ಬೆಂಗಳೂರು : ರಾಜ್ಯ ಸರ್ಕಾರದ ಬೆಲೆ ಏರಿಕೆ ಧೋರಣೆ ಖಂಡಿಸಿ ಜನಾಕ್ರೋಶ ಮೊಳಗಿಸಿದ ಪ್ರತಿಪಕ್ಷ ಬಿಜೆಪಿ ತನ್ನ ಅಹೋರಾತ್ರಿ ಧರಣಿ ಮುಂದುವರಿಸಿ ಮುಖ್ಯಮಂತ್ರಿ ನಿವಾಸಕ್ಕೆ ಮುತ್ತಿಗೆ ಹಾಕಲು ಮುಂದಾದಾಗ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಕೆಲಕಾಲ ವಾಗ್ವಾದ, ತಳ್ಳಾಟ ನಡೆದ ಪ್ರಸಂಗ ನಡೆಯಿತು. ಈ ವೇಳೆ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿ, ನಂತರ ಬಿಡುಗಡೆ ಮಾಡಿದರು.
ಬುಧವಾರದಿಂದ ಆರಂಭಗೊಂಡ ಅಹೋರಾತ್ರಿ ಧರಣಿ ಗುರುವಾರ ಬೆಳಗ್ಗೆ ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕುವವರೆಗೆ ನಡೆಯಿತು. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಗುರುವಾರವೂ ಧರಣಿಯಲ್ಲಿ ಭಾಗಿಯಾಗಿದ್ದು ಪ್ರತಿಭಟನಾನಿರತರಿಗೆ ಹೊಸ ಹುರುಪು ತಂದಿತು. ಮುಂಜಾಗ್ರತಾ ಕ್ರಮವಾಗಿ ಪ್ರತಿಭಟನಾ ಸ್ಥಳದಲ್ಲಿ ಖಾಕಿ ಸರ್ಪಗಾವಲು ಹಾಕಲಾಗಿತ್ತು. ಆದರೂ ಮುತ್ತಿಗೆಗೆ ಯತ್ನಿಸಿದಾಗ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್, ಎಂಎಲ್ಸಿ ಛಲವಾದಿ ನಾರಾಯಣಸ್ವಾಮಿ ಸೇರಿ ನೂರಾರು ಬಿಜೆಪಿ ನಾಯಕರು, ಕಾರ್ಯಕರ್ತರನ್ನು ತಡೆಯಲಾಯಿತು. ಈ ವೇಳೆ ತಳ್ಳಾಟ ನಡೆಯಿತು. ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಎಲ್ಲರನ್ನೂ ಬಂಧಿಸಿದರು.
ಈ ವೇಳೆ ಬ್ಯಾರಿಕೇಡ್ ಮೇಲೆ ಹತ್ತಿದ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಇದೇ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ರಸ್ತೆಯಲ್ಲಿ ಬೆಂಕಿ ಹಚ್ಚಲೆತ್ನಿಸಿದರು. ಅದಕ್ಕೆ ಪೊಲೀಸರು ಅವಕಾಶ ಕೊಡಲಿಲ್ಲ. ಅಲ್ಲದೆ, ರಾವಣನ ಮುಖವಾಡದಲ್ಲಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಸಚಿವರ ಫೋಟೋಗಳನ್ನು ದಹಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಲಾಯಿತು.
ಮುಖ್ಯಮಂತ್ರಿ ನಿವಾಸಕ್ಕೆ ಮುತ್ತಿಗೆ ಹಾಕಲೆತ್ನಿಸಿ ಬಂಧನಕ್ಕೊಳಗಾಗುವ ಮೂಲಕ ಅಹೋರಾತ್ರಿ ಧರಣಿ ಮುಕ್ತಾಯಗೊಳಿಸಲಾಯಿತು. ಇನ್ನು ಶುಕ್ರವಾರದಿಂದ ರಾಜ್ಯಾದ್ಯಂತ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ನಡೆಸಿದ್ದು, ಸೋಮವಾರದಿಂದ ಬೆಲೆ ಏರಿಕೆ ಕುರಿತು ಜನಜಾಗೃತಿ ಮೂಡಿಸುವ ಸಲುವಾಗಿ ಜನಾಕ್ರೋಶ ಯಾತ್ರೆ ಆರಂಭಿಸಲಿದೆ.
