ಸಾಮಾಜಿಕ ಬಹಿಷ್ಕಾರಕ್ಕೆ 3 ವರ್ಷ ಜೈಲು : ಮಸೂದೆ

KannadaprabhaNewsNetwork |  
Published : Dec 05, 2025, 03:15 AM IST
Karnataka Govt

ಸಾರಾಂಶ

ಯಾವುದೇ ವ್ಯಕ್ತಿ, ಕುಟುಂಬ ಅಥವಾ ಕುಟುಂಬದ ಸದಸ್ಯರನ್ನು ಸಾಮಾಜಿಕವಾಗಿ ಬಹಿಷ್ಕರಿಸುವುದನ್ನು ಕಟ್ಟುನಿಟ್ಟಾಗಿ ತಡೆಯಲು ಮುಂದಾಗಿರುವ ರಾಜ್ಯ ಸರ್ಕಾರ, ಅಂತಹ ಕ್ರಮ ಎಸಗಿದವರಿಗೆ 1 ಲಕ್ಷ ರು. ದಂಡ ಹಾಗೂ ಮೂರು ವರ್ಷದವರೆಗೆ ಜೈಲು ಶಿಕ್ಷೆ ವಿಧಿಸುವ  ಮಸೂದೆ-2025’ಗೆ  ಅನುಮೋದನೆ ಪಡೆದಿದೆ.

 ಬೆಂಗಳೂರು :  ಯಾವುದೇ ವ್ಯಕ್ತಿ, ಕುಟುಂಬ ಅಥವಾ ಕುಟುಂಬದ ಸದಸ್ಯರನ್ನು ಸಾಮಾಜಿಕವಾಗಿ ಬಹಿಷ್ಕರಿಸುವುದನ್ನು ಕಟ್ಟುನಿಟ್ಟಾಗಿ ತಡೆಯಲು ಮುಂದಾಗಿರುವ ರಾಜ್ಯ ಸರ್ಕಾರ, ಅಂತಹ ಕ್ರಮ ಎಸಗಿದವರಿಗೆ 1 ಲಕ್ಷ ರು. ದಂಡ ಹಾಗೂ ಮೂರು ವರ್ಷದವರೆಗೆ ಜೈಲು ಶಿಕ್ಷೆ ವಿಧಿಸುವ ‘ಕರ್ನಾಟಕ ಸಾಮಾಜಿಕ ಬಹಿಷ್ಕಾರದಿಂದ ಜನರ ರಕ್ಷಣೆ (ತಡೆ, ನಿಷೇಧ ಮತ್ತು ಪರಿಹಾರ) ಮಸೂದೆ-2025’ಗೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆದಿದೆ.

ಸಮಾಜ ಕಲ್ಯಾಣ ಇಲಾಖೆ ಮಂಡಿಸಿದ ವಿಧೇಯಕಕ್ಕೆ ಸಂಪುಟ ಸಭೆ ಅಂಗೀಕಾರ ನೀಡಿದ್ದು, ಬೆಳಗಾವಿ ಅಧಿವೇಶನದಲ್ಲಿ ಉಭಯ ಸದನಗಳ ವಿಧೇಯಕ ಮಂಡಿಸಿ ಒಪ್ಪಿಗೆ ಪಡೆಯುವ ಸಾಧ್ಯತೆಯಿದೆ. ಇದೇ ವೇಳೆ ದ್ವೇಷ ಭಾಷಣ ನಿಯಂತ್ರಣ ಸೇರಿ 9 ಮಸೂದೆಗಳಿಗೆ ಸಂಪುಟ ಅಂಗೀಕಾರ ನೀಡಿದೆ.

