ಧಾರವಾಡ:
ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಿಸಲು 14 ರೈತ ಸಂಪರ್ಕ ಕೇಂದ್ರ ಹಾಗೂ 13 ಹೆಚ್ಚುವರಿ ಬೀಜ ವಿತರಣಾ ಕೇಂದ್ರ ಒಳಗೊಂಡಂತೆ ಒಟ್ಟು 27 ಬೀಜ ವಿತರಣಾ ಕೇಂದ್ರ ತೆರೆಯಲಾಗಿದೆ ಎಂದು ಸಚಿವ ಸಂತೋಷ ಲಾಡ್ ಹೇಳಿದರು.ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕೃಷಿ ಇಲಾಖೆಯಿಂದ ಪ್ರಸಕ್ತ ಸಾಲಿನ ಹಿಂಗಾರು ಹಂಗಾಮಿಗೆ ವಿತರಿಸುವ ವಿವಿಧ ಬೀಜಗಳನ್ನು ರೈತರಿಗೆ ವಿತರಿಸಿ, ಮಾತನಾಡಿದರು.
ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು, ಹಿಂಗಾರು ಬಿತ್ತನೆ ಪ್ರಾರಂಭವಾಗಿದೆ. ಕೃಷಿ ಇಲಾಖೆಯು ಹಿಂಗಾರು ಹಂಗಾಮಿಗೆ ಕಡಲೆ, ಗೋದಿ, ಜೋಳ, ಮೆಕ್ಕೆಜೋಳ, ಶೇಂಗಾ ಹಾಗೂ ವಿವಿಧ ಬೆಳೆಗಳ ಬೀಜಗಳನ್ನು ರಿಯಾಯಿತಿ ದರದಲ್ಲಿ ರೈತರಿಗೆ ಮಾರಾಟ ಮಾಡಲಾಗುತ್ತಿದೆ. ರೈತರು ಇದರ ಸದುಪಯೋಗ ಪಡೆಯಬೇಕೆಂದು ಹೇಳಿದರು.ಅಳ್ನಾವರ, ಧಾರವಾಡ, ಅಮ್ಮಿನಭಾವಿ, ಹೆಚ್ಚುವರಿ ಬೀಜ ವಿತರಣಾ ಕೇಂದ್ರ ನರೇಂದ್ರ, ಹೆಬ್ಬಳ್ಳಿ, ಉಪ್ಪಿನ ಬೆಟಗೇರಿ, ಕಲಘಟಗಿ, ತ.ಹೊನ್ನಳ್ಳಿ, ದುಮ್ಮವಾಡ. ಛಬ್ಬಿ, ಶಿರಗುಪ್ಪಿ, ಹುಬ್ಬಳ್ಳಿ, ಹೆಚ್ಚುವರಿ ಬೀಜ ವಿತರಣಾ ಕೇಂದ್ರ ನೂಲ್ವಿ, ಕುಸುಗಲ್ಲ, ಕೋಳಿವಾಡ, ಬಿಡನಾಳ. ಕುಂದಗೋಳ, ಸಂಶಿ. ಹೆಚ್ಚುವರಿ ಬೀಜ ವಿತರಣಾ ಕೇಂದ್ರ ಯಲಿವಾಳ, ಶಿರೂರು, ಅಣ್ಣಿಗೇರಿ, ಮೊರಬ್ಬ ಯರಗುಪ್ಪಿ, ಹೆಚ್ಚುವರಿ ಬೀಜ ವಿತರಣಾ ಕೇಂದ್ರ ಶಲವಡಿ, ನವಲಗುಂದಗಳಲ್ಲಿ ರೈತರಿಗೆ ಬೀಜ ವಿತರಣೆ ಮಾಡಲಾಗುತ್ತಿದೆ ಎಂದರು.
ರೈತರು ಕಡಲೆ, ಗೋದಿ, ಜೋಳ, ಮೆಕ್ಕೆಜೋಳ, ಶೇಂಗಾ ಹಾಗೂ ವಿವಿಧ ಬೆಳೆಗಳನ್ನು ಹಿಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡುತ್ತಾರೆ. ಹಾಗಾಗಿ ಇಲಾಖೆ ವತಿಯಿಂದ ಸಹಾಯಧನದಡಿ ಬೀಜ ವಿತರಿಸಲು ಕಡಲೆ 28,799 ಕ್ವಿಂಟಲ್, ಗೋಧಿ 385 ಕ್ವಿಂಟಲ್, ಜೋಳ 300 ಕ್ವಿಂಟಲ್, ನೆಲಗಡಲೆ 276 ಕ್ವಿಂಟಲ್ ಹಾಗೂ ಇನ್ನಿತರೆ ಬೀಜ ಒಳಗೊಂಡಂತೆ ಒಟ್ಟು 29906 ಕ್ವಿಂಟಲ್ ಬಿತ್ತನೆ ಬೀಜ ವಿತರಣೆ ಗುರಿ ಹೊಂದಲಾಗಿದೆ. ಈಗಾಗಲೇ ವಿವಿಧ ಇನ್ನಿತರೆ ಬೀಜ ಉತ್ಪಾದನಾ ಸಂಸ್ಥೆಗಳ ಬೀಜಗಳನ್ನು ಎಲ್ಲ ಬೀಜ ವಿತರಣಾ ಕೇಂದ್ರಗಳಲ್ಲಿ ದಾಸ್ತಾನು ಮಾಡಲಾಗಿದ್ದು ವಿತರಣೆ ಪ್ರಾರಂಭವಾಗಿದೆ ಎಂದು ಹೇಳಿದರು.ಈ ವೇಳೆ ಶಾಸಕ ಎನ್.ಎಚ್. ಕೋನರಡ್ಡಿ, ಜಿಪಂ ಸಿಇಒ ಭುವನೇಶ ಪಾಟೀಲ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಕೃಷಿ ಇಲಾಖೆ ಜಂಟಿ ನಿದೇರ್ಶಕ ಮಂಜುನಾಥ ಅಂತರವಳ್ಳಿ ಸೇರಿದಂತೆ ಕೃಷಿ ಇಲಾಖೆ ಅಧಿಕಾರಿಗಳು, ರೈತ ಮುಖಂಡರು, ರೈತರು ಹಾಗೂ ಇತರರು ಇದ್ದರು.