ಹಾನಗಲ್ಲ: ನಮ್ಮೂರು ನಮ್ಮವರು ಸಂಘಟನೆಯ ಹೋರಾಟವನ್ನು ಎಫ್‌ಐಆರ್ ತಂತ್ರ ಬಳಸಿ ಹತ್ತಿಕ್ಕಲು ಸಾಧ್ಯವಿಲ್ಲ, ಹಾನಗಲ್ಲ ಶಾಸಕರು ಈಗ ನಮ್ಮನ್ನು ಕೆಣಕಿದ್ದಾರೆ, ನಾವು ಸ್ವಾಭಿಮಾನಿಗಳು, ಹೊರಗಿನಿಂದ ಬಂದ ಶಾಸಕರಿಗೆ ಈ ತಾಲೂಕಿನ ಜನರ ಬಗ್ಗೆ ಕಾಳಜಿ ಪ್ರೀತಿ ಇಲ್ಲವೇ ಇಲ್ಲ, ಇನ್ನು ನಾವು ಯಾವುದೇ ಷಡ್ಯಂತ್ರಕ್ಕೆ ಬಗ್ಗುವುದಿಲ್ಲ ಎಂದು ನಮ್ಮೂರು ನಮ್ಮವರು ನಾಯಕ, ಹೈಕೋರ್ಟ್ ವಕೀಲ ಸಂದೀಪ ಪಾಟೀಲ ಕಿಡಿಕಾರಿದರು. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನ ಜಾಗೃತಿ ಮೂಡಿಸುವ ಒಂದು ಕಿರು ಚಿತ್ರಕ್ಕೆ ಹಾನಗಲ್ಲ ಸರ್ಕಾರಿ ಆಸ್ಪತ್ರೆಯ ಒಳಾಂಗಣದ ಚಿತ್ರೀಕರಣ ಮಾಡಲಾಗಿದೆ ಎಂದು ಚಿತ್ರೀಕರಣದ ಎಲ್ಲ ಜವಾಬ್ದಾರಿ ಹೊತ್ತವರ ಮೇಲೆ ಎಫ್‌ಐಆರ್ ದಾಖಲಿಸುವ ಬದಲು, ಕಿರುಚಿತ್ರದಲ್ಲಿ ನಟಿಸಿದ ಕಾಲೇಜು ವಿದ್ಯಾರ್ಥಿನಿಗೆ ನೋಟಿಸ್ ನೀಡಿರುವ ಸಂಗತಿ ತೀರ ಖೇದಕರ. ಈ ಮೂಲಕ ಜನರಿಗೆ ಬೆದರಿಕೆ ಒಡ್ಡಿ ಭಯದ ವಾತಾವರಣ ಸೃಷ್ಟಿಸುತ್ತಿದ್ದಾರೆ. ಚಿತ್ರೀಕರಣ ಮಾಡಲಾಗಿದೆಯೇ ಹೊರತು ದರೋಡೆ, ಕಳ್ಳತನ ಮಾಡಿಲ್ಲ. ಶೇಷಗಿರಿಯ ಸಿ.ಎಂ. ಉದಾಸಿ ಕಲಾಕ್ಷೇತ್ರದಲ್ಲಿ ಈ ಕಿರುಚಿತ್ರ ಬಿಡುಗಡೆಗೊಳಿಸಿದ್ದಕ್ಕೆ ಅವರ ಮೇಲೆಯೂ ಶಾಸಕರು ಹರಿಹಾಯ್ದಿದ್ದಾರೆ. ಇಂತಹ ಶಾಸಕರಿಂದ ಹಾನಗಲ್ಲ ತಾಲೂಕಿನಲ್ಲಿ ಎಂತಹ ವಾತಾವರಣ ನಿರೀಕ್ಷಿಸಲು ಸಾಧ್ಯ. ಸಾರ್ವಜನಿಕರ ಆಸ್ಪತ್ರೆಯಲ್ಲಿ ಚಿತ್ರೀಕರಣ ಮಾಡಿರುವುದರಲ್ಲಿ ತಪ್ಪೇನಿದೆ? ಅದು ಸಾರ್ವಜನಿಕ ಆಸ್ತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.