ಮಂಡ್ಯ : ಮದುವೆಯಾದ ಮರುದಿನವೇ ಪತಿಗೆ ಕೈಕೊಟ್ಟ ಪತ್ನಿ ಲಕ್ಷಾಂತರ ರು. ಹಣ ಮತ್ತು ಚಿನ್ನಾಭರಣ ಪಡೆದು ವಂಚಿಸಿ ಪರಾರಿಯಾಗಿರುವ ಘಟನೆ ತಾಲೂಕಿನ ಉಮ್ಮಡಹಳ್ಳಿ ಗೇಟ್ ಬಳಿ ನಡೆದಿದೆ.
ಮದ್ದೂರು ತಾಲೂಕು ಕೆಸ್ತೂರು ಗ್ರಾಮದ ಪುಟ್ಟಸ್ವಾಮಿ ಪುತ್ರಿ ಕೆ.ಪಿ.ವೈಷ್ಣವಿ ಎಂಬಾಕೆಯೇ ಪತಿಗೆ ವಂಚಿಸಿರುವ ಪತ್ನಿ. ಮಂಡ್ಯ ತಾಲೂಕಿನ ಮಲ್ಲನಾಯಕನಕಟ್ಟೆ ಗ್ರಾಮದ ಎಂ.ಬಿ.ಶಶಿಕಾಂತ್ ಪತ್ನಿಯಿಂದ ವಂಚನೆಗೊಳಗಾದವನು.ಶಶಿಕಾಂತ್ ಹಾಗೂ ಕೆ.ಪಿ. ವೈಷ್ಣವಿ ಕಳೆದ 8 ತಿಂಗಳಿನಿಂದ ಪ್ರೀತಿಸುತ್ತಿದ್ದರು. ಕಳೆದ ಮಾ.24 ರಂದು ಆದಿಚುಂಚನಗಿರಿ ಕ್ಷೇತ್ರದಲ್ಲಿ ವಿವಾಹವಾಗಿದ್ದರು.
ವೈಷ್ಣವಿ ಹಾಗೂ ಕುಟುಂಬದವರು ಶಶಿಕಾಂತ್‌ಗೆ ಮೋಸ ಮಾಡುವ ಉದ್ದೇಶದಿಂದ ಆಕೆಗೆ ಮದುವೆಯಾಗಿರುವ ವಿಷಯವನ್ನು ಮುಚ್ಚಿಟ್ಟಿದ್ದರು. ತಾವು ಬಡವರೆಂದು ಹೇಳಿಕೊಂಡು ಆರಂಭದಲ್ಲಿ ಶಶಿಕಾಂತ್‌ನಿಂದ 1 ಲಕ್ಷ ರು ಹಣ ಪಡೆದು ಊರಿನಲ್ಲಿ ದೇವರ ಕಾರ್‍ಯ ನೆರವೇರಿಸಿದ್ದರು. ಮದುವೆಗೆಂದು 100 ಗ್ರಾಂ ಚಿನ್ನಾಭರಣ ಮಾಡಿಸಿಕೊಂಡಿದ್ದರು ಅಲ್ಲದೆ, ಆಗಸ್ಟ್ ತಿಂಗಳಿನಿಂದ ಈವರೆಗೆ 6 ಲಕ್ಷ ರು. ಹಣವನ್ನು ವೈಷ್ಣವಿ ಖಾತೆಗೆ ಶಶಿಕಾಂತ್ ಜಮೆ ಮಾಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾನೆ.
ವೈಷ್ಣವಿ ತಂದೆ ಪುಟ್ಟಸ್ವಾಮಿಗೆ ಪ್ಯಾಸೆಂಜರ್ ಆಟೋ ಕೊಡಿಸಿದ್ದಲ್ಲದೆ, ಬಾಡಿಗೆ ಮನೆಗೆ 50 ಸಾವಿರ ರೂ. ಮುಂಗಡ ಹಣವನ್ನೂ ನೀಡಿದ್ದನೆಂದು ಹೇಳಲಾಗಿದೆ. ಇದಲ್ಲದೆ, ಅತ್ತೆ ಶೀಲ ಅವರ ಹಳೆಯ ಮಾಂಗಲ್ಯ ಸರವನ್ನು ಕೊಟ್ಟು 46 ಗ್ರಾಂ ಚಿನ್ನದ ಹೊಸ ಮಾಂಗಲ್ಯ ಸರವನ್ನು ಕೊಡಿಸಿದ್ದನು. ಮನೆಗೆ ಅಗತ್ಯ ವಸ್ತುಗಳಾದ ಪ್ರಿಡ್ಜ್, ವಾಷಿಂಗ್ ಮೆಷಿನ್, ಮೊಬೈಲ್ ಫೋನ್‌ಗಳನ್ನೂ ತೆಗೆದುಕೊಟ್ಟಿರುವುದಾಗಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ದಾಖಲಿಸಿದ್ದಾರೆ.ಇಷ್ಟೆಲ್ಲಾ ಹಣ ಮತ್ತು ಚಿನ್ನಾಭರಣವನ್ನು ಪಡೆದ ವೈಷ್ಣವಿ ಹಾಗೂ ಅವರ ಕುಟುಂಬದವರು ಮದುವೆಯಾದ ಮಾರನೇ ದಿನ ಗೌಡಗೆರೆಯ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಹೋಗೋಣ ಎಂದು ಪತಿಗೆ ತಿಳಿಸಿದ್ದಾಳೆ.
