ಕನ್ನಡಪ್ರಭ ವಾರ್ತೆ ಕೋಲಾರ
ತಾಯಿಯ ಹಾಲು ಮಗುವಿಗೆ ಸಂಜೀವಿನಿ ಇದ್ದಂತೆ, ರೋಗ ನಿರೋಧಕ ಅಂಶಗಳನ್ನು ಒಳಗೊಂಡಿದೆ. ತಾಯಂದಿರು ಮಕ್ಕಳಿಗೆ ಕನಿಷ್ಠ 6 ತಿಂಗಳಾದರೂ ಹಾಲನ್ನು ಕುಡಿಸಬೇಕು ಎಂದು ಜಿಲ್ಲಾಧಿಕಾರಿ ಅಕ್ರಂಪಾಷ ಹೇಳಿದರು.ನಗರದ ಜಿಲ್ಲಾ ಎಸ್.ಎನ್.ಆರ್. ಆಸ್ಪತ್ರೆಯಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ತಾಯಿ ಮತ್ತು ಮಕ್ಕಳ ವಿಭಾಗದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರಾಜ್ಯ ಸರ್ಕಾರವು ಪ್ರಸಕ್ತ ಸಾಲಿನಲ್ಲಿ ಈ ಕಾರ್ಯಕ್ರಮದ ಪ್ರಯುಕ್ತ ಕೊರತೆ ಕೊನೆಗೊಳಿಸಿ ಸರ್ವರಿಗೂ ಸ್ತನ್ಯ ಪಾನದ ಬೆಂಬಲ ನೀಡಿ ಎಂಬ ವಿಶೇಷ ಘೋಷಣೆ ಪ್ರಕಟಿಸಿದೆ ಎಂದರು.
ಇಂದು ಶೇ.60 ತಾಯಂದಿರು ಮಕ್ಕಳಿಗೆ ಸ್ತನ್ಯಪಾನ ಮಾಡಿಸುತ್ತಾರೆ. ಉಳಿದವರು ಮೌಢ್ಯತೆಗೆ ಒಳಗಾಗಿ ಮಗುವಿಗೆ ಹಾಲು ಕುಡಿಸುವುದನ್ನು ನಿಲ್ಲಿಸುತ್ತಾರೆ. ತಮ್ಮ ದೈಹಿಕ ಫಿಟ್‌ನೆಸ್ ಹಾಳಾಗುತ್ತದೆ ಎಂದು 2-3 ತಿಂಗಳಿಗೆ ಹಾಲು ಕುಡಿಸುವುದನ್ನು ಸ್ಥಗಿತಗೊಳಿಸಿ, ಕೃತಕವಾದ ಹಾಲಿನ ಪುಡಿಗೆ ಮೋರೆ ಹೋಗುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳು ಅನೇಕ ಕಾಯಿಲೆಗಳಿಗೆ ತುತ್ತಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದರು.ಕೋಲಾರದ ಜಿಲ್ಲಾ ಎಸ್.ಎನ್.ಆರ್ ಆಸ್ಪತ್ರೆಯಲ್ಲಿ ಇರುವಂತ ಸೌಲಭ್ಯಗಳು ಬೇರೆಲ್ಲೂ ಇಲ್ಲ. ತಾಯಿ ಮತ್ತು ಮಗುವಿನ ಪ್ರತ್ಯೇಕ ವಿಭಾಗ ಇದ್ದು, ಡಿಜಿಟಲ್ ಸೆಂಟರ್ ಒಳಗೊಂಡಿದೆ. ಗರ್ಭಿಣಿ ಮತ್ತು ಬಾಣಂತಿಯರಿಗೆ ಅಗತ್ಯವಾದ ವೈದ್ಯಕೀಯ ಪೌಷ್ಠಿಕಾಂಶದ ಸೌಲಭ್ಯಗಳನ್ನು ಒಳಗೊಂಡಿದೆ. ಗರ್ಭಿಣಿ ಮತ್ತು ಬಾಣಂತಿಯರಿಗೆ ಎಲ್ಲ ರೀತಿಯ ಮೂಲಭೂತ ಸೌಲಭ್ಯ ಕಲ್ಪಿಸಿದೆ. ಸರ್ಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ.ಎನ್.ಸಿ.ನಾರಾಯಣಸ್ವಾಮಿ ಮಾತನಾಡಿ, ಬಾಣಂತಿ ಎಂದು ಹಿಂದಿನ ಕಾಲದ ಪಥ್ಯ ಇರುವುದನ್ನು ಬಿಟ್ಟು ಗುಣಮಟ್ಟದ ಪೌಷ್ಠಿಕಾಂಶದ ಆಹಾರ ಸೇವಿಸಿದಾಗ ಮಗುವಿಗೆ ಉತ್ತಮ ಪೌಷ್ಠಿಕಾಂಶದ ಹಾಲು ಕುಡಿಸಿದಂತಾಗುತ್ತದೆ. ಇದರಿಂದ ಉತ್ತಮವಾದ ಆರೋಗ್ಯ ಹಾಗೂ ಬೆಳವಣಿಗೆಗೆ ಪೂರಕವಾಗಲಿದೆ. ಕಾಲ ಕಾಲಕ್ಕೆ ಮಗುವಿಗೆ ವ್ಯಾಕ್ಸಿನ್ ಹಾಕಿಸುವುದನ್ನು ತಪ್ಪಿಸಬಾರದು. ಮಗುವಿಗೆ ಯಾವುದೇ ಸೋಂಕು ತಗುಲದಂತೆ ಜಾಗೃತಿವಹಿಸಬೇಕು ಎಂದು ಕಿವಿಮಾತು ತಿಳಿಸಿದರು.ಮಕ್ಕಳ ತಜ್ಞ ಡಾ.ಬೀರೇಗೌಡ, ಜಿಲ್ಲಾ ಶಸ್ತ್ರ ಚಿಕಿತ್ಸಕಿ ಡಾ.ಮಮತ, ಆರ್.ಎಂ.ಒ ಡಾ.ಬಾಲಸುಂದರ್, ಮಕ್ಕಳ ತಜ್ಞ ಡಾ.ಕಮಲಾಕರ್ ಕೆ.ಆರ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಂ.ಪ್ರೇಮ್, ಶೋಷ್ರಣಾ ಅಧೀಕ್ಷಕಿ ಎಸ್.ವಿಜಯಮ್ಮ ಇದ್ದರು.