ಕೇವಲ ಬಹಿಷ್ಕರಿಸುವ ತೀರ್ಮಾನ ತೆಗೆದುಕೊಂಡವರು ಮಾತ್ರವಲ್ಲದೆ ಬಹಿಷ್ಕಾರ ಹಾಕುವ ಬಗ್ಗೆ ಸಭೆ-ಪಂಚಾಯ್ತಿ ನಡೆಸಿದವರೂ ಅಪರಾಧಿಗಳು ಎಂದು ಶಿಕ್ಷೆಗೆ ಗುರಿಪಡಿಸಲು ವಿಧೇಯಕದಲ್ಲಿ ಪ್ರಸ್ತಾಪಿಸಲಾಗಿದೆ. ಜತೆಗೆ ಸಭೆಯಲ್ಲಿ ಹಾಜರಿಲ್ಲದಿದ್ದರೂ ಬಹಿಷ್ಕಾರಕ್ಕೆ ಒತ್ತಡ ಹೇರುವ ಮೂಲಕ ನಿರ್ಧಾರಕ್ಕೆ ಕಾರಣರಾದವರು, ಬಹಿಷ್ಕಾರದ ಪರ ಮತ ಹಾಕಿದವರು ಅಥವಾ ಚರ್ಚೆಯಲ್ಲಿ ಪಾಲ್ಗೊಂಡವರನ್ನೂ ಅಪರಾಧಿಗಳೆಂದು ನಿರ್ಧರಿಸಲಾಗುವುದು. ಈ ಕುರಿತು ಸಭೆ, ಜಮಾವಣೆ, ಸಮಾವೇಶ ನಡೆಸುವುದು ಸಹ ಅಕ್ರಮ ಎಂದು ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ.

3 ವರ್ಷ ಜೈಲು, 1 ಲಕ್ಷ ರು ದಂಡ:

ಬಹಿಷ್ಕಾರಕ್ಕೆ ಸಹಾಯ, ಪ್ರಚೋದನೆಗೆ ಮೂರು ವರ್ಷಗಳವರೆಗೆ ಜೈಲು, ₹1 ಲಕ್ಷ ರು.ವರೆಗೆ ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶ ಇದೆ. ಬಹಿಷ್ಕಾರಕ್ಕೆ ಒಳಗಾಗುವವರು ಠಾಣೆ ಅಥವಾ ನ್ಯಾಯಾಧೀಶರಿಗೆ ನೇರವಾಗಿ ದೂರು ಸಲ್ಲಿಸಬಹುದು. ಪ್ರಥಮ ದರ್ಜೆ ನ್ಯಾಯಾಧೀಶರಿಗೆ ವಿಚಾರಣೆ ಅಧಿಕಾರ ನೀಡಲಾಗಿದೆ. ನೇರವಾಗಿ ಸಲ್ಲಿಕೆಯಾದ ದೂರಿನ ತನಿಖೆ ನಡೆಸುವಂತೆ ನ್ಯಾಯಾಧೀಶರು ಆದೇಶಿಸಬಹುದು. ಬಹಿಷ್ಕಾರಕ್ಕೆ ಒಳಗಾದ ವ್ಯಕ್ತಿ ಅಥವಾ ಕುಟುಂಬಕ್ಕೆ ಸಹಾಯ ಒದಗಿಸಲು ಸೂಚಿಸಬಹುದು. ದಂಡದ ಮೊತ್ತವನ್ನು ಅವರಿಗೆ ಪರಿಹಾರವಾಗಿ ನೀಡಲು ನಿರ್ದೇಶನ ನೀಡಬಹುದು ಎಂದು ವಿಧೇಯಕದಲ್ಲಿ ತಿಳಿಸಲಾಗಿದೆ.

ಬಹಿಷ್ಕಾರ ತಡೆ ಅಧಿಕಾರಿ ನೇಮಕ:

