ಚೊಂಬು ಹಿಡಿದು ನಿತ್ಯ ಬಯಲು ಶೌಚಕ್ಕೆ ಹೋಗ್ತಾರೆ!

KannadaprabhaNewsNetwork |  
Published : Jun 13, 2026, 02:15 AM IST
ವ್ಯಕ್ತಿಯೋರ್ವ ಚೊಂಬು ಹಿಡಿದು ಶೌಚಕ್ಕೆ ತೆರಳುತ್ತಿರುವುದು. | Kannada Prabha

ಸಾರಾಂಶ

ತಾಲೂಕಿನ ಗ್ರಾಮಗಳು ಸ್ವಚ್ಛ ಭಾರತ ಮಿಷನ್‌ ಅಡಿಯಲ್ಲಿ 2018-19ರಲ್ಲಿಯೇ ಬಯಲು ಬಹಿರ್ದೆಸೆ ಮುಕ್ತ ಎಂದು ಘೋಷಣೆಯಾಗಿವೆ. ಆದರೆ ಸದ್ಯದ ಗ್ರಾಮಗಳ ಚಿತ್ರಣವೇ ಬೇರೆ ಇದ್ದು, ಬಯಲು ಬಹಿರ್ದೆಸೆ ಇನ್ನೂ ಜೀವಂತವಾಗಿದೆ.

ಮಹೇಶ ಛಬ್ಬಿ

ಮುಳಗುಂದ: ತಾಲೂಕಿನ ಯಾವುದೇ ಹಳ್ಳಿಗೆ ಬೆಳಗ್ಗೆ ಹೋದರೂ ಚೊಂಬು ಹಿಡಿದು ಬಯಲಿಗೆ ಹೋಗುವವರು ನಿತ್ಯ ಕಾಣಸಿಗುತ್ತಾರೆ. ಇದರಿಂದ ಹಳ್ಳಿ ಹತ್ತಿರದ ರಸ್ತೆಗಳು ಬಯಲು ಶೌಚದಿಂದ ಗಬ್ಬೆದ್ದು ನಾರುತ್ತಿವೆ. ಇತ್ತ ಸಾರ್ವಜನಿಕ ಶೌಚಾಲಯಗಳೂ ನಿರ್ವಹಣೆ ಇಲ್ಲದೇ ಪಾಳು ಬಿದ್ದಿವೆ.

ತಾಲೂಕಿನ ಗ್ರಾಮಗಳು ಸ್ವಚ್ಛ ಭಾರತ ಮಿಷನ್‌ ಅಡಿಯಲ್ಲಿ 2018-19ರಲ್ಲಿಯೇ ಬಯಲು ಬಹಿರ್ದೆಸೆ ಮುಕ್ತ ಎಂದು ಘೋಷಣೆಯಾಗಿವೆ. ಆದರೆ ಸದ್ಯದ ಗ್ರಾಮಗಳ ಚಿತ್ರಣವೇ ಬೇರೆ ಇದ್ದು, ಬಯಲು ಬಹಿರ್ದೆಸೆ ಇನ್ನೂ ಜೀವಂತವಾಗಿದೆ.ತಾಲೂಕಿನ ಪ್ರತಿ ಗ್ರಾಮಗಳಲ್ಲಿ ನಿರ್ಮಿಸಲಾದ ಸಾರ್ವಜನಿಕ ಶೌಚಾಲಯಗಳು ಸರಿಯಾಗಿ ನಿರ್ವಹಣೆ ಇಲ್ಲದೇ ಹಾಳಾಗಿವೆ. ಕೆಲವೆಡೆ ನೀರಿನ ಕೊರತೆ, ಸ್ವಚ್ಛತಾ ವ್ಯವಸ್ಥೆಯ ಬಗ್ಗೆ ಗ್ರಾಪಂ ಅಧಿಕಾರಿಗಳ ನಿರ್ಲಕ್ಷ್ಯದ ಕಾರಣ ಶೌಚಾಲಯಗಳು ಬೀಗ ಹಾಕಿದ್ದು, ಜನರು ಸಾಮಾನ್ಯವಾಗಿ ಬಹಿರ್ದೆಸೆಗೆ ಬಯಲನ್ನೇ ಬಳಸುವಂಥ ಸ್ಥಿತಿ ನಿರ್ಮಾಣವಾಗಿದೆ.ತಾಲೂಕಿನಲ್ಲಿ 39518 ಕುಟುಂಬಗಳಿವೆ. ಆ ಪೈಕಿ 38888 ಕುಟುಂಬಗಳಿಗೆ ವೈಯಕ್ತಿಕ ಶೌಚಾಲಯಗಳಿವೆ. ಉಳಿದ 630 ಕುಟುಂಬಗಳಿಗೆ ಶೌಚಾಲಯಗಳೇ ಇಲ್ಲ. ಇದರಿಂದ ಬಯಲು ಬಹಿರ್ದೆಸೆ ಅನಿವಾರ್ಯವಾಗಿದೆ.

