ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ 30 ಸಾವಿರಕ್ಕೂ ಅಧಿಕ ಪರಿಸರ ಮಾರಕ ಪಿಒಪಿ ಗಣೇಶ ಮೂರ್ತಿ ವಶ

KannadaprabhaNewsNetwork |  
Published : Sep 05, 2024, 02:16 AM ISTUpdated : Sep 05, 2024, 07:16 AM IST
ಮಾರಾಟಕ್ಕೆ ಇಟ್ಟಿದ್ದ ಗಣಪತಿ ಮೂರ್ತಿಗಳು. | Kannada Prabha

ಸಾರಾಂಶ

ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ 30 ಸಾವಿರಕ್ಕೂ ಅಧಿಕ ಪರಿಸರ ಮಾರಕ ಪಿಒಪಿ ಗಣೇಶ ಮೂರ್ತಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ರಾಜು ಕಾಂಬಳೆ

 ಬೆಂಗಳೂರು : ನಿಷೇಧಿತ ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ (ಪಿಒಪಿ) ತಯಾರಿಸಿ ಮಾರಾಟಕ್ಕೆ ಸಿದ್ಧಗೊಂಡಿದ್ದ ಸುಮಾರು 30 ಸಾವಿರಕ್ಕೂ ಅಧಿಕ ಗಣೇಶ ಮೂರ್ತಿಗಳನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಮತ್ತು ಬಿಬಿಎಂಪಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಪಿಒಪಿ ಮೂರ್ತಿ ತಯಾರಿಕಾ ಘಟಕ ಹಾಗೂ ಮಾರಾಟ ಮಳಿಗೆಗಳ ಮೇಲೆ ದಾಳಿ ನಡೆಸಿದ ಕೆಎಸ್‌ಪಿಸಿಬಿ ಮತ್ತು ಬಿಬಿಎಂಪಿ ಅಧಿಕಾರಿಗಳು ಪಿಒಪಿ ಮೂರ್ತಿಗಳನ್ನು ವಶಕ್ಕೆ ಪಡೆಸಿಕೊಂಡು ದಂಡ ವಿಧಿಸುತ್ತಿದ್ದಾರೆ.

ಬೆಂಗಳೂರಲ್ಲೇ ಅಧಿಕ ಪಿಒಪಿ ಮೂರ್ತಿ:

ರಾಜ್ಯದ ಬೇರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ಬೆಂಗಳೂರು ನಗರದಲ್ಲಿ ಅತಿ ಹೆಚ್ಚು ಪಿಒಪಿ ಮೂರ್ತಿಗಳ ತಯಾರಿಕೆ ಮತ್ತು ಮಾರಾಟ ನಡೆಯುತ್ತಿದೆ. ಜತೆಗೆ, ಮಹರಾಷ್ಟ್ರಸೇರಿದಂತೆ ಹೊರ ರಾಜ್ಯಗಳಿಂದಲೂ ಪಿಒಪಿ ಮೂರ್ತಿಗಳು ಆಮದು ಮಾಡಿಕೊಂಡು ಮಾರಾಟ ಮಾಡಲಾಗುತ್ತಿದೆ. ಕಳೆದ ಹತ್ತು ದಿನಗಳಿಂದ ಬೆಂಗಳೂರಿನಲ್ಲಿಯೇ ಬರೋಬ್ಬರಿ 25 ಸಾವಿರಕ್ಕೂ ಅಧಿಕ ಪಿಒಪಿ ಮೂರ್ತಿಗಳನ್ನು ಜಪ್ತಿ ಮಾಡಲಾಗಿದೆ. ಉಳಿದ 5 ಸಾವಿರ ಮೂರ್ತಿಗಳನ್ನು ಕೆಎಸ್‌ಪಿಸಿಬಿ ಹಾಗೂ ಸ್ಥಳೀಯ ಸಂಸ್ಥೆಯ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪಿಒಪಿ ತಡೆಯುವಲ್ಲಿ ಅಧಿಕಾರಿಗಳು ವಿಫಲ:

