3 ಬಿಡಾಡಿ ದನಗಳನ್ನು ಮಾರಿದ ಅಧಿಕಾರಿಗಳು: ಆರೋಪ

KannadaprabhaNewsNetwork | Published : Aug 2, 2024 12:49 AM

ಸಾರಾಂಶ

ಶಿರಾ ನಗರಸಭೆ ಸಾಮಾನ್ಯ ಸಭೆ

ಕನ್ನಡಪ್ರಭ ವಾರ್ತೆ ಶಿರಾ ನಗರದ ರಸ್ತೆಗಳಲ್ಲಿ ಓಡಾಡುತ್ತಿದ್ದ ಬಿಡಾಡಿ ಹಸುಗಳನ್ನು ನಗರಸಭೆ ಅಧಿಕಾರಿಗಳು ವಶಕ್ಕೆ ಪಡೆದು ಘನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಹಲವು ತಿಂಗಳ ಹಿಂದೆ ಬಿಡಲಾಗಿತ್ತು. ಅದರಲ್ಲಿ ೩ ರಿಂದ ೫ ಹಸುಗಳು ಇದ್ದವು, ಅದರಲ್ಲಿ ೨ ಸತ್ತು ಹೋಗಿವೆ, ಉಳಿದ ೨ ಹಸುಗಳು ತಿಂಗಳಿನಿಂದ ಕಣ್ಮರೆಯಾಗಿವೆ. ನಮಗೆ ಬಂದ ಮಾಹಿತಿಯಂತೆ ಅಧಿಕಾರಿಗಳು ಅವುಗಳನ್ನು ಮಾರಿಕೊಂಡಿದ್ದಾರೆ ಎನ್ನಲಾಗುತ್ತಿದ್ದು, ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮ ತೆಗೆದುಕೊಳ್ಳಬೇಕೆಂದು ಸದಸ್ಯ ಅಂಜಿನಪ್ಪ ಹಾಗೂ ರಂಗರಾಜು ಒತ್ತಾಯಿಸಿದರು. ನಗರಸಭೆ ಸಭಾಂಗಣದಲ್ಲಿ ಅಧ್ಯಕ್ಷೆ ಪೂಜಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯ ಅಂಜಿನಪ್ಪ ಹಾಗೂ ರಂಗರಾಜು ಮಾತನಾಡುತ್ತ ಘನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಹಸುಗಳು ಸಗಣಿ ಇಟ್ಟು ಗಲೀಜು ಮಾಡುತ್ತಿದ್ದ ಕಾರಣ ಗೇಟ್ ತೆಗೆದು ಅವುಗಳನ್ನು ಹೊರಗೆ ಹೊಡೆಯಲಾಗಿದೆ ಎಂದು ಆರೋಗ್ಯ ನಿರೀಕ್ಷಕ ಮಾರೇಗೌಡ ಹೇಳಿದಾಗ, ಆಕ್ರೋಶ ಗೊಂಡ ಸದಸ್ಯರು ಮೂರು ವರ್ಷದಿಂದ ಗಲೀಜು ಮಾಡದ ಹಸುಗಳು ಈಗ ಗಲೀಜು ಮಾಡುತ್ತಿವೆಯೇ? ನೀವು ಯಾರಿಗೆ ಮಾರಾಟ ಮಾಡಿದ್ದೀರಿ ಎನ್ನುವುದು ನಮ್ಮ ಬಳಿ ಮಾಹಿತಿ ಇದೆ ಎಂದಾಗ ಪೌರಾಯುಕ್ತರು ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದರು. ಸರ್ವೆ ನಂತರ ಹೊಸ ನಿಲ್ದಾಣ:

