3 ಕೈದಿಗಳಿಗೆ ಏಕಾಂತ ಬಂಧನದಿಂದ ಮುಕ್ತಿ

KannadaprabhaNewsNetwork |  
Published : Sep 15, 2025, 01:00 AM IST
ಹೈಕೋರ್ಟ್‌ | Kannada Prabha

ಸಾರಾಂಶ

ಗಲ್ಲು ಶಿಕ್ಷೆಗೆ ಒಳಗಾದ ಮೂವರು ಕೊಲೆ ಅಪರಾಧಿಗಳನ್ನು ಏಕಾಂತ ಬಂಧನದಲ್ಲಿರಿಸಿದ (ಸಾಲಿಟರಿ ಕನ್ಫೈನ್‌ಮೆಂಟ್‌) ಧಾರವಾಡ ಜೈಲಧಿಕಾರಿಗಳ ಕ್ರಮ ಆಕ್ಷೇಪಿಸಿರುವ ಹೈಕೋರ್ಟ್‌, ಕೈದಿಗಳನ್ನು ಕೂಡಲೇ ಬೇರೆ ಕೋಣೆಗೆ ವರ್ಗಾಯಿಸುವಂತೆ ತಾಕೀತು ಮಾಡಿದೆ.

ವೆಂಕಟೇಶ್‌ ಕಲಿಪಿ

ಕನ್ನಡಪ್ರಭ ವಾರ್ತೆ ಬೆಂಗಳೂರು

ಸುಪ್ರೀಂ ಕೋರ್ಟ್‌ ತೀರ್ಪಿಗೆ ವಿರುದ್ಧವಾಗಿದ್ದರೂ ‘ಕರ್ನಾಟಕ ಕಾರಾಗೃಹಗಳು ಮತ್ತು ಸುಧಾರಣಾ ಸೇವೆಗಳ ಕೈಪಿಡಿ-2021ರ ನಿಯಮ 767(ಐ) ಅನುಸರಿಸಿ ಗಲ್ಲು ಶಿಕ್ಷೆಗೆ ಒಳಗಾದ ಮೂವರು ಕೊಲೆ ಅಪರಾಧಿಗಳನ್ನು ಏಕಾಂತ ಬಂಧನದಲ್ಲಿರಿಸಿದ (ಸಾಲಿಟರಿ ಕನ್ಫೈನ್‌ಮೆಂಟ್‌) ಧಾರವಾಡ ಜೈಲಧಿಕಾರಿಗಳ ಕ್ರಮ ಆಕ್ಷೇಪಿಸಿರುವ ಹೈಕೋರ್ಟ್‌, ಕೈದಿಗಳನ್ನು ಕೂಡಲೇ ಬೇರೆ ಕೋಣೆಗೆ ವರ್ಗಾಯಿಸುವಂತೆ ತಾಕೀತು ಮಾಡಿದೆ.

ಅಲ್ಲದೆ, ವಿಚಾರಣಾ ನ್ಯಾಯಾಲಯ ಗಲ್ಲು ಶಿಕ್ಷೆ ಪ್ರಕಟಗೊಂಡ ದಿನಾಂಕದಿಂದಲೇ (ಶಿಕ್ಷೆಯನ್ನು ಹೈಕೋರ್ಟ್‌ ಕಾಯಂಗೊಳಿಸುವವರೆಗೆ ಕಾಯದೆ) ಹೆಚ್ಚಿನ ಭದ್ರತೆ ವಾರ್ಡ್‌/ಸೆಲ್‌ಗಳಲ್ಲಿ ಕೈದಿಗಳನ್ನು ಬಂಧಿಸಿಡಲು ಅವಕಾಶ ಕಲ್ಪಿಸಿರುವ ‘ಕರ್ನಾಟಕ ಕಾರಾಗೃಹಗಳು ಮತ್ತು ಸುಧಾರಣಾ ಸೇವೆಗಳ ಕೈಪಿಡಿ-2021ರ ನಿಯಮ 767(ಐ)ಗೆ ಸೂಕ್ತ ಬದಲಿ ನಿಯಮ ರೂಪಿಸುವ/ಸೇರಿಸುವ ಕೆಲಸ ಶೀಘ್ರ ಮಾಡಬೇಕು ಎಂದು ಸರ್ಕಾರಕ್ಕೆ ಆದೇಶಿಸಿದೆ.

ಗಲ್ಲು ಶಿಕ್ಷೆ ಪ್ರಶ್ನಿಸಿ ಗಜೇಂದ್ರಗಡ ತಾಲೂಕಿನ ಲಕ್ಕಲಕಟ್ಟಿ ನಿವಾಸಿಗಳಾದ ಶಿವಪ್ಪ (30), ರವಿ (21), ರಮೇಶ್‌ (18) ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಅಲ್ಲದೆ, ತಮ್ಮನ್ನು ಏಕಾಂತ ಬಂಧನದಲ್ಲಿರಿಸಿರುವ ಧಾರವಾಡ ಜೈಲಾಧಿಕಾರಿಗಳ ಕ್ರಮ ಪ್ರಶ್ನಿಸಿ ಮಧ್ಯಂತರ ಅರ್ಜಿ ಸಲ್ಲಿಸಿದರು.

ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌.ಆರ್‌.ಕೃಷ್ಣ ಕುಮಾರ್‌ ಅವರ ನೇತೃತ್ವದ ವಿಭಾಗೀಯ ಪೀಠ, ಗಲ್ಲು ಶಿಕ್ಷೆಗೆ ಒಳಗಾದ ಕೈದಿ, ಅಪರಾಧ ನಿರ್ಣಯ ಮತ್ತು ಶಿಕ್ಷೆಯ ತೀರ್ಪಿನ ವಿರುದ್ಧದ ಸವಾಲಿಗೆ ಸಂಬಂಧಿಸಿ ಕಾನೂನಿನಡಿ ಲಭ್ಯವಿರುವ ಎಲ್ಲ ಪರಿಹಾರಗಳನ್ನು ಬಳಸಿದ ನಂತರ ಆತನನ್ನು ಗಲ್ಲು ಶಿಕ್ಷೆಯ ಕೈದಿ ಎಂದು ಕರೆಯಬಹುದಾಗಿದೆ. ಪ್ರತ್ಯೇಕ ಸೆಲ್‌ ಮತ್ತು ಏಕಾಂತ ಬಂಧನ ನಡುವೆ ಯಾವುದೇ ವ್ಯತ್ಯಾಸವಿಲ್ಲ ಎಂಬುದಾಗಿ ಸುನೀಲ್‌ ಬಾತ್ರಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ ಎಂದು ಅಭಿಪ್ರಾಯಪಟ್ಟಿತು.

ಪ್ರಕರಣದಲ್ಲಿ ಕೊಲೆ ಅಪರಾಧಕ್ಕೆ ಗದಗ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಲಯ 2025ರ ಜ.29ರಂದು ಗಲ್ಲು ಶಿಕ್ಷೆ ವಿಧಿಸಿದೆ. ಈ ಆದೇಶ ಪ್ರಶ್ನಿಸಿ ಮೇಲ್ಮನವಿದಾರರು ಹೈಕೋರ್ಟ್‌ಗೆ ಕ್ರಿಮಿನಲ್‌ ಮೇಲ್ಮನವಿ ಸಲ್ಲಿಸಿದ್ದಾರೆ. ಗಲ್ಲು ಶಿಕ್ಷೆ ಕಾಯಂಗೊಳಿಸಲು ಕೋರಿ ಹೈಕೋರ್ಟ್‌ ರಿಜಿಸ್ಟ್ರಾರ್ ಜನರಲ್‌, ಕ್ರಿಮಿನಲ್‌ ರೆಫರ್ಡ್‌ ಕೇಸ್‌ ದಾಖಲಿಸಿದ್ದಾರೆ. ಅವುಗಳನ್ನು ವಿಚಾರಣೆ ನಡೆಸಿ ಅಂತಿಮ ತೀರ್ಪು ಪ್ರಕಟವಾಗುವರೆಗೂ ಮೇಲ್ಮನವಿದಾರರನ್ನು ಗಲ್ಲು ಶಿಕ್ಷೆಯ ಕೈದಿ ಎಂಬುದಾಗಿ ಹೇಳಲಾಗದು ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಜತೆಗೆ, ಕರ್ನಾಟಕ ಕಾರಾಗೃಹಗಳು ಮತ್ತು ಸುಧಾರಣಾ ಸೇವೆಗಳ ಕೈಪಿಡಿ-2021ರ ನಿಯಮ 767(ಐ), ಸುನೀಲ್‌ ಬಾತ್ರಾ ಮತ್ತು ಆರ್‌ಇ-1382 ಕೈದಿಗಳ ಅಮಾನವೀಯ ಸ್ಥಿತಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ಗೆ ಹೊರಡಿಸಿದ ತೀರ್ಪಿಗೆ ವಿರುದ್ಧವಾಗಿದೆ. ಹೀಗಿದ್ದರೂ ಮೇಲ್ಮನವಿದಾರ ಆರೋಪಿಗಳನ್ನು ಪ್ರತ್ಯೇಕ/ಹೆಚ್ಚಿನ ಭದ್ರತಾ ಸೆಲ್‌ನಲ್ಲಿ ಬಂಧಿಸುವ ಕ್ರಮ ಸಮರ್ಥನೆ ಮಾಡಿಕೊಳ್ಳಲು ಜೈಲಧಿಕಾರಿಗಳು ಕೈಪಿಡಿ-2021ರ ನಿಯಮ 767(ಐ) ಮುಂದಿಟ್ಟಿರುವ ಕ್ರಮವನ್ನು ಒಪ್ಪಲು ಸಾಧ್ಯವಿಲ್ಲ. ಆದ್ದರಿಂದ ಕೂಡಲೇ ಅರ್ಜಿದಾರರನ್ನು ಪ್ರತ್ಯೇಕ ಕೋಣೆಯಿಂದ ವರ್ಗಾಯಿಸಬೇಕು. ನಿಯಮ 767(ಐ)ಗೆ ಸೂಕ್ತ ಬದಲಿ ನಿಯಮ ರೂಪಿಸುವ ಕೆಲಸವನ್ನು ರಾಜ್ಯದ ಸರ್ಕಾರದ ಸಂಬಂಧಪಟ್ಟ ಪ್ರಾಧಿಕಾರದ ಅಧಿಕಾರಿಗಳು ಶೀಘ್ರ ಮಾಡಬೇಕು ಎಂದು ನಿರ್ದೇಶಿಸಿದೆ.

