ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಎಲ್ಲರೂ ಕಾಳಜಿ ವಹಿಸಿ: ಡಿಸಿ ಸಿ.ಎನ್. ಶ್ರೀಧರ್

KannadaprabhaNewsNetwork |  
Published : Jun 13, 2026, 02:15 AM IST
ಕಾರ್ಯಕ್ರಮವನ್ನ ಸಿ.ಎಸ್. ಶಿವನಗೌಡರ ಉದ್ಘಾಟಿಸಿದರು. | Kannada Prabha

ಸಾರಾಂಶ

ಮಕ್ಕಳು ಓದುವ ವಯಸ್ಸಿನಲ್ಲಿ ದಿಕ್ಕುತಪ್ಪಿದರೆ ಅದರ ದುಷ್ಪರಿಣಾಮಗಳನ್ನು ಸಮಾಜವು ದಿನನಿತ್ಯ ಕಾಣುತ್ತಿದೆ. ಮಕ್ಕಳಿಗೆ ಸರಿಯಾದ ಮಾರ್ಗದರ್ಶನ, ಶಿಕ್ಷಣ ಮತ್ತು ಉತ್ತಮ ಮೌಲ್ಯಗಳನ್ನು ನೀಡುವುದು ಅತ್ಯಂತ ಅಗತ್ಯವಾಗಿದೆ.

ಗದಗ: ಮಕ್ಕಳನ್ನು ಬಾಲಕಾರ್ಮಿಕರನ್ನಾಗದಂತೆ ತಡೆಯುವುದು ಪ್ರತಿಯೊಬ್ಬರ ಸಾಮಾಜಿಕ ಜವಾಬ್ದಾರಿಯಾಗಿದ್ದು, ಶಿಕ್ಷಣದಿಂದ ಯಾವುದೇ ಮಗು ವಂಚಿತವಾಗದಂತೆ ಎಲ್ಲರೂ ಕಾಳಜಿ ವಹಿಸಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ತಿಳಿಸಿದರು.ನಗರದ ಜಿಪಂ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಪಂ, ಕಾಮಿಕ ಇಲಾಖೆ, ಜಿಲ್ಲಾ ಕಾರ್ಮಿಕ ನಿರ್ಮೂಲನಾ ಯೋಜನಾ ಸೊಸೈಟಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಪಪೂ ಶಿಕ್ಷಣ ಇಲಾಖೆ ಹಾಗೂ ವಿವಿಧ ಇಲಾಖೆಗಳ ಆಶ್ರಯದಲ್ಲಿ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನವು ಕೇವಲ ಆಚರಣೆಯ ದಿನವಲ್ಲ, ಸಮಾಜವಾಗಿ ನಾವು ಪುನಃ ಎಚ್ಚರಿಸಿಕೊಳ್ಳಬೇಕಾದ ಸಂದರ್ಭವಾಗಿದೆ ಎಂದರು.

ಮಕ್ಕಳು ಓದುವ ವಯಸ್ಸಿನಲ್ಲಿ ದಿಕ್ಕುತಪ್ಪಿದರೆ ಅದರ ದುಷ್ಪರಿಣಾಮಗಳನ್ನು ಸಮಾಜವು ದಿನನಿತ್ಯ ಕಾಣುತ್ತಿದೆ. ಮಕ್ಕಳಿಗೆ ಸರಿಯಾದ ಮಾರ್ಗದರ್ಶನ, ಶಿಕ್ಷಣ ಮತ್ತು ಉತ್ತಮ ಮೌಲ್ಯಗಳನ್ನು ನೀಡುವುದು ಅತ್ಯಂತ ಅಗತ್ಯವಾಗಿದೆ. ಪ್ರತಿಯೊಬ್ಬರೂ ತಮ್ಮ ಸುತ್ತಮುತ್ತ ಬಾಲಕಾರ್ಮಿಕರು ಕಂಡುಬಂದಲ್ಲಿ ತಕ್ಷಣ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳುವಂತೆ ನೋಡಿಕೊಳ್ಳಬೇಕು ಎಂದರು.ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಸ್. ಶಿವನಗೌಡರ ಮಾತನಾಡಿ, ಶಿಕ್ಷಣವು ಪ್ರತಿಯೊಂದು ಮಗುವಿನ ಮೂಲಭೂತ ಹಕ್ಕಾಗಿದ್ದು, ಯಾವುದೇ ಕಾರಣಕ್ಕೂ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಶಿಕ್ಷಣದಿಂದ ದೂರವಾದ ಮಕ್ಕಳು ಹಲವಾರು ಸಾಮಾಜಿಕ ಅನಿಷ್ಟಗಳತ್ತ ತಳ್ಳಲ್ಪಡುವ ಅಪಾಯವಿದೆ. ಬಾಲಕಾರ್ಮಿಕತೆ, ಮಾದಕ ವಸ್ತುಗಳ ಸಾಗಾಟ, ಅಪರಾಧ ಚಟುವಟಿಕೆಗಳು ಸೇರಿದಂತೆ ವಿವಿಧ ದುಷ್ಪರಿಣಾಮಗಳಿಗೆ ಮಕ್ಕಳು ಬಲಿಯಾಗುವ ಸಾಧ್ಯತೆ ಹೆಚ್ಚಾಗುತ್ತದೆ ಎಂದು ಎಚ್ಚರಿಸಿದರು.

