ಹಿಂದಿನ ಶಾಸಕರು ತಡೆ ಹಿಡಿಸಿದ್ದಾರೆ । ಶೆಟ್ಟರ್ ಹೆಸರು ಹೇಳದೇ ಟೀಕಿಸಿದ ಟೆಂಗಿನಕಾಯಿ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಮಂಜೂರಾಗಿದ್ದ ₹30 ಕೋಟಿ ಕಾಮಗಾರಿಯನ್ನು ಹಿಂದಿನ ಶಾಸಕರು ತಡೆ ಹಿಡಿದಿದ್ದಾರೆ. ರಾಜಕೀಯ ದುರುದ್ದೇಶದಿಂದ ಇದನ್ನು ತಡೆ ಹಿಡಿಯಲಾಗಿದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಆರೋಪಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆಂಟ್ರಲ್ ಕ್ಷೇತ್ರಕ್ಕೆ ಕಳೆದ ಸರ್ಕಾರದ ಅವಧಿಯಲ್ಲಿ ₹43 ಕೋಟಿ ವೆಚ್ಚದ ರಸ್ತೆ ಕಾಮಗಾರಿಗಳು ಮಂಜೂರಾಗಿದ್ದವು. ಅವುಗಳಲ್ಲಿ ₹30 ಕೋಟಿ ವೆಚ್ಚದ ವಿವಿಧ ರಸ್ತೆ ಕಾಮಗಾರಿಗಳು ಟೆಂಡರ್ ಪ್ರಕ್ರಿಯೆಯಲ್ಲಿದ್ದವು. ಅವುಗಳನ್ನೀಗ ತಡೆ ಹಿಡಿಯಲಾಗಿದೆ ಎಂದರು.ಇದಕ್ಕೆ ತಾಂತ್ರಿಕ ಕಾರಣ ನೀಡಿ ಸರ್ಕಾರ ಪತ್ರ ಬರೆದಿದೆ. ಆದರೆ ಅಲ್ಲಿನ ಅಧಿಕಾರಿಗಳು, ಹಿಂದಿನ ಶಾಸಕರೇ ಒತ್ತಡ ತಂದು ತಡೆ ಹಿಡಿದಿದ್ದಾರೆ ಎಂದು ಹೇಳಿರುವುದಾಗಿ ತಿಳಿಸಿದರು. ಈ ಮೂಲಕ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹೆಸರು ಹೇಳದೇ ಪರೋಕ್ಷವಾಗಿ ಆರೋಪಿಸಿದರು. ಯಾವ್ಯಾವ ರಸ್ತೆ ಕಾಮಗಾರಿಗಳನ್ನು ತಡೆ ಹಿಡಿಯಲಾಗಿದೆ ಎಂಬುದನ್ನು ಮುಂದಿನ ದಿನಗಳಲ್ಲಿ ವಿವರವಾಗಿ ಹೇಳುತ್ತೇನೆ ಎಂದು ನುಡಿದರು. ಆದರೆ, ಜನರಿಗೆ ಸೌಲಭ್ಯ ಕಲ್ಪಿಸಬೇಕಾಗಿರುವುದು ಜನಪ್ರತಿನಿಧಿಗಳ ಕರ್ತವ್ಯ. ಈ ರೀತಿ ಅನುದಾನ ತಡೆಹಿಡಿಯುವುದು ಸರಿಯಲ್ಲ ಎಂದು ನುಡಿದರು.
ಸಂಗೀತ ಗುರುಕುಲ ಸ್ಥಳಾಂತರವಿಲ್ಲ:ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಕ್ಷೇತ್ರ ಹಾಗೂ ಉತ್ತರ ಕರ್ನಾಟಕ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಸಾಕಷ್ಟು ಪ್ರಶ್ನೆಗಳನ್ನು ಕೇಳಿದ್ದೆ. ಗಂಗೂಬಾಯಿ ಹಾನಗಲ್ ಸಂಗೀತ ಗುರುಕುಲವನ್ನು ಸ್ಥಳಾಂತರ ಮಾಡುವುದಿಲ್ಲ ಎಂದು ಸರ್ಕಾರ ತಿಳಿಸಿದೆ. ಇದನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಸೇರ್ಪಡೆಗೂ ಕ್ರಮ ಕೈಗೊಳ್ಳಲಾಗುವುದು ಎಂದರು.
ಕಳೆದ ಸರ್ಕಾರದಲ್ಲಿ ಪ್ರಾರಂಭವಾಗಿರುವ ಎಫ್‌ಎಂಸಿಜಿ ಕ್ಲಸ್ಟರ್‌ನ ಅಭಿವೃದ್ಧಿಗೂ ಕ್ರಮ ಕೈಗೊಳ್ಳಲಾಗುವುದು. ಇಲ್ಲಿ ಬರುತ್ತಿರುವ ಕಂಪನಿಗಳಿಗೆ ಏನೇನು ಸೌಲಭ್ಯ ಬೇಕೋ ಅವುಗಳನ್ನು ಕಲ್ಪಿಸಲು ಪ್ರಯತ್ನಿಸಲಾಗುವುದು ಎಂದರು.ಫ್ಲೈಓವರ್ ನಿರ್ಮಾಣಕ್ಕೆ ಇನ್ನಷ್ಟು ಭೂಸ್ವಾಧೀನ ಮಾಡಿಕೊಳ್ಳಬೇಕಿದೆ. ಜತೆಗೆ ಡಿಪಿಆರ್ ಪರಿವರ್ತನೆ ಕೆಲಸವೂ ಇದೆ. ಈ ಬಗ್ಗೆ ಮುಂದಿನ ವಾರ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಪ್ರಾದೇಶಿಕ ಕ್ಯಾನ್ಸರ್ ಕೇಂದ್ರದ ಬಗ್ಗೆಯೂ ಚರ್ಚೆ ನಡೆಸಿದ್ದೆ. ಇದಕ್ಕೆ ಸ್ಪೀಕರ್ ಕೂಡ ಧ್ವನಿಗೂಡಿಸಿದರು. ಇದರಿಂದಾಗಿ ಮಂಗಳೂರು ಹಾಗೂ ಹುಬ್ಬಳ್ಳಿಗೆ ಕ್ಯಾನ್ಸರ್ ಪ್ರಾದೇಶಿಕ ಕೇಂದ್ರದ ಕುರಿತು ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಕೆಯಾಗಲಿದೆ. ಅದು ಮಂಜೂರಾದರೆ ಸಾಕಷ್ಟು ಅನುಕೂಲವಾಗಲಿದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮ ವಕ್ತಾರ ರವಿ ನಾಯಕ ಸೇರಿದಂತೆ ಹಲವರಿದ್ದರು.