ಎಸ್ಸೆಸ್ಸೆಲ್ಸಿ: ಮೂವರು ವಿದ್ಯಾರ್ಥಿಗಳು ಆತ್ಮಹತ್ಯೆ

KannadaprabhaNewsNetwork | Updated : May 10 2024, 01:33 AM IST

ಸಾರಾಂಶ

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಫೇಲ್‌ ಆದ ಹಾಗೂ ಕಡಿಮೆ ಅಂಕ ಬಂದ ಕಾರಣಕ್ಕೆ ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಇಬ್ಬರು ಸೇರಿ ರಾಜ್ಯದಲ್ಲಿ ಮೂವರು ವಿದ್ಯಾರ್ಥಿಗಳು ಗುರುವಾರ ಆತ್ಮಹತ್ಯೆಗೆ ಶರಣಾದರೆ, ಆತ್ಮಹತ್ಯೆಗೆ ಪ್ರಯತ್ನಿಸಿದ ಮತ್ತಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

- ಮದ್ದೂರಲ್ಲಿ ಇಬ್ಬರು, ದಾವಣಗೆರೆಯಲ್ಲಿ ಒಬ್ಬ ಆತ್ಮಹತ್ಯೆ

ಕನ್ನಡಪ್ರಭ ವಾರ್ತೆ ಬೆಂಗಳೂರು

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಫೇಲ್‌ ಆದ ಹಾಗೂ ಕಡಿಮೆ ಅಂಕ ಬಂದ ಕಾರಣಕ್ಕೆ ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಇಬ್ಬರು ಸೇರಿ ರಾಜ್ಯದಲ್ಲಿ ಮೂವರು ವಿದ್ಯಾರ್ಥಿಗಳು ಗುರುವಾರ ಆತ್ಮಹತ್ಯೆಗೆ ಶರಣಾದರೆ, ಆತ್ಮಹತ್ಯೆಗೆ ಪ್ರಯತ್ನಿಸಿದ ಮತ್ತಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ತಗ್ಗರಹಳ್ಳಿಯ ಟಿ.ಎಂ.ಲಿಖಿತ್‌(15), ಹುಲಿಗೆರೆಪುರ ಗ್ರಾಮದ ಎಚ್.ಎಂ.ಅಮೃತಾ (15), ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಆರ್‌.ಕುಶಾಲ್‌ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳು.

ಮದ್ದೂರಿನ ಕೊಪ್ಪ ಹೋಬಳಿ ತಗ್ಗಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಓದುತ್ತಿದ್ದ ಟಿ.ಎಂ.ಲಿಖಿತ್ ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಎರಡು ವಿಷಯಗಳಲ್ಲಿ ಫೇಲ್‌ ಆಗಿದ್ದ. ಫಲಿತಾಂಶ ನೋಡಲೆಂದು ಶಾಲೆಗೆ ಹೋಗಿದ್ದಾಗ ಫೇಲಾದ ವಿಚಾರ ತಿಳಿಸಿದ ಶಿಕ್ಷಕರೊಬ್ಬರು ಹೀಯಾಳಿಸುವ ರೀತಿ ಮಾತನ್ನಾಡಿದ್ದಾರೆ. ಇದರಿಂದ ಮನನೊಂದ ಲಿಖಿತ್ ಗ್ರಾಮದ ಜಮೀನೊಂದರ ಬಳಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.

ಇನ್ನು ಮದ್ದೂರು ತಾಲೂಕಿನ ನಗರಕೆರೆ ಗ್ರಾಮದ ಪೂರ್ಣಿಮಾ ಪ್ರೌಢಶಾಲೆಯಲ್ಲಿ ಓದುತ್ತಿದ್ದ ಅಮೃತಾ ಈ ಬಾರಿ 353 (ಶೇ.57) ಅಂಕಗಳೊಂದಿಗೆ ಉತ್ತೀರ್ಣಳಾಗಿದ್ದಳು. ಆದರೆ ನಿರೀಕ್ಷಿಸಿದಷ್ಟು ಅಂಕ ಬಂದಿಲ್ಲವೆಂದು ಮನನೊಂದ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಫಲಿತಾಂಶಕ್ಕೂ ಮೊದಲೇ ಆತ್ಮಹತ್ಯೆ: ಚನ್ನಗಿರಿ ತಾಲೂಕಿನ ಮಾವಿನಕಟ್ಟೆಯ ಸರ್ಕಾರಿ ಪ್ರೌಢ ಶಾಲೆ ವಿದ್ಯಾರ್ಥಿಯಾಗಿದ್ದ ಆರ್.ಕುಶಾಲ್‌ ಫೇಲ್‌ ಆಗುವ ಭಯದಿಂದ ಫಲಿತಾಂಶ ಪ್ರಕಟವಾಗುವ ಮೊದಲೇ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈತ ಇಂಗ್ಲಿಷ್ ಮತ್ತು ವಿಜ್ಞಾನ ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿ, ಒಟ್ಟಾರೆ 273 ಅಂಕ ಪಡೆದಿದ್ದ.

ಇಬ್ಬರಿಂದ ಆತ್ಮಹತ್ಯೆ ಯತ್ನ: ಅದೇ ರೀತಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ವಿದ್ಯಾರ್ಥಿಗಳಿಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದು, ಸದ್ಯ ಅಪಾಯದಿಂದ ಪಾರಾಗಿದ್ದಾರೆ. ರಂಜಿತ ಹಾಗೂ ಪ್ರಿಯದರ್ಶಿನಿ ಆತ್ಮಹತ್ಯೆಗೆ ಯತ್ನಿಸಿದವರು. ತೋವಿನಕೆರೆ ಸಮೀಪದ ಹೆರಜೇನಹಳ್ಳಿಯ ರಂಜಿತ ಲಕ್ಷ್ಮಣರೇಖೆ ಸೇವಿಸಿದ್ದರೆ, ಬುಕ್ಕಾಪಟ್ಟಣ ಪ್ರೌಢಶಾಲೆಯ ಪ್ರಿಯದರ್ಶಿನಿ ಫಿನಾಯಲ್‌ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇಬ್ಬರೂ ವಿದ್ಯಾರ್ಥಿನಿಯರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

ವಿದ್ಯಾರ್ಥಿ ನಾಪತ್ತೆ: ಪರೀಕ್ಷೆಯಲ್ಲಿ ಫೇಲ್‌ ಆಗುವ ಭೀತಿಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಬೆಟ್ಟಹಳ್ಳಿಯ ವಿದ್ಯಾರ್ಥಿ ಚಂದನ್ ಗೌಡ(16) ನಾಪತ್ತೆಯಾಗಿದ್ದಾನೆ. ಮಂಡಿಗೆರೆ ಸರ್ಕಾರಿ ಶಾಲೆ ವಿದ್ಯಾರ್ಥಿಯಾಗಿರುವ ಈತ ಫಲಿತಾಂಶ ಪ್ರಕಟವಾಗುವ ಮೊದಲೇ ಫೇಲ್‌ ಆಗುವ ಭೀತಿಯಿಂದ ಮನೆಯಿಂದ ನಾಪತ್ತೆಯಾಗಿದ್ದಾನೆ. ಆದರೆ ಆತ 273 ಅಂಕ ಪಡೆದು ಉತ್ತೀರ್ಣನಾಗಿದ್ದಾನೆ.

Share this article