂದ್ರದ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಳಿಕ ಮಾತನಾಡಿದ ಅವರು, ಉತ್ತರ ಕರ್ನಾಟಕದಲ್ಲಿ ಉತ್ಪಾದನೆಯಾಗುವ ನವೀಕರಿಸಬಹುದಾದ ಹಸಿರು ವಿದ್ಯುತ್ ಅನ್ನು ರಾಜ್ಯ ಹಾಗೂ ದೇಶದ ಇತರೆ ಭಾಗಗಳಿಗೆ ಸಮರ್ಪಕವಾಗಿ ತಲುಪಿಸುವ ನಿಟ್ಟಿನಲ್ಲಿ ಅತ್ಯಂತ ನಿರ್ಣಾಯಕವಾಗಿರುವ, ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿ ನಿರ್ಮಾಣವಾಗುತ್ತಿರುವ ಬೃಹತ್ 400 ಕೆವಿ ವಿದ್ಯುತ್ ಉಪಕೇಂದ್ರದ ಕಾಮಗಾರಿಯನ್ನು ಮಾರ್ಚ್ 2027 ರೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಂತರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದರು.

ಡಾ. ರಾಮ್ ಪ್ರಸಾತ್ ಮನೋಹರ್ ಮಾತನಾಡಿ, ಈ ಬೃಹತ್ ಉಪಕೇಂದ್ರಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲು (ಸ್ಟೇಷನ್ ಚಾರ್ಜ್ ಮಾಡಲು) ಡೋಣಿ-ಕುಷ್ಟಗಿ ಫೀಡರ್ ಮಾರ್ಗ ಅತ್ಯಂತ ಪ್ರಮುಖವಾಗಿದೆ. ಈ ಮಾರ್ಗ ಹಸಿರು ಇಂಧನ ಸಾಗಣೆಯ (ಗ್ರೀನ್ ಎನರ್ಜಿ ಟ್ರಾನ್ಸ್‌ಪೋರ್ಟೇಶನ್) ಜೀವನಾಡಿಯಾಗಿದ್ದು, ಇದು ಪೂರ್ಣಗೊಂಡರಷ್ಟೇ ಉಪಕೇಂದ್ರದ ಕಾರ್ಯಾರಂಭ ಸಾಧ್ಯವಾಗಲಿದೆ. ಆದರೆ, ಈ ಪ್ರಮುಖ ವಿದ್ಯುತ್ ಮಾರ್ಗದ ಕಾಮಗಾರಿಗೆ ಕೆಲವೆಡೆ ಮಾರ್ಗಾಧಿಕಾರ ಅಥವಾ ರೈಟ್ ಆಫ್ ವೇ (ಆರ್‌ಒಡಬ್ಲ್ಯು) ಸಮಸ್ಯೆಗಳು ಅಡ್ಡಿಯಾಗಿವೆ. ಈ ಪ್ರಸರಣ ಮಾರ್ಗಕ್ಕೆ ಎದುರಾಗಿರುವ ಎಲ್ಲ ಅಡೆತಡೆಗಳನ್ನು ನಿವಾರಿಸಲು ಎಂಜಿನಿಯರಿಂಗ್ ತಂಡಗಳಿಗೆ ಇದೇ ವೇಳೆ 3 ತಿಂಗಳ ಗಡುವು ವಿಧಿಸಿದರು. ಭೂಮಿ ಮತ್ತು ಆರ್‌ಒಡಬ್ಲ್ಯು ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಲು ಅಗತ್ಯವಿರುವ ಎಲ್ಲ ಆಡಳಿತಾತ್ಮಕ ಮತ್ತು ಪೊಲೀಸ್ ಭದ್ರತಾ ಸಹಕಾರವನ್ನು ಒದಗಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದರು.

ಈ ಹೊಸ ಉಪಕೇಂದ್ರ ಸ್ಥಳೀಯ ಸೌರ ಮತ್ತು ಪವನ ವಿದ್ಯುತ್ ಸ್ಥಾವರಗಳಿಂದ ಉತ್ಪಾದನೆಯಾಗುವ ಬೃಹತ್ ಪ್ರಮಾಣದ ಹಸಿರು ಇಂಧನವನ್ನು ಸುಲಭವಾಗಿ ರಾಜ್ಯದ ಮುಖ್ಯ ಗ್ರಿಡ್‌ಗೆ ರವಾನಿಸುವ ಹೆಬ್ಬಾಗಿಲಾಗಿ ಕಾರ್ಯನಿರ್ವಹಿಸಲಿದೆ ಎಂದು ಅವರು ಅಧಿಕಾರಿಗಳಿಗೆ ಮನವರಿಕೆ ಮಾಡಿದರು.

