ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ಜೈಲುವಾಸಕ್ಕೆ 300 ದಿನ!

KannadaprabhaNewsNetwork |  
Published : Apr 04, 2025, 12:48 AM ISTUpdated : Apr 04, 2025, 04:44 AM IST
ಪ್ರಜ್ವಲ್‌ ರೇವಣ್ಣ | Kannada Prabha

ಸಾರಾಂಶ

ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಅವರ ಜೈಲು ವಾಸ 10 ತಿಂಗಳು (ಸುಮಾರು 300 ದಿನ) ಪೂರೈಸಿದೆ. ಕಳೆದ ವರ್ಷ ಮೇ 31ರಂದು ಬಂಧನಕ್ಕೊಳಗಾದ ಪ್ರಜ್ವಲ್‌ ಅವರು ಇನ್ನೆರಡು ತಿಂಗಳು ಕಳೆದರೆ 1 ವರ್ಷ ಜೈಲು ವಾಸ ಅನುಭವಿಸಿದಂತಾಗುತ್ತದೆ.

 ಬೆಂಗಳೂರು : ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಅವರ ಜೈಲು ವಾಸ 10 ತಿಂಗಳು (ಸುಮಾರು 300 ದಿನ) ಪೂರೈಸಿದೆ. ಕಳೆದ ವರ್ಷ ಮೇ 31ರಂದು ಬಂಧನಕ್ಕೊಳಗಾದ ಪ್ರಜ್ವಲ್‌ ಅವರು ಇನ್ನೆರಡು ತಿಂಗಳು ಕಳೆದರೆ 1 ವರ್ಷ ಜೈಲು ವಾಸ ಅನುಭವಿಸಿದಂತಾಗುತ್ತದೆ.

ಜೈಲು ಸೇರಿದಾಗಿನಿಂದ ಜಾಮೀನು ಕೋರಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಿಂದ ಸುಪ್ರೀಂಕೋರ್ಟ್‌ ಮೆಟ್ಟಿಲು ಏರಿದರೂ ಜಾಮೀನು ಭಾಗ್ಯ ಸಿಕ್ಕಿಲ್ಲ. ಎಲ್ಲ ನ್ಯಾಯಾಲಯಗಳು ಜಾಮೀನು ಅರ್ಜಿಯನ್ನು ತಿರಸ್ಕರಿಸುತ್ತಿರುವುದರಿಂದ ಪ್ರಜ್ವಲ್‌ ರೇವಣ್ಣ ಜೈಲಿನಲ್ಲಿಯೇ ದಿನದೂಡುವಂತಾಗಿದೆ.

ಅದರಲ್ಲೂ ಜನಪ್ರತಿನಿಧಿಗಳ ನ್ಯಾಯಾಲಯ, ಹೈಕೋರ್ಟ್‌ನಲ್ಲಿ ಬೇರೆ ಬೇರೆ ಕಾರಣಗಳನ್ನು ಇಟ್ಟುಕೊಂಡು ಹಲವು ಬಾರಿ ಜಾಮೀನು ಅರ್ಜಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಬಳಿಕ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದರು. ಅಲ್ಲಿಯೂ ಯಾವುದೇ ಪ್ರಯೋಜನವಾಗಲಿಲ್ಲ.

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಪ್ರಕರಣ ಸಂಬಂಧ ಇತರೆ ಅರ್ಜಿಗಳ ವಿಚಾರಣೆ ನಡೆಸುತ್ತಿದ್ದು, ಅವುಗಳ ತೀರ್ಪು ಪ್ರಕಟಿಸಿದ ಬಳಿಕ ಜಾಮೀನು ಅರ್ಜಿಯ ವಿಚಾರಣೆ ನಡೆಯುವ ನಿರೀಕ್ಷೆ ಇದೆ ಎಂದು ಹೇಳಲಾಗಿದೆ. ಅಲ್ಲಿಯವರೆಗೆ ಪ್ರಜ್ವಲ್‌ ರೇವಣ್ಣ ಜೈಲಿನಲ್ಲಿಯೇ ಇರಬೇಕಾಗುತ್ತದೆ ಎಂಬುದು ಕಾನೂನು ತಜ್ಞರ ಅಭಿಪ್ರಾಯವಾಗಿದೆ.

ಪ್ರಕರವೇನು?:

2024ರ ಏಪ್ರಿಲ್ ತಿಂಗಳಲ್ಲಿ ಲೋಕಸಭಾ ಚುನಾವಣೆ ಆರಂಭವಾಗುತ್ತಿದ್ದಂತೆ ಹಾಸನ ಜಿಲ್ಲೆಯಲ್ಲಿ ಪ್ರಜ್ವಲ್ ರೇವಣ್ಣ ವಿರುದ್ಧದ ಅಶ್ಲೀಲ ವಿಡಿಯೋಗಳ ಪೆನ್‌ಡ್ರೈವ್ ವೈರಲ್ ಆಗಿದ್ದವು. ರಾಜ್ಯದಲ್ಲಿ ಮೊದಲ ಹಂತದ ಚುನಾವಣೆ ವೇಳೆ ವಿಷಯ ಬಯಲಾಗಿದ್ದು, ಏ.27ರಂದು ರಾಜ್ಯದಲ್ಲಿ ಮೊದಲ ಹಂತದ ಚುನಾವಣೆ ಮುಗಿಯುತ್ತಿದ್ದಂತೆ ಪ್ರಜ್ಬಲ್ ರೇವಣ್ಣ ಪರದೇಶಕ್ಕೆ ಹೋಗಿದ್ದರು. ಪ್ರಕರಣದ ತನಿಖೆಗೆ ಸರ್ಕಾರವು ವಿಶೇಷ ತನಿಖಾ ತಂಡ ರಚನೆ ಮಾಡಿತ್ತು. ಬಳಿಕ ಎಸ್‌ಐಟಿ ತನಿಖೆ ಕೈಗೊಂಡು ಹಲವು ಬಾರಿ ಲುಕ್‌ಔಟ್‌ ನೊಟೀಸ್‌ ಜಾರಿ ಮಾಡಿತ್ತು.