ನಿರ್ವಹಣೆ ಇಲ್ಲ: ತಾಲೂಕಿನ 27 ಗ್ರಾಪಂಗಳ 59 ಗ್ರಾಮಗಳು 2018-19ರಲ್ಲಿ ಬಯಲು ಬಹಿರ್ದೆಸೆ ಮುಕ್ತ ಗ್ರಾಮಗಳೆಂದು ಘೋಷಣೆಯಾದವು. ಆದರೆ, ಅದನ್ನು ನಿರಂತರವಾಗಿ ಕಾಯ್ದುಕೊಳ್ಳದೇ, ಅಧಿಕಾರಿಗಳ ಪರಿಶೀಲನೆ, ಮೇಲ್ವಿಚಾರಣೆಯ ನಿರ್ಲಕ್ಷ್ಯದಿಂದ ಬಯಲು ಶೌಚ ಮುಂದುವರಿದಿದೆ. ತಾಲೂಕಿನ ಪ್ರತಿ ಗ್ರಾಮಗಳ ಸಮೀಪದ ರಸ್ತೆಗಳು ಬಯಲು ಬಹಿರ್ದೆಸೆಯಿಂದ ಗಬ್ಬೆದ್ದು ನಾರುತ್ತಿದ್ದು, ರಸ್ತೆಯಲ್ಲಿ ಸಂಚರಿಸುವಾಗ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವಂಥ ಸ್ಥಿತಿ ನಿರ್ಮಾಣವಾಗಿದೆ. ಸೊಳ್ಳೆಗಳ ತಾಣವಾಗಿ ಮಾರ್ಪಟ್ಟು, ಪರಿಸರಮಾಲಿನ್ಯ ಆಗುವ ಜತೆಗೆ ರೋಗರುಜಿನಗಳು ಹರಡುತ್ತಿವೆ.

