ಅರಸೀಕೆರೆ: ನಗರೋತ್ಥಾನ ನಾಲ್ಕನೇ ಹಂತದಲ್ಲಿ ಬಿಡುಗಡೆಯಾಗಿರುವ 30 ಕೋಟಿ ಅನುದಾನವನ್ನು ಪಕ್ಷಭೇದ ಮಾಡದೆ ನಗರದ ಸಮಗ್ರ ಅಭಿವೃದ್ಧಿಗೆ ಬಳಸಿಕೊಳ್ಳಲಾಗುತ್ತದೆ ಎಂದು ನಗರಸಭೆ ಅಧ್ಯಕ್ಷ ಎಂ. ಸಮಿವುಲ್ಲಾ ಹೇಳಿದರು.
ತಮ್ಮ ವಾರ್ಡ್‌ಗಳಲ್ಲಿ ನಡೆಯುವ ಅಭಿವೃದ್ಧಿ ಕಾಮಗಾರಿಗಳನ್ನು ಸ್ಥಳೀಯ ನಗರಸಭೆ ಸದಸ್ಯರೇ ಉಸ್ತುವಾರಿ ವಹಿಸಿಕೊಂಡರೆ, ಗುತ್ತಿಗೆದಾರರಿಂದ ಗುಣಮಟ್ಟದ ಕಾಮಗಾರಿ ಪಡೆಯುವುದು ಅಷ್ಟೇ ಅಲ್ಲದೆ ತಮಗೂ ಸಹ ಉತ್ತಮ ಹೆಸರು ಬರುತ್ತದೆ ಎಂದು ಕಿವಿಮಾತು ಹೇಳಿದರು.
ನಗರಸಭೆ ಸದಸ್ಯೆ ಶುಭ ಮನೋಜ್ ಮಾತನಾಡಿ, ಬಿಜೆಪಿ ಪಕ್ಷದಿಂದ ನಾನು ಆಯ್ಕೆಯಾಗಿ ನಗರಸಭೆ ಪ್ರವೇಶಿಸಿದ್ದು, ಪ್ರತಿಪಕ್ಷದ ನಾಯಕರಾಗಿರುವ ಶಾಸಕ ಶಿವಲಿಂಗೇಗೌಡರು ಹಾಗೂ ನಗರಸಭೆ ಅಧ್ಯಕ್ಷರ ಮನವೊಲಿಸಿ ವಾರ್ಡಿನ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ. ಇದನ್ನು ಸಹಿಸದ ಕೆಲವರು ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿ, ವಾರ್ಡಿನ ಜನತೆ ನನ್ನ ಮೇಲೆ ಇಟ್ಟಿರುವ ನಂಬಿಕೆ, ವಿಶ್ವಾಸಕ್ಕೆ ಚ್ಯುತಿ ತರುವಂತಹ ಕೆಲಸ ನಾನು ಮಾಡುವುದಿಲ್ಲ ಎಂದರು. ನಗರಸಭೆಯ ಅಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.