ಆಸ್ಪತ್ರೆಯಲ್ಲಿನ ಸಮಸ್ಯೆಗಳ ಕುರಿತು ಕ್ರಮ ಕೈಗೊಳ್ಳುವೆ

KannadaprabhaNewsNetwork |  
Published : Nov 28, 2024, 12:35 AM IST
ಭದ್ರಾವತಿ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಬುಧವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ದಿನೇಶ್ ಗುಂಡೂರಾವ್‌ರವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.  | Kannada Prabha

ಸಾರಾಂಶ

ಭದ್ರಾವತಿ: ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಬುಧವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಭದ್ರಾವತಿ: ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಬುಧವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಆಸ್ಪತ್ರೆಯ ಸ್ಕ್ಯಾನಿಂಗ್, ಡಯಾಲಿಸಿಸ್, ತುರ್ತು ಚಿಕಿತ್ಸಾ ವಿಭಾಗ, ರೋಗಿಗಳ ತಪಾಸಣಾ ಕೊಠಡಿ, ವೈದ್ಯರ ಕೊಠಡಿ, ಔಷಧಿ ವಿತರಣೆ ಕೊಠಡಿ ಸೇರಿದಂತೆ ಇನ್ನಿತರ ಕೊಠಡಿಗಳ ಪರಿಶೀಲನೆ ನಡೆಸಿ ವೈದ್ಯರು, ದಾದಿಯರು, ಆರೋಗ್ಯ ಕಾರ್ಯಕರ್ತೆಯರು ಹಾಗು ಸಿಬ್ಬಂದಿ ಜೊತೆ ಚರ್ಚಿಸಿದರು. ಈ ವೇಳೆ ಅಸ್ಪತ್ರೆಯಲ್ಲಿನ ಸಮಸ್ಯೆಗಳ ಕುರಿತು ಸಚಿವರ ಗಮನ ಸೆಳೆಯಲಾಯಿತು. ಅಲ್ಲದೆ ಕೆಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮನವಿ ಸಲ್ಲಿಸಲಾಯಿತು. ಆಸ್ಪತ್ರೆಯಲ್ಲಿನ ನ್ಯೂನ್ಯತೆಗಳ ಕುರಿತು ವಿವಿಧ ಸಂಘಟನೆಗಳ ಮುಖಂಡರು ಹಾಗೂ ಸ್ಥಳೀಯರಿಂದ ಸಚಿವರಿಗೆ ದೂರುಗಳು ಸಹ ಸಲ್ಲಿಕೆಯಾದವು. ಆಸ್ಪತ್ರೆ ಪರಿಶೀಲನೆ ನಂತರ ಮಾತನಾಡಿದ ಸಚಿವರು, ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಹಾಗೂ ತಾಲೂಕಿನಲ್ಲಿರುವ ಸರ್ಕಾರಿ ಆಸ್ಪತ್ರೆಗಳಲ್ಲಿನ ನ್ಯೂನ್ಯತೆ ಹಾಗೂ ಸಮಸ್ಯೆಗಳ ಕುರಿತು ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ ಶಾಸಕರು ಹಲವು ಬೇಡಿಕೆಗಳನ್ನು ಸಲ್ಲಿಸಿದ್ದು, ಅವುಗಳನ್ನು ಸಹ ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿದರು.

ನಂತರ ಸಚಿವರು ಭದ್ರಾಕಾಲೋನಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿ ಖಾಲಿ ಇರುವ ಜಾಗ ಪರಿಶೀಲನೆ ನಡೆಸಿ ತೆರಳಿದರು.ಶಾಸಕರ ಮನವಿ :

ಪ್ರಸ್ತುತ ೧೦೦ ಹಾಸಿಗೆಯುಳ್ಳ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಪ್ರತಿದಿನ ೧೦೦೦ಕ್ಕೂ ಹೆಚ್ಚು ರೋಗಿಗಳು ಚಿಕಿತ್ಸೆಗೆ ಬರುತ್ತಿದ್ದಾರೆ. ಈ ಆಸ್ಪತ್ರೆಯಲ್ಲಿ ಜಾಗದ ಕೊರತೆ ಇದ್ದು, ಅಲ್ಲದೆ ಹಲವು ಸಮಸ್ಯೆಗಳಿಂದ ಕೂಡಿದೆ. ಇದರಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ಭದ್ರಾ ಕಾಲೋನಿ ಪ್ರಾಥಮಿಕ ಆರೋಗ್ಯ ಕೇಂದ್ರದ ಪಕ್ಕದಲ್ಲಿ ಸುಮಾರು ೮ ಎಕರೆ ೦೫ ಗುಂಟೆ ಜಾಗವಿದ್ದು, ಈ ಜಾಗದಲ್ಲಿ ಹೊಸದಾಗಿ ೧೫೦ ಹಾಸಿಗೆಯ ಆಸ್ಪತ್ರೆ ಹಾಗೂ ತಾಯಿ ಮತ್ತು ಮಗು ಆಸ್ಪತ್ರೆ ಮಂಜೂರು ಮಾಡಬೇಕು.

