ವಣಗೇರಾದಲ್ಲಿ ದೇವಸ್ಥಾನದ ದೇಣಿಗೆಯಿಂದ 3 ಶಾಲಾ ಕೊಠಡಿ ನಿರ್ಮಾಣ

KannadaprabhaNewsNetwork |  
Published : Feb 25, 2025, 12:47 AM IST
ಪೋಟೊ24ಕೆಎಸಟಿ1: ಕುಷ್ಟಗಿ ತಾಲೂಕಿನ ವಣಗೇರಾ ಗ್ರಾಮದಲ್ಲಿ ಶಿವನಮ್ಮ ದೇವಿ ದೇವಸ್ಥಾನ ದೇಣಿಗೆಯಿಂದ ನಿರ್ಮಾಣವಾದ ಮೂರು ಶಾಲಾ ಕೊಠಡಿಗಳು. | Kannada Prabha

ಸಾರಾಂಶ

ಶಿವನಮ್ಮ ದೇವಸ್ಥಾನಕ್ಕೆ ದೇಣಿಗೆ ಬಂದಿರುವ ಹಣದಿಂದ ಮೂರು ಶಾಲಾ ಕೊಠಡಿಗಳನ್ನು ನಿರ್ಮಾಣ ಮಾಡಿರುವ ಕುಷ್ಟಗಿ ತಾಲೂಕಿನ ವಣಗೇರಾ ಗ್ರಾಮಸ್ಥರ ಶಿಕ್ಷಣ ಪ್ರೇಮ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಕುಷ್ಟಗಿ: ದೇವಸ್ಥಾನಕ್ಕೆ ದೇಣಿಗೆ ಬಂದಿರುವ ಹಣದಿಂದ ಮೂರು ಶಾಲಾ ಕೊಠಡಿಗಳನ್ನು ನಿರ್ಮಾಣ ಮಾಡಿರುವ ತಾಲೂಕಿನ ವಣಗೇರಾ ಗ್ರಾಮಸ್ಥರ ಶಿಕ್ಷಣ ಪ್ರೇಮ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ತಾಲೂಕಿನ ವಣಗೇರಾ ಗ್ರಾಮದ ಶಿವನಮ್ಮ ದೇವಿಯ ದೇವಸ್ಥಾನದ ಅಭಿವೃದ್ಧಿಯ ಸಲುವಾಗಿ ಸಂಗ್ರಹಿಸಿಟ್ಟಿರುವ ದೇಣಿಗೆಯ ಹಣವನ್ನು ಶಾಲಾ ಕೊಠಡಿ ನಿರ್ಮಾಣಕ್ಕೆ ಬಳಸಿದ್ದಾರೆ. ಸುಮಾರು ₹25 ಲಕ್ಷ ವೆಚ್ಚದಲ್ಲಿ ಮೂರು ಕೊಠಡಿಗಳನ್ನು ನಿರ್ಮಿಸಿದ್ದು, ಫೆ. 25ರಂದು ಉದ್ಘಾಟನೆ ಸಮಾರಂಭ ನಡೆಯಲಿದೆ.

ಕುಷ್ಟಗಿ ತಾಲೂಕಿನ ವಣಗೇರಾ ಗ್ರಾಮ ಕುಷ್ಟಗಿ ಪಟ್ಟಣದಿಂದ ಐದು ಕಿಲೋಮೀಟರ್‌ ದೂರದಲ್ಲಿದ್ದು, ಚಿಕ್ಕ ಗ್ರಾಮವಾಗಿದೆ. ಇಲ್ಲಿರುವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಎಲ್‌ಕೆಜಿ ಹಾಗೂ ಯುಕೆಜಿ ತರಗತಿಗಳು ಮಂಜೂರಾಗಿದೆ. ಆದರೆ ಶಾಲೆಯಲ್ಲಿ ಕೊಠಡಿಗಳ ಕೊರತೆ ಇತ್ತು. ಅದರ ಜತೆಗೆ ಹೊಸ ಕೊಠಡಿಗಳ ನಿರ್ಮಾಣಕ್ಕೆ ಸಮರ್ಪಕವಾದ ಸ್ಥಳಾವಕಾಶ ಇರಲಿಲ್ಲ, ಆದ ಕಾರಣ ಶಿವನಮ್ಮ ದೇವಿ ದೇವಸ್ಥಾನದ ಟ್ರಸ್ಟ್‌ನವರು ಹಾಗೂ ಗ್ರಾಮಸ್ಥರು ಸಭೆ ನಡೆಸಿ, ನಮ್ಮೂರ ಶಾಲೆಗೆ ಮಂಜೂರಾದ ಎಲ್‌ಕೆಜಿ ಹಾಗೂ ಯುಕೆಜಿ ತರಗತಿಗಳನ್ನು ಬಿಟ್ಟುಕೊಡುವುದು ಬೇಡ, ನಮ್ಮ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯಾಗಬೇಕು ಎಂಬ ದೃಷ್ಟಿಯಿಂದ ದೇವಸ್ಥಾನದ ಟ್ರಸ್ಟ್‌ನಲ್ಲಿ ಕೂಡಿಟ್ಟಿರುವ ಹಣವನ್ನು ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಬಳಸಲು ನಿರ್ಧರಿಸಿದರು. ಅದೇ ಗ್ರಾಮದ ಹೊರವಲಯದಲ್ಲಿರುವ ಸರ್ಕಾರದ ಗೋಮಾಳ ಜಾಗದಲ್ಲಿ ಮೂರು ಶಾಲಾ ಕೊಠಡಿಗಳನ್ನು ನಿರ್ಮಿಸಿದರು.

