ಧಾರವಾಡ:
ಇಲ್ಲಿಯ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕಕ್ಕೆ ಭೂಮಾಪನ ಇಲಾಖೆಯ ಎಸ್.ಎಫ್. ಸಿದ್ಧನಗೌಡರ ಮೂರನೇ ಅವಧಿಗೆ ಅವಿರೋಧವಾಗಿ ಆಯ್ಕೆಯಾದರು.ಇತ್ತೀಚಿಗೆ 66 ಜಿಲ್ಲಾ ನಿರ್ದೇಶಕರ ಮತ್ತು ಆರು ತಾಲೂಕು ಅಧ್ಯಕ್ಷರ ಆಯ್ಕೆಯ ಬಳಿಕ ಜಿಲ್ಲಾ ಘಟಕಕ್ಕೆ ನಾಮಪತ್ರ ಸಲ್ಲಿಕೆ ಪ್ರಾರಂಭವಾಗಿತ್ತು. ನ. 27ರ ವರೆಗೆ ನಾಮಪತ್ರ ಸಲ್ಲಿಕೆ ಅವಕಾಶ ನೀಡಲಾಗಿತ್ತು. ಆದರೆ, ಎಸ್.ಎಫ್. ಸಿದ್ಧನಗೌಡರ ಅವರನ್ನು ಹೊರತುಪಡಿಸಿ ಯಾರೂ ನಾಮಪತ್ರ ಸಲ್ಲಿಕೆ ಮಾಡದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಗಿರೀಶ ಪಾಟೀಲ ಮತ್ತು ಕೆ.ಜಿ. ಲಟ್ಟಿ ಅಧ್ಯಕ್ಷರ ಘೋಷಣೆ ಮಾಡಿದರು.
ಅದೇ ರೀತಿ ರಾಜ್ಯ ಪರಿಷತ್ ಸದಸ್ಯರಾಗಿ ಆರೋಗ್ಯ ಇಲಾಖೆಯ ದೇವಿದಾಸ ಶಾಂತಿಕರ, ಖಜಾಂಚಿಯಾಗಿ ಮಂಜುನಾಥ ಯಡಳ್ಳಿ ಅವಿರೋಧವಾಗಿ ಆಯ್ಕೆಯಾದರು ಎಂದು ಚುನಾವಣಾಧಿಕಾರಿಗಳು ಘೋಷಿಸಿದರು.ನಂತರ ನಡೆದ ಸಮಾರಂಭದಲ್ಲಿ ಎಐಪಿಟಿಎಫ್ ಕಾರ್ಯಾಧ್ಯಕ್ಷ ಬಸವರಾಜ ಗುರಿಕಾರ ಮಾತನಾಡಿ, ಎಸ್.ಎಫ್. ಸಿದ್ಧನಗೌಡರ ಕಳೆದ ಎರಡು ಅವಧಿಯಲ್ಲಿ ಉತ್ತಮ ಸೇವೆ ಮಾಡುವ ಮೂಲಕ ಸಂಘದ ಬಲವರ್ಧನೆಗೆ ಶ್ರಮಿಸಿದ್ದಾರೆ. ಇವರ ಅವಧಿಯಲ್ಲಿ ರಾಜ್ಯ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ, ಪ್ರತಿ ವರ್ಷ ಪ್ರತಿಭಾ ಪುರಸ್ಕಾರ, ನೌಕರರ ಜಿಲ್ಲಾಮಟ್ಟದ ಕ್ರೀಡಾಕೂಟ, ಆರೋಗ್ಯ ಶಿಬಿರ, ಲೋಕಾಯುಕ್ತರಿಂದ ಆಡಳಿತದಲ್ಲಿ ಪಾರದರ್ಶಕತೆ ಕುರಿತು ಜಾಗೃತಿ ಕಾರ್ಯಾಗಾರಗಳು ನಡೆದಿವೆ ಎಂದರು.
ನೂತನ ಅಧ್ಯಕ್ಷ ಎಸ್.ಎಫ್. ಸಿದ್ಧನಗೌಡರ ಮಾತನಾಡಿ, ಎರಡು ಅವಧಿಯಲ್ಲಿ ಅಧ್ಯಕ್ಷರಾಗಿ ಎಲ್ಲರ ವಿಶ್ವಾಸ ಗಳಿಸುವ ಮೂಲಕ ಸಂಘದ ಅಭಿವೃದ್ಧಿಗೆ ಕೆಲಸ ಮಾಡಿದ್ದೇನೆ. ಅಲ್ಲದೇ ಎಲ್ಲ ಸದಸ್ಯರ ಮತ್ತು ನಿರ್ದೇಶಕರ ಸಹಕಾರದಿಂದಲೇ ಸಂಘ ಇಷ್ಟೊಂದು ಕೆಲಸ ಮಾಡಲು ಸಾಧ್ಯವಾಗಿದೆ ಎಂದರು.ತಾಲೂಕು ಅಧ್ಯಕ್ಷರಾದ ಪ್ರಹ್ಲಾದ ಗೆಜ್ಜಿ, ಜಗದೀಶ ವಿರಕ್ತಮಠ, ನಾರಾಯಣ ಭಜಂತ್ರಿ, ರವಿ ಕಟ್ಟಿ, ಎಸ್.ಕೆ. ರಾಮದುರ್ಗ, ಎಸ್.ಜಿ. ಸುಬ್ಬಾಪುರಮಠ ಸೇರಿದಂತೆ ನೂತನವಾಗಿ ಆಯ್ಕೆಯಾದ ನಿರ್ದೇಶಕರು ಮತ್ತು ಸಂಘದ ಸದಸ್ಯರು ಇದ್ದರು.