ಪಿಒಪಿ ಮೂರ್ತಿಗಳು ಮಾರುಕಟ್ಟೆಗೆ ಬರದಂತೆ ಕ್ರಮ ವಹಿಸಲು ಕೆಎಸ್‌ಪಿಸಿಬಿ ಮತ್ತು ಬಿಬಿಎಂಪಿ ಅಧಿಕಾರಿಗಳು ತಿಂಗಳ ಮೊದಲೇ ಎಚ್ಚೆತ್ತುಕೊಳ್ಳದೇ, ಹಬ್ಬಕ್ಕೆ ಒಂದು ವಾರ ಇರುವಾಗ ಕಸರತ್ತು ಮಾಡುತ್ತಾರೆ. ಯಾವುದೇ ಮಳಿಗೆಗೆ ತೆರಳಿ ಗಣೇಶ ಮೂರ್ತಿ ಕೊಳ್ಳಲು ಮುಂದಾದಲ್ಲಿ ಪಿಒಪಿ ಬೇಕಾ? ಅಥವಾ ಮಣ್ಣಿನದು ಬೇಕಾ ಎಂದು ವ್ಯಾಪಾರಿಗಳು ಕೇಳುತ್ತಾರೆ ಎಂದು ಪರಿಸರವಾದಿಗಳು ದೂರಿದ್ದಾರೆ.

ಪಿಒಪಿ ಜಲಮೂಲದಲ್ಲಿ ವಿಸರ್ಜಿಸಿದರೆ ಕಠಿಣ ಶಿಕ್ಷೆ

ಪಿಒಪಿ ಮೂರ್ತಿ ಮಾರಾಟ ಮತ್ತು ಪ್ರತಿಷ್ಠಾಪನೆ, ಮಾರ್ಗಸೂಚಿ ಉಲ್ಲಂಘನೆ ಇತ್ಯಾದಿಗಳನ್ನು ಮಾಡುವಂತಿಲ್ಲ. ಜಲ (ಮಾಲಿನ್ಯ ನಿಯಂತ್ರಣ ಮತ್ತು ನಿವಾರಣ) ಕಾಯ್ದೆ, 1974ರ ಅಡಿಯಲ್ಲಿ ಪಿಒಪಿ ವಿಗ್ರಹಗಳ ಉತ್ಪಾದನಾ ಘಟಕ ಮುಚ್ಚುವ ಮತ್ತು ಮುಟ್ಟುಗೋಲು ಹಾಕುವುದು. ಪಿಒಪಿ ವಿಗ್ರಹಗಳನ್ನು ಜಲಮೂಲಗಳಲ್ಲಿ ವಿಸರ್ಜಿಸಿದರೆ ಗರಿಷ್ಠ ಆರು ವರ್ಷಗಳ ಕಾರಾಗೃಹ ಶಿಕ್ಷೆ. ಪರಿಸರ ಸಂರಕ್ಷಣಾ ಕಾಯಿದೆ 1986ರ ಪ್ರಕಾರ ಗರಿಷ್ಟ ಒಂದು ಲಕ್ಷ ರು. ದಂಡ ಹಾಗೂ ಐದು ವರ್ಷ ಕಾರಾಗೃಹ ಶಿಕ್ಷೆ ಇದೆ.ಜಪ್ತಿ ಮೂರ್ತಿಗಳ ವಿಲೇವಾರಿಗೆ ಗೊಂದಲ