ತಾಲೂಕಿನ ದೊಣಬಘಟ್ಟ ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸಿಂಗನಮನೆ(ಬಿ.ಆರ್ ಪ್ರಾಜೆಕ್ಟ್) ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸಬೇಕು. ನಗರಸಭೆ ವಾರ್ಡ್ ನಂ.೧ರ ಜೇಡಿಕಟ್ಟೆ ಹಾಗೂ ವಾರ್ಡ್ ನಂ.೨೫ರ ಬೊಮ್ಮನಕಟ್ಟೆ ಮತ್ತು ಬಾರಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾರೇಹಳ್ಳಿಯಲ್ಲಿ ಹೊಸದಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸುವಂತೆ ಶಾಸಕರು ಮನವಿ ಮಾಡಿದ್ದಾರೆ.

ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ಸ್ಥಳೀಯರಿಂದ ದೂರು:

ತಾಲೂಕಿನ ಸರ್ಕಾರಿ ಆಸ್ಪತ್ರೆಗಳ ನ್ಯೂನ್ಯತೆಗಳಿಗೆ ಸಂಬಂಧಿಸಿದಂತೆ ಸಚಿವರಿಗೆ ದೂರುಗಳು ಸಲ್ಲಿಕೆಯಾಗಿದವು. ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ಸಮರ್ಪಕವಾಗಿ ಚಿಕಿತ್ಸೆ ನೀಡುತ್ತಿಲ್ಲ. ತುರ್ತು ಚಿಕಿತ್ಸೆಗಾಗಿ ಬಂದವರನ್ನು ಸಹ ಗಂಟೆಗಟ್ಟಲೆ ಕಾಯಿಸಲಾಗುತ್ತಿದ್ದು, ಇದರಿಂದಾಗಿ ರೋಗಿಗಳು ನರಳುವ ಸ್ಥಿತಿಗೆ ತಲುಪಿ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಸಿ ತೀರ್ಥೇಶ್ ದೂರು ಸಲ್ಲಿಸಿದ್ದಾರೆ.

ಶಾಸಕ ಬಿ.ಕೆ.ಸಂಗಮೇಶ್ವರ್, ನಗರಸಭೆ ಅಧ್ಯಕ್ಷ ಮಣಿ ಎಎನ್‌ಎಸ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಶಿವಕುಮಾರ್, ತಹಸೀಲ್ದಾರ್ ಕೆ.ಆರ್.ನಾಗರಾಜು, ತಾಲೂಕು ಆರೋಗ್ಯಾಧಿಕಾರಿ ಡಾ.ಎಂ.ವಿ.ಅಶೋಕ್, ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ಶಂಕರಪ್ಪ, ನಗರಸಭೆ ಪೌರಾಯುಕ್ತ ಪ್ರಕಾಶ್ ಚನ್ನಪ್ಪನವರ್, ಸದಸ್ಯರಾದ ಬಿ.ಕೆ.ಮೋಹನ್, ಚನ್ನಪ್ಪ, ಬಸವರಾಜ ಬಿ.ಆನೇಕೊಪ್ಪ, ಲತಾ ಚಂದ್ರಶೇಖರ್, ಸರ್ವಮಂಗಳ ಭೈರಪ್ಪ ಮತ್ತಿತರರಿದ್ದದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮದ್ಯ ನಿಷೇಧಕ್ಕೆ ಮಹಿಳಾ ಹೋರಾಟ ಅವಿವಾರ್ಯ
ಕಡೂರಿಗೆ 2ನೇ ಅಗ್ನಿಶಾಮಕ ಠಾಣೆ ಮಂಜೂರಾತಿಗೆ ಪ್ರಯತ್ನ: ಕೆ.ಎಸ್.ಆನಂದ್