ಮಂಡ್ಯ ಮಂಜುನಾಥ
ಕೆಆರ್‌ಎಸ್ ಬಳಿ ಅಮ್ಯೂಸ್‌ಮೆಂಟ್ ಪಾರ್ಕ್ ನಿರ್ಮಾಣದ ಹಠಕ್ಕೆ ಬಿದ್ದಿರುವ ರಾಜ್ಯ ಸರ್ಕಾರ ಕೆಆರ್‌ಎಸ್ ಗ್ರಾಮ ಪಂಚಾಯ್ತಿಗೆ ಸೇರಿದ ಆಸ್ತಿಗಳನ್ನು ಗುರಿಯಾಗಿಸಿಕೊಂಡು ಗ್ರಾಮ ಪಂಚಾಯ್ತಿ ಗಮನಕ್ಕೆ ಬಾರದಂತೆ ಅವೆಲ್ಲವನ್ನೂ ಕಾವೇರಿ ನೀರಾವರಿ ನಿಗಮದ ಹೆಸರಿಗೆ ಅಕ್ರಮ ಖಾತೆ ಮಾಡಿಸಿಕೊಂಡಿರುವುದು ಕಂಡುಬಂದಿದೆ.
ಆರಂಭದಲ್ಲೇ ಕೆಆರ್‌ಎಸ್ ಸುತ್ತಲಿನ ರೈತರ ಜಮೀನಿನ ಸ್ವಾಧೀನಕ್ಕೆ ಮುಂದಾದರೆ ಕಾನೂನಾತ್ಮಕ ಅಡಚಣೆಗಳು ಎದುರಾಗಬಹುದೆಂಬುದನ್ನು ಮನಗಂಡು ಗ್ರಾಮ ಪಂಚಾಯ್ತಿಗೆ ಸೇರಿದ ಆಸ್ತಿಗಳನ್ನು ಯಾರಿಗೂ ಹೇಳದೆ ಕೇಳದೆ ಪಾಂಡವಪುರ ಉಪವಿಭಾಗಾಧಿಕಾರಿಗಳ ಆದೇಶದಂತೆ ಖಾತೆ ಮಾಡಿಕೊಟ್ಟಿದೆ. ಇದುವರೆಗೂ ಶ್ರೀರಂಗಪಟ್ಟಣ ಹಾಗೂ ಪಾಂಡವಪುರ ವ್ಯಾಪ್ತಿಯಲ್ಲಿ ಸುಮಾರು ೩೦೦ ಎಕರೆ ಪಂಚಾಯ್ತಿಗೆ ಸೇರಿದ ಭೂಮಿಯನ್ನು ಅಕ್ರಮವಾಗಿ ಖಾತೆಯಾಗಿರುವುದಾಗಿ ತಿಳಿದುಬಂದಿದೆ.ಕೆಆರ್‌ಎಸ್ ಗ್ರಾಪಂಗೆ ೩೧.೮.೧೯೭೯ರಲ್ಲಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿ ಚಿಕ್ಕಯಾರಹಳ್ಳಿ, ಮಂಗಹಳ್ಳಿ, ಹುಲಿಕೆರೆ ವ್ಯಾಪ್ತಿಯ ೮೬೬ ಎಕರೆ ಪ್ರದೇಶವನ್ನು ನೀಡಿತ್ತು. ಅಣೆಕಟ್ಟು ಮತ್ತು ಅಣೆಕಟ್ಟು ಒಳಗಿರುವ ಜಾಗವನ್ನು ಹೊರತುಪಡಿಸಿ ೮೫೬.೩೬ ಎಕರೆ ಪ್ರದೇಶವನ್ನು ಕೆಆರ್‌ಎಸ್ ಗ್ರಾಪಂಗೆ ಹಸ್ತಾಂತರ ಮಾಡಲಾಗಿತ್ತು. ಇದರಲ್ಲಿ ಹೊಂಗಹಳ್ಳಿಗೆ ಸೇರಿದ ೬೯೩.೧೯ ಎಕರೆ, ಚಿಕ್ಕಯಾರಹಳ್ಳಿಗೆ ಸೇರಿದ ೧೨೬.೨೧ ಎಕರೆ ಮತ್ತು ಹುಲಿಕೆರೆಗೆ ಸೇರಿದ ೩೬.೨೪ ಎಕರೆ ಪ್ರದೇಶ ಸೇರಿತ್ತು.
