ಉಡುಪಿ: ಗಾಳಿ ಮಳೆಗೆ 4 ಮನೆ ಸಂಪೂರ್ಣ ನಾಶ

KannadaprabhaNewsNetwork | Published : Aug 2, 2024 12:49 AM

ಸಾರಾಂಶ

ಭಾರಿ ಮಳೆಗೆ ಜಿಲ್ಲೆಯಲ್ಲಿ ಸುಮಾರು 15 ಮನೆಗಳಿಗೆ, 7 ಕೃಷಿಕರ ತೋಟಗಳಿಗೆ ಮತ್ತು 1 ಜಾನುವಾರು ಕೊಟ್ಟಿಗೆ ಸೇರಿದಂತೆ ಸುಮಾರು 24.23 ಲಕ್ಷ ರು. ಗಳಷ್ಟು ಹಾನಿ ಸಂಭವಿಸಿದೆ

ಕನ್ನಡಪ್ರಭ ವಾರ್ತೆ ಉಡುಪಿ

ಜಿಲ್ಲೆಯಲ್ಲಿ ಬುಧವಾರ ರಾತ್ರಿ ಸುರಿದ ಭಾರಿ ಮಳೆಗೆ 4 ಮನೆಗಳು ಸಂಪೂರ್ಣ ನಾಶವಾಗಿದ್ದು, ಒಬ್ಬ ರೈತರ ಅಡಕೆ ತೋಟ ಸಂಪೂರ್ಣ ನೆಲಕಚ್ಚಿ ಲಕ್ಷಾಂತರ ರು.ಗಳ ನಷ್ಟ ಸಂಭಸಿದೆ.

ಜಿಲ್ಲೆಯಲ್ಲಿ ಸುಮಾರು 15 ಮನೆಗಳಿಗೆ, 7 ಕೃಷಿಕರ ತೋಟಗಳಿಗೆ ಮತ್ತು 1 ಜಾನುವಾರು ಕೊಟ್ಟಿಗೆ ಸೇರಿದಂತೆ ಸುಮಾರು 24.23 ಲಕ್ಷ ರು. ಗಳಷ್ಟು ಹಾನಿ ಸಂಭವಿಸಿದೆ.

ಕುಂದಾಪುರ ತಾಲೂಕಿನಲ್ಲಿ ಮೊಳಹಳ್ಳಿ ಗ್ರಾಮದಲ್ಲಿ ಬೀಸಿದ ಗಾಳಿಗೆ ಪ್ರದೀಪ, ರತ್ನಾವತಿ ಶೆಡ್ತಿ ಮತ್ತು ರುಕ್ಮಿಣಿ ಶೆಡ್ತಿ ಅವರ ಮನೆಗಳು ಸಂಪೂರ್ಣ ಕುಸಿದಿದ್ದು, ತಲಾ 5 ಲಕ್ಷ ರು.ಗಳಿಗೂ ಅಧಿಕ ನಷ್ಟ ಉಂಟಾಗಿದೆ.

ಕಾರ್ಕಳ ತಾಲೂಕಿನ ಮಿಯಾರು ಗ್ರಾಮದ ಸಂಜೀವ ಚಪರ ಎಂಬವರ ವಾಸದ ಮನೆ ಸಂಪೂರ್ಣ ಹಾನಿಗೊಂಡಿದ್ದು, ಸುಮಾರು 3 ಲಕ್ಷ ರು. ನಷ್ಟ ಅಂದಾಜಿಸಲಾಗಿದೆ. ಕುಂದಾಪುರ ತಾಲೂಕಿನ ಹಾಲಾಡಿ ಗ್ರಾಮದ ಅರುಣ ಎಂ. ಶೆಟ್ಟಿ ಅವರ ತೋಟಗಾರಿಕೆ ಬೆಳೆಗೆ 1 ಲಕ್ಷ ರು.ಗೂ ಅಧಿಕ ನಷ್ಟವಾಗಿದೆ.

ಕುಂದಾಪುರ ತಾಲೂಕೊಂದರಲ್ಲಿಯೇ 7 ಮನೆಗಳಿಗೆ 16.40 ಲಕ್ಷ ರು. ನಷ್ಟವಾಗಿದ್ದರೆ, 5 ಕುಟುಂಬಗಳ ತೋಟಗಳಿಗೆ 1.48 ಲಕ್ಷ ರು. ಹಾನಿಯಾಗಿದೆ. ಒಂದು ಜಾನುವಾರು ಕೊಟ್ಟಿಗೆಗೆ 5 ಸಾವಿರ ರು.ಗಳಷ್ಟು ಹಾನಿಯಾಗಿದೆ.

ಕಾರ್ಕಳ ತಾಲೂಕಿನಲ್ಲಿ 6 ಮನೆಗಳಿಗೆ 4.55 ಲಕ್ಷ ರು. ಮತ್ತು 3 ರೈತರ ತೋಟಗಳಿಗೆ 40 ಸಾವಿರ ರು., ಉಡುಪಿ ತಾಲೂಕಿನ 2 ಮನೆಗಳಿಗೆ 95 ಸಾವಿರ ರು.ಗೂ ಅಧಿಕ ನಷ್ಟ ಉಂಟಾಗಿದೆ.

ಗುರುವಾರ ಮುಂಜಾನೆ ವರೆಗೆ 24 ಗಂಟೆಗಳಲ್ಲಿ 154.90 ಮಿ.ಮೀ. ಮಳೆ ದಾಖಲಾಗಿದೆ. ತಾಲೂಕುವಾರು ಕಾರ್ಕಳ 179, ಕುಂದಾಪುರ 179.70, ಉಡುಪಿ 100.50, ಬೈಂದೂರು 139.70, ಬ್ರಹ್ಮಾವರ 104.40, ಕಾಪು 132.30, ಹೆಬ್ರಿ 180.50 ಮಿ.ಮೀ. ಮಳೆ ಆಗಿದೆ.

--------ರೆಂಜಾಳ ಗ್ರಾಮದಲ್ಲಿ ರಾಜ್ಯದ ಅತೀಹೆಚ್ಚು ಮಳೆ

ರಾಜ್ಯದಲ್ಲಿಯೇ ಅತೀ ಹೆಚ್ಚು ಮಳೆ ಕಾರ್ಕಳ ತಾಲೂಕಿನ ರೆಂಜಾಳ ಗ್ರಾಮದಲ್ಲಿ 319.50 ಮಿ.ಮೀ. ಮಳೆಯಾಗಿದೆ. ಉಳಿದಂತೆ ಸಾಣೂರು ಗ್ರಾಮದಲ್ಲಿ 289.50 ಮಿ.ಮೀ., ಕುಂದಾಪುರ ತಾಲೂಕಿನ ಮಡಾಮಕ್ಕಿ ಗ್ರಾಮದಲ್ಲಿ 278.50 ಮಿ.ಮೀ. ಮಳೆಯಾಗಿದೆ.

Share this article