ಶಿರಾ ನಗರದ ಖಾಸಗಿ ಬಸ್ ನಿಲ್ದಾಣದ ಜಾಗ ಸುಮಾರು ೨೦ ಗುಂಟೆ ಒತ್ತುವರಿಯಾಗಿರುವುದು ಕಂಡುಬಂದಿದ್ದು, ಶೀಘ್ರವಾಗಿ ಜಾಗವನ್ನು ಡಿಜಿಟಲ್ ಸರ್ವೇ ಮಾಡಿಸಿ ಒತ್ತುವರಿಯಾಗಿರುವ ಜಾಗವನ್ನು ವಶಪಡಿಸಿಕೊಂಡು ಬಸ್ ನಿಲ್ದಾಣವನ್ನು ಪುನರ್ ನಿರ್ಮಿಸಬೇಕೆಂದು ನಗರಸಭಾ ಅಧ್ಯಕ್ಷರು ಹಾಗೂ ಸದಸ್ಯರು ಪಕ್ಷತೀತವಾಗಿ ಆಗ್ರಹಿಸಿದರು. ನಗರದ ಖಾಸಗಿ ಬಸ್ಸು ನಿಲ್ದಾಣ ಅವ್ಯವಸ್ಥೆಯ ಆಗರವಾಗಿದೆ, ಮಳೆ ಬಂದರೆ ಒಡಾಡಲು ಆಗುವುದಿಲ್ಲ ಹಣ ಇದ್ದರೂ ಸಹ ಕಾಮಗಾರಿ ಕೈಗೊಂಡಿಲ್ಲ, ಒಂದು ತಿಂಗಳೊಳಗೆ ಕಾಮಗಾರಿ ಪ್ರಾರಂಭಿಸದಿದ್ದರೆ ನಗರಸಭೆಗೆ ಬೀಗ ಹಾಕಿ ಪ್ರತಿಭಟಿಸುವುದಾಗಿ ನಗರಸಭೆ ಸದಸ್ಯ ಆರ್.ರಾಮು ಎಚ್ಚರಿಸಿದರು. ಡಾ.ಸಿ.ಎಂ.ರಾಜೇಶ್ ಗೌಡ ಅವರು ಹಿಂದೆ ಶಾಸಕರಾಗಿದ್ದ ಸಮಯದಲ್ಲಿ ಖಾಸಗಿ ಬಸ್ಸು ನಿಲ್ದಾಣವನ್ನು ನವೀಕರಿಸಲು ಅನುದಾನವನ್ನು ತೆಗೆದಿರಿಸಿದ್ದರು. ಆದರೆ ಅದನ್ನು ಬೇರೆ ಕಾಮಗಾರಿಗಳಿಗೆ ಬಳಕೆ ಮಾಡಿಕೊಳ್ಳಲಾಗಿದೆ. ನಿಲ್ದಾಣದಲ್ಲಿ ಡಾಂಬರೀಕರಣ ಮಾಡುವುದಾಗಿ ಹೇಳಲಾಗಿತ್ತು. ಈಗ ಹಣ ಇದ್ದರು ಸಹ ಕಾಮಗಾರಿ ಪ್ರಾರಂಭಿಸಿಲ್ಲ, ದಿನ ನಿತ್ಯ ಸಾವಿರಾರು ಪ್ರಯಾಣಿಕರು ಬಸ್ ನಿಲ್ದಾಣದಲ್ಲಿ ಮೂಲಭೂತ ಸೌಲಭ್ಯ ಇಲ್ಲದೆ ಪರದಾಡುತ್ತಿರುವುದು ಸಾಮಾನ್ಯ ಸಂಗತಿಯಾಗಿದೆ. ನಗರಸಭೆಗೆ ಜನ ಹಿಡಿ ಶಾಪ ಹಾಕುತ್ತಿದ್ದಾರೆ ಎಂದರು. ಸದಸ್ಯರ ಹೇಳಿಕೆಗೆ ಉತ್ತರಿಸಿದ ನಗರಸಭಾ ಆಯುಕ್ತರು ಬಸ್ ನಿಲ್ದಾಣದ ಜಾಗವನ್ನು ಪುನರ್ ಪರಿಶೀಲನೆ ಮಾಡಿ ಹೊಸದಾಗಿ ನಿರ್ಮಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

ಅಧ್ಯಕ್ಷರ ಕ್ಷಮೆ ಕೇಳಿದ ಪೌರಾಯುಕ್ತರು:

ಶಿರಾ ೩೦ನೇ ವಾರ್ಡಿನ ವಿದ್ಯಾನಗರದಲ್ಲಿ ಶಾಸಕರ ಅನುದಾನದಲ್ಲಿ ಕುವೆಂಪು ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆಯಾಗಿದ್ದು, ಈ ಶುದ್ಧ ಕುಡಿಯುವ ನೀರಿನ ಘಟಕದ ಬಳಿ ಹಾಕಲಾಗಿದ್ದ ಪ್ರಚಾರ ಫಲಕದಲ್ಲಿ ನಗರಸಭೆ ಅಧ್ಯಕ್ಷರ ಪೊಟೋವನ್ನು ಕೆಲವು ಸದಸ್ಯರ ಒತ್ತಾಯದ ಮೇರೆಗೆ ಪೌರಾಯುಕ್ತರು ತೆಗೆಸಿದ್ದಾರೆ. ಇದು ಶಿರಾ ನಗರದ ೩೧ ನಗರಸಭಾ ಸದಸ್ಯರಿಗೆ ಮಾಡಿದ ಅವಮಾನವಾಗಿದೆ. ಇದಕ್ಕೆ ಪೌರಾಯುಕ್ತರು ಕ್ಷಮೆ ಕೇಳಲೇ ಬೇಕು ಎಂದು ನಗರಸಭೆ ಅಧ್ಯಕ್ಷೆ ಪೂಜಾ ಪೆದ್ದರಾಜು ಆಗ್ರಹಿಸಿದಾಗ ಇದಕ್ಕೆ ಮಣಿದ ಪೌರಾಯುಕ್ತ ರುದ್ರೇಶ್ ಕ್ಷಮೆ ಕೇಳಿದರು. ಸಭೆಯಲ್ಲಿ ನಗರಸಭೆ ಅಧ್ಯಕ್ಷೆ ಪೂಜಾ ಪೆದ್ದರಾಜು ಅಧ್ಯಕ್ಷತೆ ವಹಿಸಿದ್ದರು, ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಪಿ.ಶಿವಶಂಕರಪ್ಪ, ಪೌರಾಯುಕ್ತ ರುದ್ರೇಶ್ ಸೇರಿದಂತೆ ನಗರಸಭಾ ಸದಸ್ಯರು ಭಾಗವಹಿಸಿದ್ದರು.

Share this article