ಕೆಆರ್‌ಎಸ್ ಗ್ರಾಪಂಗೆ ಯಾವುದೇ ನೋಟಿಸ್ ನೀಡದೆ, ಅಧ್ಯಕ್ಷರು-ಸದಸ್ಯರೊಂದಿಗೆ ಚರ್ಚಿಸದೆ ಏಕಾಏಕಿ ಪಂಚಾಯ್ತಿಗೆ ಸೇರಿದ ಆಸ್ತಿಗಳನ್ನು ಅಕ್ರಮವಾಗಿ ಖಾತೆ ಮಾಡಲಾಗಿದೆ. ಯಾವ ಉದ್ದೇಶಕ್ಕೆ, ಯಾವ ಮಾನದಂಡ ಅನುಸರಿಸಿ ಖಾತೆ ಮಾಡಲಾಗಿದೆ ಎಂಬ ಪಂಚಾಯ್ತಿಯವರ ಪ್ರಶ್ನೆಗೆ ಯಾರಿಂದಲೂ ಉತ್ತರ ಮಾತ್ರ ದೊರಕುತ್ತಿಲ್ಲ.
ಯೋಜನೆ ನಿರ್ಮಾಣವಾಗುವ ನಕ್ಷೆಯ ಪ್ರಕಾರ ಯಾವ ಭಾಗದಲ್ಲಿ ಕೃಷಿ ಜಮೀನಿದೆಯೋ ಅದನ್ನು ಭೂ ಪರಿವರ್ತನೆ ಮಾಡಿಕೊಡುತ್ತಿಲ್ಲ. ಇದು ಕೂಡ ರೈತರ ಆತಂಕಕ್ಕೆ ಕಾರಣವಾಗಿದೆ. ಈ ಭೂಮಿ ಅಮ್ಯೂಸ್‌ಮೆಂಟ್ ಪಾರ್ಕ್‌ಗೆ ಒಳಪಟ್ಟಿರಬಹುದೆಂಬ ಭಯದಲ್ಲೇ ದಿನದೂಡುತ್ತಿದ್ದಾರೆ.
ಇದರಿಂದ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ ಇದೀಗ ಮೃದು ಧೋರಣೆ ಅನುಸರಿಸುತ್ತಾ ಈಗ ಗ್ರಾಮ ಪಂಚಾಯ್ತಿ ಪ್ರತಿನಿಧಿಗಳ ಸಭೆ ಕರೆಯುವುದು, ರೈತ ಸಂಘಟನೆಗಳ ಮುಖಂಡರು, ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸುವ ಕಾರ್ಯಕ್ಕೆ ಮುಂದಾಗಿದೆ. ಉಪ ಮುಖ್ಯಮಂತ್ರಿಗಳ ತಾಂತ್ರಿಕ ಸಲಹೆಗಾರರನ್ನು ಕಳುಹಿಸಿ ಯೋಜನೆಯ ವಿವರಣೆ ನೀಡುವ ಕ್ರಮವನ್ನು ಸರ್ಕಾರ ಅನುಸರಿಸುತ್ತಿದೆ. ಈ ಮೊದಲು ಯೋಜನೆ ವಿಚಾರದಲ್ಲಿ ತನಗಿಷ್ಟಬಂದ ರೀತಿಯಲ್ಲಿ ವರ್ತಿಸುತ್ತಾ ಮುನ್ನುಗ್ಗುತ್ತಿದ್ದ ಸರ್ಕಾರಕ್ಕೆ ನ್ಯಾಯಾಲಯ ಮೂಗುದಾರ ಹಾಕಿದೆ.ಕಾವೇರಿ ಆರತಿ ಕಾಮಗಾರಿಗೆ ವೇಗ
ಕೆಆರ್‌ಎಸ್ ಅಣೆಕಟ್ಟು ವೀಕ್ಷಣೆಗೆ ಭದ್ರತೆ ದೃಷ್ಟಿಯಿಂದ ಜನರನ್ನು ಸನಿಹಕ್ಕೆ ಹೋಗುವುದಕ್ಕೆ ಬಿಡದ ಅಧಿಕಾರಿಗಳು ಅಣೆಕಟ್ಟು ಬುಡದಲ್ಲೇ ಕಾಮಗಾರಿಯನ್ನು ನಡೆಸುತ್ತಿರುವುದು ವಿಪರ್ಯಾಸ, ದುರಂತದ ಸಂಗತಿಯಾಗಿದೆ.ಕೆಆರ್‌ಎಸ್ ಪಂಚಾಯ್ತಿಗೆ ಸೇರಿದ ಆಸ್ತಿಗಳನ್ನು ಒಂದೇ ದಿನದಲ್ಲಿ ಯಾರ ಗಮನಕ್ಕೂ ತರದೆ ಕಾವೇರಿ ನೀರಾವರಿ ನಿಗಮದ ಹೆಸರಿಗೆ ಖಾತೆ ಮಾಡಿಕೊಡಲಾಗಿದೆ. ಯಾವ ಮಾನದಂಡ ಅನುಸರಿಸಿ ಖಾತೆ ಮಾಡಲಾಗಿದೆ ಎಂದು ಪ್ರಶ್ನಿಸಿದರೆ ಉಪವಿಭಾಗಾಧಿಕಾರಿ ಆದೇಶದಂತೆ ಖಾತೆ ಮಾಡಿರುವುದಾಗಿ ಹೇಳುತ್ತಿದ್ದಾರೆ.