ಪ್ರಕರಣದ ಹಿನ್ನೆಲೆ:

ಗಲ್ಲು ಶಿಕ್ಷೆಯಾದ ಕೂಡಲೇ ತಮ್ಮನ್ನು ಜೈಲಿನ ಪ್ರತ್ಯೇಕ ಕೋಣೆಯಲ್ಲಿ ಏಕಾಂತ ಬಂಧನದಲ್ಲಿಸಲಾಗಿದೆ. ಜೈಲಿನ ಇತರೆ ಕೈದಿಗಳೊಂದಿಗೆ ಮಾತನಾಡಲು/ಸೇರಲು ಬಿಡುತ್ತಿಲ್ಲ. ಊಟವನ್ನೂ ಕೋಣೆಗೆ ತಂದು ಕೊಡಲಾಗುತ್ತಿದೆ. ಕೋಣೆ ಕೇವಲ 10 ಅಡಿ ಅಗಲ, 10 ಅಡಿ ಉದ್ದವಿದೆ. ಶೌಚಾಲಯ ಹೊಂದಿಕೊಂಡಿದ್ದರೂ ನೀರಿನ ಕೊಳವೆ ಸಂಪರ್ಕವಿಲ್ಲ. ಹೊರಗಡೆಯಿಂದ ನೀರು ತರಬೇಕು. ಗ್ರಂಥಾಲಯಕ್ಕೆ ಹೋಗಬೇಕಾದರೆ ಜೈಲು ಸಿಬ್ಬಂದಿಗೆ ಮಾಹಿತಿ ನೀಡಬೇಕು. ಗ್ರಂಥಾಲಯಕ್ಕೆ ಹೋದರೆ 10 ನಿಮಿಷದಲ್ಲಿ ಪುಸ್ತಕ ಆಯ್ಕೆ ಮಾಡಿಕೊಂಡು ಕೋಣೆಗೆ ಹಿಂದಿರುಗಬೇಕು. ಇದು ಸಂವಿಧಾನದ ಪರಿಚ್ಛೇದ 21ರ (ಜೀವಿಸುವ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕು) ಉಲ್ಲಂಘನೆ. ಆದ್ದರಿಂದ ತಮ್ಮ ಏಕಾಂತ ಬಂಧನದಿಂದ ಬಿಡುಗಡೆಗೊಳಿಸಲು ಆದೇಶಿಸುವಂತೆ ಕೋರಿದ್ದರು.

ಜೈಲು ಅಧಿಕಾರಿಗಳ ಪರ ಸರ್ಕಾರಿ ಅಭಿಯೋಜಕರು, 767ರ ಅನ್ವಯ ಗಲ್ಲು ಶಿಕ್ಷೆಗೆ ಗುರಿಯಾಗಿರುವುದರಿಂದ ಮೇಲ್ಮನವಿದಾರರನ್ನು ಹೆಚ್ಚಿನ ಭದ್ರತೆಯಿರುವ ಪ್ರತ್ಯೇಕ ಸೆಲ್‌ನಲ್ಲಿ ಇರಿಸಲಾಗಿದೆ. ಅದು ಏಕಾಂತ ಬಂಧನವಲ್ಲ ಎಂದು ಸಮರ್ಥಿಸಿಕೊಂಡಿದ್ದರು.

PREV

Recommended Stories

ಟಿಕೆಟ್ ಆಯ್ತು, ಮಲ್ಟಿಪ್ಲೆಕ್ಸ್‌ಗಳಲ್ಲಿ ತಿಂಡಿ ದರ ಇಳಿಸಿ : ಸಿನಿ ಪ್ರಿಯರು
ಮಂಗಳಮುಖಿಯರು, ಮಹಿಳೆಯರಿಗೆ ಸರ್ಕಾರದಿಂದಲೇ ಉಚಿತ ಆಟೋ