ಜಪ್ತಿ ಮಾಡಲಾದ ಪಿಒಪಿ ಮೂರ್ತಿಗಳನ್ನು ಸಂಗ್ರಹಿಸಲು ಯಾವುದೇ ಕ್ರಷಿಂಗ್‌ ಘಟಕ ಸಿದ್ಧವಿಲ್ಲ. ಹೀಗಾಗಿ ಅವುಗಳನ್ನು ನಗರದ ವಿವಿಧ ಸುಸಜ್ಜಿತ ಸ್ಥಳದಲ್ಲಿ ಇರಿಸಲಾಗಿದ್ದು, ಯಾವಾಗ, ಎಲ್ಲಿ, ಹೇಗೆ ವಿಲೇವಾರಿ ಮಾಡಬೇಕೆಂಬುದರ ಬಗ್ಗೆ ಅಧಿಕಾರಿಗಳು ಯಾವುದೇ ನಿರ್ಧಾರ ತೆಗೆದುಕೊಳ್ಳಲು ಮುಂದಾಗಿಲ್ಲ. ವಿಗ್ರಹ ವಿಸರ್ಜನೆಗೆ ಸಂಬಂಧಿಸಿದಂತೆ ಯಾವ ಇಲಾಖೆ ಕಾರ್ಯನಿರ್ವಹಿಸುತ್ತದೆ ಎಂದು ಸ್ಪಷ್ಟ ಮಾಹಿತಿ ಇಲ್ಲ. ಆದರೆ ಪಿಒಪಿ ಮೂರ್ತಿಗಳನ್ನು ಪರಿಸರಕ್ಕೆ ಹಾನಿಯಾಗದಂತೆ ಸ್ಥಳೀಯ ಆಡಳಿತದ ಸಹಕಾರದೊಂದಿಗೆ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಲಾಗುವುದು ಎಂದು ಕೆಎಸ್‌ಪಿಸಿಬಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಪಿಒಪಿ ಮೂರ್ತಿಗಳ ಜಪ್ತಿ ವಿವರ

ಗುಡಿಮಾವು (ಕುಂಬಳಗೋಡು)25,000

ವಂಡರ್‌ ಲಾ (ಹೆಜ್ಜಾಲ)400

ಕೆಂಗೇರಿ800

ಮಾರಸಂದ್ರ451

ಹೆಮ್ಮಿಗೆಪುರ300

ಹುಬ್ಬಳ್ಳಿ400

ಬೆಳಗಾವಿ (ಗೋಕಾಕ್‌)200

ಯಾದಗಿರಿ (ಚಿತ್ತಾಪುರ ರಸ್ತೆ)150

ದಾವಣಗೆರೆ (ಸಂತೆ ಬೆನ್ನೂರು)150

ಬಳ್ಳಾರಿ240

ವಿವಿಧ ಜಿಲ್ಲೆಗಳಲ್ಲಿ2,300

ಒಟ್ಟು30,391ಕೆಎಸ್‌ಪಿಸಿಬಿ ಮಾರ್ಗಸೂಚಿಗಳು

-ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಪಿಒಪಿ ಮೂರ್ತಿಗಳ ತನಿಖೆ ಮಾಡಿ ಸುಪರ್ದಿಗೆ ತೆಗೆದುಕೊಳ್ಳುವುದು.

-ನೈಸರ್ಗಿಕ ವಸ್ತುಗಳಿಂದ ತಯಾರಿಸಿದ ಮೂರ್ತಿಗಳ ಪ್ರತಿಷ್ಠಾಪನೆ.

-ಪ್ಲಾಸ್ಟಿಕ್‌ ಪ್ಲೆಕ್ಸ್‌ ಮತ್ತಿತರ ವಸ್ತುಗಳ ಬಳಕೆ ನಿಷೇಧ.

-ರಾತ್ರಿ 10ರಿಂದ ಬೆಳಗ್ಗೆ 6ರ ತನಕ ಧ್ವನಿ ವರ್ಧಕಗಳ ಬಳಕೆ ನಿಷೇಧ.

-ಹಸಿರು ಪಟಾಕಿ ಹೊರತುಪಡಿಸಿ ರಾಸಾಯನಿಕಯುಕ್ತ ಪಟಾಕಿ ಬಳಸುವಂತಿಲ್ಲ.

-ಸರ್ಕಾರ ಹಾಗೂ ಸ್ಥಳೀಯ ಸಂಸ್ಥೆ ನಿಗದಿ ಪಡಿಸಿರುವ ಸ್ಥಳದಲ್ಲಿ ಗಣೇಶ ಮೂರ್ತಿ ವಿಸರ್ಜನೆ.

-ಮೊಬೈಲ್‌ ಟ್ಯಾಂಕ್‌ ಹಾಗೂ ಕಲ್ಯಾಣಿ ಪಕ್ಕದಲ್ಲಿ ಹಸಿಕಸ ಹಾಗೂ ಒಣಕಸ ಪ್ರತ್ಯೇಕಿಸಿ ಗಣೇಶ ಮೂರ್ತಿ ನೀರಿಗೆ ಬಿಡಬೇಕು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!