ಸಿದ್ದು ಚಿಕ್ಕಬಳ್ಳೇಕೆರೆ

ಬೆಂಗಳೂರು : ಕೇಂದ್ರ ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆ(ಎಂಎಸ್‌ಪಿ)ಯಡಿ ರಾಜ್ಯದ ರೈತರಿಂದ ರಾಗಿ ಖರೀದಿಸುತ್ತಿರುವ ಕಾರ್ಯಕ್ಕೆ ಚುರುಕು ಮುಟ್ಟಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ಖರೀದಿ ಕೇಂದ್ರಗಳ ಸಂಖ್ಯೆ ಹೆಚ್ಚಿಸುವುದು, ಸಮಯ ವಿಸ್ತರಣೆ, ಅಗತ್ಯಬಿದ್ದರೆ ಖರೀದಿ ಅವಧಿ ವಿಸ್ತರಿಸಲು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವುದೂ ಸೇರಿದಂತೆ ರಾಜ್ಯದ ರೈತರಿಗೆ ಸಂಕಷ್ಟ ಉಂಟಾಗದಂತೆ ಮಾಡಲು ಹಲವು ಕ್ರಮಗಳನ್ನು ಕೈಗೊಳ್ಳಲು ಆಹಾರ ಇಲಾಖೆ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.


ಎಂಎಸ್‌ಪಿಯಡಿ 2025-26ನೇ ಸಾಲಿಗೆ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಕ್ಕೆ 6 ಲಕ್ಷ ಮೆಟ್ರಿಕ್‌ ಟನ್‌ ರಾಗಿ ಖರೀದಿಗೆ ಅವಕಾಶ ನೀಡಿದ್ದು ಡಿ.25ಕ್ಕೇ ರಾಜ್ಯ ಸರ್ಕಾರವು ನೋಂದಣಿಯ ‘ಟಾರ್ಗೆಟ್‌’ ತಲುಪಿದೆ. ಈ ಬಾರಿ ರಾಗಿ ಪ್ರಮಾಣ ಹೆಚ್ಚಾಗಿದ್ದರಿಂದ ಹೆಚ್ಚಿನ ಪ್ರಮಾಣದ ಖರೀದಿಗೆ ಅವಕಾಶ ನೀಡಲಾಗಿದೆ. ರಾಗಿ ಖರೀದಿಗೆ ಮಾ.31 ಕೊನೆಯ ದಿನವಾಗಿದ್ದು, ಅವಧಿ ವಿಸ್ತರಿಸುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯವು ಪತ್ರ ಬರೆಯುವ ಸಂಭವವಿದೆ.

80 ಕೇಂದ್ರಗಳಷ್ಟೇ ಆರಂಭ:

ಕೋಲ್ಕತಾದಿಂದ ಗೋಣಿಚೀಲಗಳ ಸರಬರಾಜು ವಿಳಂಬವಾಗಿದ್ದರಿಂದ ಸದ್ಯ 121 ಖರೀದಿ ಕೇಂದ್ರಗಳ ಪೈಕಿ ಸುಮಾರು 80 ಕೇಂದ್ರಗಳಲ್ಲಿ ಮಾತ್ರ ಖರೀದಿ ಪ್ರಾರಂಭವಾಗಿದ್ದು, ಶೀಘ್ರದಲ್ಲೇ ಎಲ್ಲ ಕೇಂದ್ರಗಳಲ್ಲಿ ಪ್ರಕ್ರಿಯೆ ಆರಂಭವಾಗಲಿದೆ. ಬೆಳಿಗ್ಗೆ 8 ಗಂಟೆಯಿಂದ ರಾತ್ರಿ ಏಳೂವರೆಯವರೆಗೂ ರಾಗಿ ಖರೀದಿ ಮಾಡಲು ಶೀಘ್ರದಲ್ಲೇ ಆದೇಶವೂ ಹೊರಬೀಳಲಿದೆ. ಅಗತ್ಯವಾದರೆ ಭಾನುವಾರವೂ ಖರೀದಿ ಕೇಂದ್ರಗಳನ್ನು ತೆರೆದಿರುವಂತೆ ಸೂಚನೆ ನೀಡುವ ಸಾಧ್ಯತೆ ಇದೆ.

ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಬಳ್ಳಾರಿ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳ 2,57,706 ರೈತರು 6 ಲಕ್ಷ ಮೆಟ್ರಿಕ್‌ ರಾಗಿ ಮಾರಾಟ ಮಾಡಲು ನೋಂದಣಿ ಮಾಡಿಕೊಂಡಿದ್ದು, ಈಗಾಗಲೇ 8,852 ರೈತರಿಂದ 19,882 ಮೆಟ್ರಿಕ್‌ ಟನ್‌ ರಾಗಿ ಖರೀದಿಸಲಾಗಿದೆ.

ಇಡೀ ದಿನ ಖರೀದಿ

ಬೇಸಿಗೆ ಹಿನ್ನೆಲೆಯಲ್ಲಿ ರೈತರಿಗೆ ತೊಂದರೆ ಆಗಬಾರದು ಎಂದು ಬೆಳಿಗ್ಗೆ 8 ಗಂಟೆಯಿಂದ ರಾತ್ರಿ ಏಳೂವರೆಯವರೆಗೂ ರಾಗಿ ಖರೀದಿ ಮಾಡಬೇಕು ಎಂದು ಶೀಘ್ರದಲ್ಲೇ ಆದೇಶ ಹೊರಡಿಸಲಾಗುವುದು.

-ಎಂ.ಕೆ.ಜಗದೀಶ್‌, ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ವ್ಯವಸ್ಥಾಪಕ ನಿರ್ದೇಶಕ.