ಈ ವೇಳೆ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ, ಮಕ್ಕಳ ಶಿಕ್ಷಣದ ಹಕ್ಕು, ಮಾದಕ ವ್ಯಸನ ನಿಯಂತ್ರಣ ಹಾಗೂ ಮಕ್ಕಳ ಸುರಕ್ಷತೆ ಕುರಿತು ಅರಿವು ಮೂಡಿಸಲಾಯಿತು. ಸಮಾಜದ ಎಲ್ಲ ವರ್ಗಗಳ ಸಹಭಾಗಿತ್ವದಿಂದ ಬಾಲ ಕಾರ್ಮಿಕ ಮುಕ್ತ ಮತ್ತು ವ್ಯಸನಮುಕ್ತ ಸಮಾಜ ನಿರ್ಮಾಣ ಸಾಧ್ಯ ಎಂಬ ಸಂದೇಶವನ್ನು ನೀಡಲಾಯಿತು.

ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಜಯದೇವಿ ಅಂದಪ್ಪ ಕವಲೂರು ಮಾತನಾಡಿದರು. ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನದ ಅಂಗವಾಗಿ ಕಾಲೇಜು ಮತ್ತು ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಚಿತ್ರಕಲೆ, ಭಾಷಣ, ಪ್ರಬಂಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಜಿಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಡಾ. ನಂದಾ ಹಣಬರಹಟ್ಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ರಾಧಾ ಮಣ್ಣೂರ, ಶಾಲಾ ಶಿಕ್ಷಣ ಮತ್ತು ಸಾಕ್ಷಾರತಾ ಇಲಾಖೆಯ ಉಪನಿರ್ದೇಶಕ ಆರ್.ಎಸ್. ಬುರಡಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಜಯಶ್ರೀ ಆರ್., ಮೆಹಬೂಬ ತುಂಬರಮಟ್ಟಿ, ವಸಂತ ಮಡ್ಲೂರ, ಜಯಶ್ರೀ ಆರ್. ಕವಲೂರ, ಆರ್.ಜಿ. ಕಲ್ಲೂರ, ಸುಷ್ಮಾ, ಸಂದೇಶ ಚ. ಪಾಟೀಲ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಶಿಕ್ಷಕರು, ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು ಇದ್ದರು. ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿ ಶ್ರೀಶೈಲ ಸೋಮನಕಟ್ಟಿ ಸ್ವಾಗತಿಸಿದರು. ಮಲ್ಲಪ್ಪ ಹೊಸಳ್ಳಿ ನಿರೂಪಿಸಿ, ವಂದಿಸಿದರು.

ಕಾರ್ಯಕ್ರಮಕ್ಕೂ ಮೊದಲು ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನದ ಅಂಗವಾಗಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಡಾ. ನಂದಾ ಹಣಬರಟ್ಟಿ ಅವರು ರಚಿಸಿರುವ ಬಾಲಕಾರ್ಮಿಕತೆ ತಡೆಗಟ್ಟುವ ಕುರಿತು ಘೋಷಣೆಗಳು, ಸಾಮಾಜಿಕ ಜಾಗೃತಿ ಮತ್ತು ಅರಿವು ಮೂಡಿಸುವ ಚಿತ್ರಗಳ ಪ್ರದರ್ಶನ ಎಲ್ಲರ ಕಣ್ಮನ ಸೆಳೆದವು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

40 ವರ್ಷ ಹಿಂದೆ ಸತ್ತವರ ಹೆಸರಲ್ಲಿ ಜಮೀನು ಮಾರಾಟ!
ಚೊಂಬು ಹಿಡಿದು ನಿತ್ಯ ಬಯಲು ಶೌಚಕ್ಕೆ ಹೋಗ್ತಾರೆ!