ಜಾಗೃತಿ ಅಗತ್ಯ: ಬಯಲು ಬಹಿರ್ದೆಸೆಯಿಂದ ಆಗುವ ದುಷ್ಪರಿಣಾಮಗಳ ಕುರಿತು ಶೌಚಾಲಯಗಳ ಬಳಕೆ, ನಿರ್ವಹಣೆ ಹಾಗೂ ವೈಯಕ್ತಿಕ ಶೌಚಾಲಯ ನಿರ್ಮಾಣ ಕುರಿತು ತಾಪಂ ಅಧಿಕಾರಿಗಳು, ಗ್ರಾಪಂ ಅಧಿಕಾರಿಗಳು, ಜನಪ್ರತಿನಿಧಿಗಳು ಹೆಚ್ಚು, ಹೆಚ್ಚು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನ ನಡೆಸಬೇಕು. ಜತೆಗೆ ಅಧಿಕಾರಿಗಳು ಶೌಚಾಲಯಗಳ ಬಳಕೆ, ನೀರಿನ ಸೌಲಭ್ಯ, ತ್ಯಾಜ್ಯ ನಿರ್ವಹಣೆ ಸೇರಿದಂತೆ ಸಮಗ್ರ ಪರಿಶೀಲನೆ ನಡೆಸಿದಾಗ ಮಾತ್ರ ಬಯಲು ಬಹಿರ್ದೆಸೆ ಮುಕ್ತ ಗ್ರಾಮವಾಗಲು ಸಾಧ್ಯವಾಗುತ್ತದೆ ಎನ್ನುತ್ತಾರೆ ಪ್ರಜ್ಞಾವಂತರು.ಜಾಗೃತಿ ಮೂಡಲಿ: ಗ್ರಾಮಗಳ ಸ್ವಚ್ಛತೆ ಕೇವಲ ಅಧಿಕಾರಿ, ಜಪ್ರತಿನಿಧಿಗಳಿಂದ ಮಾತ್ರ ಸಾಧ್ಯವಿಲ್ಲ. ಗ್ರಾಮಗಳ ಸ್ವಚ್ಛತೆ ಪರಿಕಲ್ಪನೆ ಜನರಲ್ಲಿಯೂ ಮೂಡಬೇಕು. ಈ ಬಗ್ಗೆ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಡಂಗೂರ ಸಾರಲಾಗಿದೆ. ಬಾಕಿ ಉಳಿದಿರುವ ವೈಯಕ್ತಿಕ ಶೌಚಾಲಯಗಳನ್ನು, ಸ್ಥಳವಿರುವ ಕುಟುಂಬಗಳನ್ನು ಗುರುತಿಸಿ ಶೌಚಾಲಯ ನಿರ್ಮಿಸಲು ಆದ್ಯತೆ ನೀಡಲಾಗುತ್ತಿದೆ ಎಂದು ತಾಪಂ ಇಒ ಎಚ್‌.ಎಸ್. ಜೆನಗಾ ತಿಳಿಸಿದರು.

ನಿರ್ವಹಣೆ ಇಲ್ಲ: ಬಯಲು ಬಹಿರ್ದೆಸೆ ಮುಕ್ತ ಗ್ರಾಮ ಮಾಡುವಲ್ಲಿ ಗದಗ ತಾಲೂಕು ಆಡಳಿತ ಸಂಪೂರ್ಣ ವಿಫಲವಾಗಿದೆ. ಗ್ರಾಪಂ ಮಟ್ಟದಲ್ಲಿ ಈ ಬಗ್ಗೆ ಅಧಿಕಾರಿಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಸ್ವಚ್ಛ ಭಾರತ ಮಿಷನ್‌ ಅಡಿಯಲ್ಲಿ ಗ್ರಾಮಗಳಲ್ಲಿ ಎಲ್ಲಿ ಲಭ್ಯತೆ ಇದೆಯೋ ಅಲ್ಲಿ ಶೌಚಾಲಯಗಳನ್ನು ನಿರ್ಮಿಸುತ್ತಿಲ್ಲ. ಬೇಕಾಬಿಟ್ಟಿಯಾಗಿ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಅವು ನಿರ್ವಹಣೆ ಇಲ್ಲದೇ ಕೆಲವೇ ಕೆಲ ದಿನಗಳಲ್ಲಿ ಬಂದ್ ಆಗುತ್ತಿವೆ ಎಂದು ನೀಲಗುಂದ ಗ್ರಾಮದ ಯುವ ಮುಖಂಡ ರವಿ ವಗ್ಗನವರ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

40 ವರ್ಷ ಹಿಂದೆ ಸತ್ತವರ ಹೆಸರಲ್ಲಿ ಜಮೀನು ಮಾರಾಟ!
ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಎಲ್ಲರೂ ಕಾಳಜಿ ವಹಿಸಿ: ಡಿಸಿ ಸಿ.ಎನ್. ಶ್ರೀಧರ್