ಮೇ 27ರಂದು ವಿಡಿಯೋ ಸಂದೇಶ ಮೂಲಕ ಪ್ರಜ್ವಲ್‌ ರೇವಣ್ಣ, 31 ರಂದು ದೇಶಕ್ಕೆ ವಾಪಸ್ ಆಗಿ, ಎಸ್‌ಐಟಿ ಮುಂದೆ ಹಾಜರಾಗಿ ವಿಚಾರಣೆಗೆ ಹಾಜರಾಗುತ್ತೇನೆ ಎಂದು ತಿಳಿಸಿದ್ದರು. ಮೇ 30ರಂದು ಮ್ಯೂನಿಚ್‌‌ನಿಂದ ಲುಫ್ತಾನ್ಸಾ ಏರ್‌ಲೈನ್ಸ್‌ನಲ್ಲಿ ಬೆಂಗಳೂರಿಗೆ ಪ್ರಯಾಣ ಬೆಳೆಸಿ ಮೇ 31ರಂದು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಜ್ವಲ್ ರೇವಣ್ಣ ಆಗಮಿಸಿದ ವೇಳೆ ಎಸ್‌ಐಟಿಯಿಂದ ಬಂಧಿಸಿ ವಿಚಾರಣೆಗೊಳಪಡಿಸಿತ್ತು.

ಮತ್ತೆ ಪ್ರಜ್ವಲ್‌ ಜಾಮೀನು ಅರ್ಜಿ ವಜಾ

 ಅತ್ಯಾಚಾರ ಪ್ರಕರಣದಲ್ಲಿ ಜೈಲಿನಲ್ಲಿರುವ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶಾಕ್‌ ನೀಡಿದ್ದು, ಪ್ರಕರಣದಿಂದ ತಮ್ಮನ್ನು ಕೈಬಿಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.ತಮ್ಮ ಪಾತ್ರ ಇಲ್ಲದಿರುವ ಕಾರಣ ತಮ್ಮವಿರುದ್ಧ ಪ್ರಕರಣದಿಂದ ಕೈಬಿಡಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದ್ದರು. ಗುರುವಾರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶ ಸಂತೋಷ್‌ ಗಜಾನನ ಭಟ್‌ ಅವರು, ಪ್ರಕರಣವು ಗಂಭೀರ ಸ್ವರೂಪದಿಂದ ಕೂಡಿದೆ. ಅಲ್ಲದೇ ಆರೋಪಿ ವಿರುದ್ಧ ಗಂಭೀರ ಆರೋಪ ಇರುವ ಕಾರಣ ಕೈಬಿಡಲು ಸಾಧ್ಯವಿಲ್ಲ ಎಂದು ಹೇಳಿ ಅರ್ಜಿಯನ್ನು ವಜಾಗೊಳಿಸಿದರು. ಪ್ರಕರಣದ ವಿಚಾರಣೆಯನ್ನು ಕೋರ್ಟ್‌ ಏ.9ಕ್ಕೆ ಮುಂದೂಡಿದೆ.

ಪ್ರಕರಣದಲ್ಲಿ ಆರೋಪಿಯ ವಿರುದ್ಧ ಕೆಲವೊಂದು ಬಲವಾದ ಸಾಕ್ಷ್ಯಗಳಿವೆ. ಎಲೆಕ್ಟ್ರಾನಿಕ್ಸ್ ಸಾಕ್ಷಿಗಳು, ಆರೋಪಿ ಮೊಬೈಲ್‌ನಲ್ಲಿದ್ದ ಸಾಕ್ಷಿಗಳು ಆರೋಪಿಯ ದೌರ್ಜನ್ಯದ ಪ್ರಮುಖ ಸಾಕ್ಷಿಯಾಗಿದೆ ಎಂದು ಎಸ್‌ಐಟಿ ಅಧಿಕಾರಿಗಳು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ. ಅದನ್ನು ಪರಿಗಣಿಸಿ ಅರ್ಜಿಯನ್ನು ತಿರಸ್ಕರಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ.--

ಬೇಲ್‌ ಸಿಗದ ಕಾರಣ ಕಣ್ಣೀರು!

ಗುರುವಾರ ಜಾಮೀನು ಅರ್ಜಿ ವಿಚಾರಣೆ ವೇಳೆ ಪ್ರಜ್ವಲ್‌ ವಿರುದ್ಧದ ಆರೋಪಗಳನ್ನು ನ್ಯಾಯಾಲಯ ಉಲ್ಲೇಖಿಸಿ ಅರ್ಜಿಯನ್ನು ವಜಾಗೊಳಿಸಿತು. ಆಗ ಪ್ರಜ್ವಲ್‌ ರೇವಣ್ಣ ಕಣ್ಣೀರು ಹಾಕಿದ ಪ್ರಸಂಗ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