ಅನುದಾನ ನೀಡಿಕೆಯಲ್ಲಿ ತಾರತಮ್ಯ ಎಸಗಿರುವ ಸಿದ್ದರಾಮಯ್ಯ - ಗೋ ಬ್ಯಾಕ್‌ ಸಿಎಂಗೆ 3 ಸಾವಿರ ಜನ: ಕೃಷ್ಣಪ್ಪ

KannadaprabhaNewsNetwork |  
Published : Nov 28, 2024, 12:35 AM ISTUpdated : Nov 28, 2024, 12:56 PM IST
೨೭ ಟಿವಿಕೆ ೪ - ತುರುವೇಕೆರೆಯ ಪ್ರವಾಸಿ ಮಂದಿರದ ಆವರಣದಲ್ಲಿ ನಡೆದ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿದರು. | Kannada Prabha

ಸಾರಾಂಶ

 ಸಿ ಡಿ.2 ರಂದು ತುಮಕೂರಿಗೆ ಬರುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಗೋ ಬ್ಯಾಕ್ ಸಿದ್ದರಾಮಯ್ಯ ಚಳುವಳಿಗೆ ತಾಲೂಕಿನಿಂದ ಸುಮಾರು ಮೂರು ಸಾವಿರ ಎನ್ ಡಿ ಎ ಕಾರ್ಯಕರ್ತರು ಭಾಗವಹಿಸಲಿದ್ದಾರೆಂದು ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು.

 ತುರುವೇಕೆರೆ : ಅನುದಾನ ನೀಡಿಕೆಯಲ್ಲಿ ತಾರತಮ್ಯ ಎಸಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಲತಾಯಿ ಧೋರಣೆಯನ್ನು ಖಂಡಿಸಿ ಡಿ.೨ ರಂದು ತುಮಕೂರಿಗೆ ಬರುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಗೋ ಬ್ಯಾಕ್ ಸಿದ್ದರಾಮಯ್ಯ ಚಳುವಳಿಗೆ ತಾಲೂಕಿನಿಂದ ಸುಮಾರು ಮೂರು ಸಾವಿರ ಎನ್ ಡಿ ಎ ಕಾರ್ಯಕರ್ತರು ಭಾಗವಹಿಸಲಿದ್ದಾರೆಂದು ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ನಡೆದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಾಂಗ್ರೆಸ್ ಶಾಸಕರು ಇರುವ ಕಡೆ ಮಾತ್ರ ಕೋಟಿ ಕೋಟಿ ಅನುದಾನ ಬಿಡುಗಡೆ ಮಾಡಿದ್ದಾರೆ. ಆದರೆ ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಇರುವ ಕಡೆ ಒಂದೇ ಒಂದು ರುಪಾಯಿ ಅನುದಾನ ಬಿಡುಗಡೆ ಮಾಡಿಲ್ಲ. ಇದು ಅನ್ಯಾಯವಲ್ಲವೇ. 

ನಾವೂ ಸಹ ಕಾಂಗ್ರೆಸ್ ಶಾಸಕರ ರೀತಿ ಶಾಸಕರೇ ತಾನೇ?. ನಾವೇನೂ ವಿದೇಶದಿಂದ ಬಂದಿದ್ದೇವಾ?. ಇವರೇನು ಇವರ ಮನೆಯಿಂದ ಹಣ ಕೊಡ್ತಾರಾ? ಜನರು ಕಟ್ಟುವ ತೆರಿಗೆಯ ಹಣ. ಅದರಲ್ಲೇಕೆ ತಾರತಮ್ಯ ಮಾಡಬೇಕು ಎಂದು ಶಾಸಕ ಕೃಷ್ಣಪ್ಪ ಸಿಡಿಮಿಡಿಗೊಂಡರು. 5 ರು. ಇಲ್ಲ : ಸರ್ಕಾರ ಬಂದ ಆರಂಭದಲ್ಲಿ ಎಲ್ಲಾ ಶಾಸಕರಿಗೂ 50ಕೋಟಿ ರೂ ಅನುದಾನ ನೀಡ್ತೀವಿ ಅಂತ ಭರವಸೆ ನೀಡಿದ್ದರು. ಆದರೆ ಇದುವರೆಗೂ 5 ರುಪಾಯಿ ಕೊಟ್ಟಿಲ್ಲ. ಹೀಗಾದರೆ ಜನರಿಗೆ ನಾವು ಏನು ಉತ್ತರ ಕೊಡೋದು. ತಾಲೂಕಿನಲ್ಲಿರುವ ಎಲ್ಲಾ ರಸ್ತೆಗಳು ಗುಂಡಿ ಬಿದ್ದಿವೆ. 