ಸಾಮಾಜಿಕ ಬಹಿಷ್ಕಾರದಂತಹ ನಿರ್ಧಾರ ತೆಗೆದುಕೊಳ್ಳಲು ನಡೆಸುವ ಸಭೆಗಳ ಕುರಿತು ಮಾಹಿತಿ ಬಂದರೆ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಅವುಗಳನ್ನು ನಿಷೇಧಿಸುವ ಆದೇಶ ಹೊರಡಿಸಬಹುದು. ಗ್ರೂಪ್-ಎ ಅಧಿಕಾರಿಗಳನ್ನು ಸಾಮಾಜಿಕ ಬಹಿಷ್ಕಾರ ತಡೆ ಅಧಿಕಾರಿಗಳನ್ನಾಗಿ ನಿಯೋಜಿಸಬಹುದು. ಈ ಅಧಿಕಾರಿಗಳು ಕಾಯ್ದೆಯ ಜಾರಿ, ಪ್ರಕರಣ ಪತ್ತೆ, ಮತ್ತು ನ್ಯಾಯಾಲಯಕ್ಕೆ ಸಹಕಾರ ನೀಡುವ ಹೊಣೆಗಾರಿಕೆ ನಿಭಾಯಿಸಲಿದ್ದಾರೆ. ಪರಿಸ್ಥಿತಿಗೆ ಅನುಗುಣವಾಗಿ ಪೊಲೀಸರಿಗೆ ಸಲಹೆ, ಸೂಚನೆ ನೀಡಲಿದ್ದಾರೆ.

ಅಮಾನುಷ ಪದ್ಧತಿ ಈಗಲೂ ಇದೆ:

ರಾಜ್ಯದ ವಿವಿಧ ಭಾಗಗಳಲ್ಲಿ ಸಾಮಾಜಿಕ ಬಹಿಷ್ಕಾರದ ಅಮಾನುಷ ಪದ್ಧತಿ ಇನ್ನೂ ಮುಂದುವರಿದಿದೆ. ಅದರ ನಿರ್ಮೂಲನೆಗೆ ಮಸೂದೆ ಸಿದ್ಧಪಡಿಸಲಾಗಿದೆ. ಈಗಾಗಲೇ ಮಹಾರಾಷ್ಟ್ರ ರಾಜ್ಯದಲ್ಲಿ ಕಾಯಿದೆ ಜಾರಿಯಲ್ಲಿದ್ದು, ಅದೇ ರೀತಿ ರಾಜ್ಯದಲ್ಲಿ ಜಾರಿಗೆ ತರಲಾಗುತ್ತಿದೆ ಎಂದು ತಿಳಿದು ಬಂದಿದೆ

ಅಂತರ್‌ಜಾತಿ ವಿವಾಹದ ಸಮಯದಲ್ಲೇ ಬಹಿಷ್ಕಾರ ಹೆಚ್ಚು!

2017ರಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಅಮಾನವೀಯ ದುಷ್ಟ ಪದ್ಧತಿಗಳು ಹಾಗೂ ವಾಮಾಚಾರ ಇವುಗಳ ಪ್ರತಿಬಂಧ ಮತ್ತು ನಿರ್ಮೂಲನೆ ಅಧಿನಿಯಮ ಜಾರಿಗೆ ತರಲಾಗಿದೆ. ಆದರೆ ಇದರಿಂದ ಸಾಮಾಜಿಕ ಬಹಿಷ್ಕಾರವನ್ನು ಸಮರ್ಥವಾಗಿ ತಡೆಯಲು ಸಾಧ್ಯವಾಗುತ್ತಿಲ್ಲ. ಸಾಮಾನ್ಯವಾಗಿ ಸಾಮಾಜಿಕ ಬಹಿಷ್ಕಾರ ಪ್ರಕರಣಗಳು ಅಂತರ್‌ಜಾತಿ ವಿವಾಹಗಳ ಪ್ರಕರಣಗಳಲ್ಲಿ ಹೆಚ್ಚಾಗಿ ವರದಿಯಾಗುತ್ತಿವೆ ಎಂದು ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಬೆಂಗಳೂರು ನಗರದಲ್ಲಿ ಶೀಘ್ರವೇ ಪೇ ಆ್ಯಂಡ್‌ ಪಾರ್ಕ್‌ ಜಾರಿ
50% ಮುಗಿದ ವಾರಾಹಿ ಏತ ನೀರಾವರಿಗೆ ತಡೆ : ಕಿಚ್ಚು