ಇದಕ್ಕೂ ಮುನ್ನ ಜನರ ಜೇಬಿಗೆ ಕನ್ನ ಹಾಕಿರುವ ಬೆಲೆ ಏರಿಕೆ ಹಿಂಪಡೆಯುವಂತೆ ರಾಜ್ಯ ಬಿಜೆಪಿ ಹಕ್ಕೊತ್ತಾಯ ಮಂಡಿಸಿತು. ಕಾಂಗ್ರೆಸ್ ಸರ್ಕಾರ ಮನಸೋ ಇಚ್ಛೆ ಬೆಲೆ ಏರಿಕೆ ಮಾಡಿ ಜನರ ಬದುಕು ದುಸ್ತರ ಮಾಡುತ್ತಿರುವುದನ್ನು ತೀವ್ರವಾಗಿ ಖಂಡಿಸಲಾಯಿತು. ಕಳೆದೆರಡು ವರ್ಷದಲ್ಲಿ ಆದಾಯ ಸಂಗ್ರಹದ ನೆಪದಲ್ಲಿ 50ಕ್ಕೂ ಹೆಚ್ಚು ವಸ್ತುಗಳ ಬೆಲೆಯೇರಿಕೆ ಮಾಡಿ ರಾಜ್ಯ ಸರ್ಕಾರ ಗಿನ್ನಿಸ್ ಬುಕ್ ಆಫ್ ದಾಖಲೆಗೆ ಸೇರ್ಪಡೆಯಾಗಲು ಅರ್ಹತೆ ಗಳಿಸಿದೆ ಎಂದು ವ್ಯಂಗ್ಯವಾಡಿದೆ.
ಕೇಂದ್ರ ಸರ್ಕಾರ ಇಂಧನ ತೆರಿಗೆ ಕಡಿತಗೊಳಿಸಿ 5 ರು. ಕಡಿಮೆ ಮಾಡಿದರೆ, ಸಿದ್ದರಾಮಯ್ಯ ಸರ್ಕಾರ ಎರಡು ವರ್ಷದಲ್ಲಿ 5.50 ರು. ಡೀಸೆಲ್ ಬೆಲೆ ಮತ್ತು ಪೆಟ್ರೋಲ್ ದರ 3.50 ರು. ಹೆಚ್ಚಿಸಿ ಜನರ ತಲೆ ಮೇಲೆ ಚಪ್ಪಡಿ ಎಳೆದಿದೆ. ಎರಡು ವರ್ಷದಲ್ಲಿ ಸಿದ್ದರಾಮಯ್ಯ ಆಡಳಿತ ಅವರ ನಕಲಿ ಸಮಾಜವಾದಿ ಮುಖವಾಡ ಕಳಚಿ ಬಿದ್ದಿದೆ.
ಅವರು ಬಡವರ ಮತ್ತು ಮಧ್ಯಮ ವರ್ಗದವರ ಬಗ್ಗೆ ಕನಿಷ್ಠ ಕಾಳಜಿಯೂ ಇಲ್ಲದ ಹೃದಯಹೀನ ಸರ್ಕಾರದ ನಾಯಕರಾಗಿದ್ದಾರೆ. 16 ಬಾರಿ ದಾಖಲೆಯ ಮುಂಗಡ ಪತ್ರ ಮಂಡಿಸಿ ಹೆಮ್ಮೆ ಪಡುವ ಸಿದ್ದರಾಮಯ್ಯನವರಿಗೆ ದಾಖಲೆಯ ಬೆಲೆಯೇರಿಕೆಯ ಶ್ರೇಯಸ್ಸು ಸೇರುತ್ತದೆ. ಪ್ರಜಾಪ್ರಭುತ್ವ ಮೌಲ್ಯಗಳಿಗೆ ತಿಲಾಂಜಲಿ ನೀಡಿ ಅಸಂವಿಧಾನಿಕವಾಗಿ ರಾಜ್ಯ ಸರ್ಕಾರ ನಡೆದುಕೊಳ್ಳುತ್ತಿದೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.