ಪ್ರತಿದಿನ ಜನ ಗಲಾಟೆ ಮಾಡ್ತಾರೆ. ಒಂದು ಗುಂಡಿ ಮುಚ್ಚಿಸಲೂ ಈ ಸರ್ಕಾರದಲ್ಲಿ ದುಡ್ಡಿಲ್ಲ. ನನಗೂ ಜನರಿಗೆ ಉತ್ತರ ಕೊಟ್ಟೂ ಕೊಟ್ಟೂ ಸಾಕಾಗಿ ಹೋಗಿದೆ. ಈ ದರಿದ್ರ ಸರ್ಕಾರದಲ್ಲಿ ಅಭಿವೃದ್ಧಿ ಎಂಬುದು ಕನಸಿನ ಮಾತು ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಕಿಡಿಕಾರಿದರು. ಸವಾಲು: ಗೋ ಬ್ಯಾಕ್ ಸಿದ್ದರಾಮಯ್ಯ ಚಳುವಳಿಗೆ ಹೆದರಿ ನಮ್ಮ ಎಲ್ಲಾ ಶಾಸಕರಿಗೆ ಸೂಕ್ತ ಅನುದಾನ ನೀಡಿದರೆ ಮಾತ್ರ ತಾವು ಸಿಎಂ ಕಾರ್ಯಕ್ರಮದಲ್ಲಿ ಭಾಗವಹಿಸುವೆ. ಇಲ್ಲದಿದ್ದಲ್ಲಿ ಕಾರ್ಯಕರ್ತರೊಡಗೂಡಿ ಪ್ರತಿಭಟನೆ ಮಾಡುವೆ. ನನ್ನನ್ನು ಬಂಧಿಸಲಿ. ಚಿಂತೆ ಇಲ್ಲ. ನನಗೆ ನನ್ನ ಕ್ಷೇತ್ರದ ಜನರ ಹಿತ ಮುಖ್ಯ. ಮೂರು ದಿನ ಜೈಲಿಗೆ ಹಾಕಲಿ. ಹೆದರಲ್ಲ. ಜೈಲಿನಲ್ಲೇ ಪ್ರತಿಭಟನೆ ಮಾಡುವೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಸರ್ಕಾರಕ್ಕೆ ಸವಾಲೆಸೆದರು.

ಈ ಸಂದರ್ಭದಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ಸಾದರಹಳ್ಳಿ ದೊಡ್ಡೇಗೌಡ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯೆ ಲೀಲಾವತಿ ಗಿಡ್ಡಯ್ಯ, ಮುಖಂಡರಾದ ಹಿಂಡುಮಾರನಹಳ್ಳಿ ನಾಗರಾಜ್, ಪುರ ಗಂಗಾಧರ್, ಪಟ್ಟಣ ಪಂಚಾಯ್ತಿ ಸದಸ್ಯ ಎನ್.ಆರ್.ಸುರೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ಭೈತರಹೊಸಳ್ಳಿ ರಾಮಚಂದ್ರು, ಕೊಡಿಗೇಹಳ್ಳಿ ಗ್ರಾಮ ಪಂಚಾಯ್ತಿ ಸದಸ್ಯ ಹೊಸಹಳ್ಳಿ ದೇವರಾಜ್, ಬಿಜೆಪಿ ಮುಖಂಡರಾದ ದುಂಡ ಸುರೇಶ್, ಸೋಮಣ್ಣ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.

PREV

Recommended Stories

ಈರುಳ್ಳಿ, ಹೂ, ಪಚ್ಚ ಬಾಳೆ ಬೆಲೆ ಧರೆಗೆ!
ರಾಜ್ಯದಲ್ಲಿ ಇನ್ನೂ 3-4 ದಿನ ಮಳೆ ಸಾಧ್ಯತೆ