ಇಂದು ಕೊಠಡಿಗಳ ಉದ್ಘಾಟನೆ: ಈ ನೂತನ ಕೊಠಡಿಗಳನ್ನು ಫೆ. 25ರಂದು ಸಂಜೆ 4 ಗಂಟೆಗೆ ಶಾಸಕ ದೊಡ್ಡನಗೌಡ ಪಾಟೀಲ ಉದ್ಘಾಟಿಸುವರು. ಮಾಜಿ ಸಚಿವ ಅಮರೇಗೌಡ ಬಯ್ಯಾಪುರ, ಕಾಡಾ ನಿಗಮದ ಅಧ್ಯಕ್ಷ ಹಸನಸಾಬ ದೋಟಿಹಾಳ, ಮಾಜಿ ಶಾಸಕ ಕೆ. ಶರಣಪ್ಪ ವಕೀಲರು, ತಳುವಗೇರಾ ಗ್ರಾಪಂ ಅಧ್ಯಕ್ಷೆ ಹುಲಿಗೆಮ್ಮ ಹಿರೇಮನಿ, ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ತಹಸೀಲ್ದಾರ್‌ ಅಶೋಕ ಶಿಗ್ಗಾಂವಿ, ತಾಪಂ ಇಒ ಪಂಪಾಪತಿ ಹಿರೇಮಠ, ಬಿಇಒ ಸುರೇಂದ್ರ ಕಾಂಬಳೆ, ಶಾಲಾ ಸುಧಾರಣ ಸಮಿತಿ ಅಧ್ಯಕ್ಷ ಹನುಮಂತ ಮಾದರ, ಶಾಲಾ ಮುಖ್ಯ ಶಿಕ್ಷಕ ಈರಣ್ಣ ರಾಠೋಡ ಭಾಗವಹಿಸಲಿದ್ದಾರೆ.

ಎಸಿಗೆ ಪ್ರಸ್ತಾವನೆ: ನಮ್ಮ ವಣಗೇರಾ ಗ್ರಾಮದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ದೇವಸ್ಥಾನದ ಸಮಿತಿಯಲ್ಲಿದ್ದ ಸುಮಾರು ₹25 ಲಕ್ಷ ಖರ್ಚು ಮಾಡಿ ಮೂರು ಕೊಠಡಿಗಳನ್ನು ನಿರ್ಮಾಣ ಮಾಡಲಾಗಿದೆ. ಗ್ರಾಮಸ್ಥರ ಸಂಪೂರ್ಣ ಸಹಕಾರ ದೊರೆತಿದೆ. ಐದು ಎಕರೆಯ ಭೂಮಿಯನ್ನು ಶಾಲೆಗೆ ಬಿಟ್ಟುಕೊಡುವಂತೆ ಎಸಿ ಅವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ವಣಗೇರಾ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಹನುಮಂತ ಮಾದರ ಹೇಳಿದರು.ಕುಷ್ಟಗಿ ತಾಲೂಕಿನ ವಣಗೇರಾ ಗ್ರಾಮದಲ್ಲಿ ಗ್ರಾಮಸ್ಥರು ದೇವಸ್ಥಾನದ ದೇಣಿಗೆಯಲ್ಲಿ ಮೂರು ಕೊಠಡಿಗಳನ್ನು ನಿರ್ಮಾಣ ಮಾಡಿರುವ ಕಾರ್ಯ ಮಾದರಿಯಾಗಿದ್ದು, ಶಾಲೆಗೆ ಬೇಕಾಗಿರುವ ಸೌಲಭ್ಯಗಳನ್ನು ಒದಗಿಸಿಕೊಡುತ್ತೇವೆ ಎಂದು ಕುಷ್ಟಗಿ ಬಿಇಒ ಸುರೇಂದ್ರ ಕಾಂಬಳೆ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಧಿವೇಶನ ಮುಗಿದ ಬಳಿಕ ಡಿಕೆಶಿಗೆ ಶುಭಸುದ್ದಿ : ಇಕ್ಬಾಲ್
ಬೆಳಗಾವೀಲೂ ‘ಕೈ’ ಡಿನ್ನರ್‌ ಸಭೆಗೆ ಬಿವೈವಿ ಕಿಡಿ