ಉಪಕೇಂದ್ರದ ಕಾಮಗಾರಿಗಳು ಉತ್ತಮ ವೇಗದಲ್ಲಿ ಸಾಗುತ್ತಿವೆ. ಆದರೆ, ಫೀಡರ್ ಮಾರ್ಗವಿಲ್ಲದೆ ಸ್ಟೇಷನ್ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಹಸಿರು ಇಂಧನ ಸಾಗಣೆಗೆ ಡೋಣಿಯಿಂದ ಕುಷ್ಟಗಿ ವಿದ್ಯುತ್ ಮಾರ್ಗವೇ ಜೀವಾಳ. ಮುಂದಿನ ಮೂರು ತಿಂಗಳೊಳಗೆ ಸ್ಥಳೀಯವಾಗಿ ಎದುರಾಗಿರುವ ಎಲ್ಲ ಆರ್‌ಓಡಬ್ಲ್ಯು ಸಮಸ್ಯೆಗಳನ್ನು ಬಗೆಹರಿಸಲು ನಾವು ನಿಗಾ ವಹಿಸಲಿದ್ದೇವೆ ಎಂದು ತಿಳಿಸಿದರು.

ರಾಜ್ಯದಲ್ಲಿ ನವೀಕರಿಸಬಹುದಾದ ಇಂಧನವನ್ನು ಯಶಸ್ವಿಯಾಗಿ ಸಂಯೋಜಿಸಲು ನಮ್ಮ ಪ್ರಸರಣ ಯೋಜನೆಗಳ ತ್ವರಿತ ಅನುಷ್ಠಾನ ಅತ್ಯಗತ್ಯವಾಗಿದೆ. ಕುಷ್ಟಗಿ 400 ಕೆವಿ ಉಪಕೇಂದ್ರ ಹಾಗೂ ಅದಕ್ಕೆ ಸಂಪರ್ಕ ಕಲ್ಪಿಸುವ ಡೋಣಿ-ಕುಷ್ಟಗಿ ಮಾರ್ಗ ಕಲ್ಯಾಣ ಕರ್ನಾಟಕ ಭಾಗದ ವಿದ್ಯುತ್ ಚಿತ್ರಣವನ್ನೇ ಬದಲಾಯಿಸಲಿದೆ. ಕೆಪಿಟಿಸಿಎಲ್ ಮತ್ತು ಜಿಲ್ಲಾಡಳಿತದ ನಡುವಿನ ಅತ್ಯುತ್ತಮ ಸಮನ್ವಯದ ಮೂಲಕ, ನಾವು ನಿಗದಿಪಡಿಸಿರುವ ಮಾರ್ಚ್ 2027ರ ಗಡುವಿನೊಳಗೆ ಯೋಜನೆ ಪೂರ್ಣಗೊಳ್ಳುವುದನ್ನು ಖಚಿತಪಡಿಸಿಕೊಳ್ಳುತ್ತಿದ್ದೇವೆ. ಹಸಿರು ಇಂಧನ ಆಧಾರಿತ ಭವಿಷ್ಯವನ್ನು ನಿರ್ಮಿಸುವ ಸರ್ಕಾರದ ಬದ್ಧತೆಗೆ ಈ ತ್ವರಿತ ಆಡಳಿತಾತ್ಮಕ ಕ್ರಮಗಳೇ ಸಾಕ್ಷಿಯಾಗಿವೆ ಎಂದು ಕರ್ನಾಟಕ ಸರ್ಕಾರದ ಇಂಧನ ಸಚಿವರಾದ ಕೆ.ಜೆ.ಜಾರ್ಜ್ ಅವರು ತಿಳಿಸಿದ್ದು, ಈ ನಿಟ್ಟಿನಲ್ಲಿ ಕಾಮಗಾರಿಯ ಮಹತ್ವ ಅರಿತು ಅಗತ್ಯ ಸಹಕಾರ ನೀಡಬೇಕು ಎಂದು ಕೊಪ್ಪಳ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಡಾ. ವಿ. ರಾಮ್ ಪ್ರಸಾತ್ ಮನೋಹರ್ ಸೂಚಿಸಿದರು. ಜಿಲ್ಲಾಡಳಿತದೊಂದಿಗೆ ಜಂಟಿಯಾಗಿ ಕಾರ್ಯನಿರ್ವಹಿಸುವ ಮೂಲಕ ಮಾರ್ಚ್ 2027ರೊಳಗೆ ಸಂಪೂರ್ಣ ವ್ಯವಸ್ಥೆಯನ್ನು ಸಜ್ಜುಗೊಳಿಸಲಾಗುವುದು ಎಂದು ಅವರು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಾಲಿಬೆಟ್ಟ ವರ್ತಕರ ಸಂಘ ವಿಶ್ವ ಪರಿಸರ ದಿನಾಚರಣೆ
ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರ ಸುಧಾರಣೆ ಆಗ್ರಹ