ಈ ವರೆಗೆ ನಾವು ನಮ್ಮೂರು ನಮ್ಮವರು ಸಂಘಟನೆ ಮೂಲಕ ಸಾಮಾಜಿಕ ಜಾಗೃತಿಗೆ ಮುಂದಾಗಿದ್ದೆವು. ಈಗ ಅನಿವಾರ್ಯವಾಗಿ ನಾವು ಹೋರಾಟದ ಹಾದಿ ಹಿಡಿಯುತ್ತೇವೆ. ಪ್ರತಿ ಹಳ್ಳಿಗೆ ತೆರಳಿ ತಾಲೂಕಿನಲ್ಲಿ ನಡೆದ ಕರ್ಮಕಾಂಡಗಳನ್ನು ಜನರ ಮುಂದಿಡುತ್ತೇವೆ. ಹಾನಗಲ್ಲ ತಾಲೂಕಿನವರೇ ಶಾಸಕರಾಗಿದ್ದರೆ ಇಂತಹ ವಾತಾವರಣ ಇರುತ್ತಿರಲಿಲ್ಲ. ಇಂತಹವರು ಮಂತ್ರಿಯಾದರೆ ಅದು ಇಡೀ ಹಾವೇರಿ ಜಿಲ್ಲೆಗೆ ಎಂತಹ ಆಘಾತಕಾರಿ ವಾತಾವರಣ ತಂದಿಡಬಹುದು. ನಮ್ಮ ತಾಲೂಕಿನ ಹಿರೇತನ ಹೊರಗಿನವರೆಗೆ ಬೇಡ ಎಂಬುದು ಈಗ ಎಲ್ಲರಿಗೂ ಅರ್ಥವಾಗಿದೆ. ಇವರನ್ನು ತಾಲೂಕಿನಿಂದ ಹೊರ ಹಾಕಿ ರಾಜಕೀಯ ಮುಕ್ತ ಮಾಡುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಕಿಡಿ ಕಾರಿದರು.ಹಾನಗಲ್ಲ ಆಸ್ಪತ್ರೆಯಲ್ಲಿ ವೈದ್ಯರಿಲ್ಲ, ಔಷಧಿ ಇಲ್ಲ, ಬೆಂಕಿ ಹತ್ತಿ ಕರಕಲಾದ ಕೊಠಡಿ ದುರಸ್ತಿ ಮಾಡಲಾಗುತ್ತಿಲ್ಲ. ಇದೆಲ್ಲವನ್ನೂ ಬಿಟ್ಟು ಯಾರದೋ ಮೇಲೆ ಎಫ್‌ಐಆರ್ ಹಾಕಲು ಆಸ್ಪತ್ರೆ ಸಿಬ್ಬಂದಿ ಬಳಸಿಕೊಳ್ಳುತ್ತಿರುವುದು ಯಾವ ನಡೆಯಾಗಿದೆ? ನಮ್ಮ ಜನರಿಗಾಗಿ ನಾವು ಜೈಲಿಗೆ ಹೋಗಲೂ ಸಿದ್ಧ. ಹಾನಗಲ್ಲ ತಾಲೂಕಿನಲ್ಲಿ ಯಾರದೇ ಮೇಲೆ ಇಂತಹ ಆರೋಪ, ಎಫ್‌ಐಆರ್ ದಾಖಲಾದರೆ ಅದಕ್ಕೆ ನಾನೇ ಮುಂದೆ ನಿಂತು ಅವರ ಸಹಾಯಕ್ಕೆ ಬರುತ್ತೇನೆ. ಯಾರೂ ಭಯಪಡುವ ಅಗತ್ಯವಿಲ್ಲ ಎಂದು ಸಂದೀಪ ಪಾಟೀಲ ಭರವಸೆ ನೀಡಿದರು.ಜೆಡಿಎಸ್ ತಾಲೂಕು ಅಧ್ಯಕ್ಷ ರಾಮನಗೌಡ ಪಾಟೀಲ, ತಾಪಂ ಮಾಜಿ ಸದಸ್ಯ ಸಿದ್ದನಗೌಡ ಪಾಟೀಲ, ಮುಖಂಡ ವಾಸಣ್ಣ ಮೂಡಿ ಮಾತನಾಡಿದರು.