ಪತ್ನಿ ಆಸೆಯಂತೆ ದೇವಾಲಯಕ್ಕೆ ಹೋಗುವ ಮಾರ್ಗ ಮಧ್ಯೆ ಉಮ್ಮಡಹಳ್ಳಿ ಗೇಟ್ ಬಳಿ ಬಂದಾಗ ನನಗೆ ಬಾಯಾರಿಕೆಯಾಗಿದೆ ನೀರು ತರುವಂತೆ ಹೇಳಿ ಗಂಡನನ್ನು ಕಾರಿನಿಂದ ಕೆಳಗಿಳಿಯುವಂತೆ ಮಾಡಿದ್ದಾಳೆ.ಗಂಡ ಕಾರಿನಿಂದ ಕೆಳಗಿಳಿದು ಹೋದ ಕೆಲವೇ ಕ್ಷಣಗಳಲ್ಲಿ ಕಾರಿನಿಂದ ಇಳಿದ ವೈಷ್ಣವಿ, ಹಿಂದೆ ನಿಂತಿದ್ದ ಮತ್ತೊಂದು ಕಾರನ್ನು ಹತ್ತಿ ಪರಾರಿಯಾಗಿದ್ದಾಳೆ ಎಂದು ಶಶಿಕಾಂತ್ ತಿಳಿಸಿದ್ದಾರೆ.
ಈ ವಿಚಾರವಾಗಿ ಮಹಿಳಾ ಪೊಲೀಸ್ ಠಾಣೆಯಲ್ಲಿ ವಿಚಾರಿಸಿದಾಗ ಈಕೆ ಮೊದಲೇ ಒಂದೆರಡು ವಿವಾಹವಾಗಿರುವ ಮಾಹಿತಿ ಲಭ್ಯವಾಗಿದೆ. ಈ ಹಿಂದೆ ಧರ್ಮಸ್ಥಳದಲ್ಲಿ ಹಾಸನದ ರಘು ಎಂಬ ಯುವಕನ ಜೊತೆ ಮದುವೆ ನಿಶ್ಚಯವಾಗಿ ಅವರಿಗೂ ಮೋಸ ಮಾಡಿ ಮರು ದಿನ ಶಿವು ಅಲಿಯಾಸ್ ತುಪಾಕಿ ಶಿವು ಎಂಬಾತನೊಂದಿಗೆ ಪರಾರಿಯಾಗಿದ್ದಳು.
ಶಿವನನ್ನು ಇಷ್ಟಪಟ್ಟು ಮದುವೆಯಾಗಿರುವುದಾಗಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಮುಚ್ಚಳಿಕೆಯನ್ನೂ ಬರೆದುಕೊಟ್ಟಿದ್ದಳು.ಈ ವಿಷಯ ಕುಟುಂಬದವರಿಗೆ ಗೊತ್ತಿದ್ದರೂ ಮೋಸ ಮಾಡುವ ಉದ್ದೇಶದಿಂದ ಅದನ್ನು ಮುಚ್ಚಿಟ್ಟಿದ್ದರು. ಇದೇ ರೀತಿ ಮೂರ್‍ನಾಲ್ಕು ಹುಡುಗರ ಬಳಿ ಹಣ ಪಡೆದು ಮೋಸ ಮಾಡುತ್ತಾ ಬಂದಿದ್ದಾರೆ ಎಂದು ಶಶಿಕಾಂತ್ ದೂರಿನಲ್ಲಿ ತಿಳಿಸಿದ್ದಾನೆ.ಈ ಸಂಬಂಧ ಮಂಡ್ಯ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪರಾರಿಯಾಗಿರುವ ವೈಷ್ಣವಿ ಸೇರಿದಂತೆ ಇತರೆ ಆರೋಪಿಗಳಿಗಾಗಿ ಶೋಧ ನಡೆಸಿದ್ದಾರೆ.