ಕಾಳಿ ನದಿ ತೀರದಲ್ಲಿ 300 ಮೆಟ್ರಿಕ್ ಟನ್ ಅಕ್ರಮ ಮರಳು ವಶ

KannadaprabhaNewsNetwork |  
Published : Sep 30, 2026, 02:15 AM IST
 | Kannada Prabha

ಸಾರಾಂಶ

ಕಿನ್ನರದಲ್ಲಿ ನಡೆದ ಪ್ರಜಾಸೇವೆ ಕಾರ್ಯಕ್ರಮದಲ್ಲಿ ವಿಜಯ ಎಂಬವರು ಕಾಳಿ ನದಿಯಿಂದ ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಸಿ ಸಾಗಾಟ ಮಾಡಲಾಗುತ್ತಿದೆ. ಅಲ್ಲದೆ ಮರಳನ್ನು ಅಂತರರಾಜ್ಯವಾಗಿ ಗೋವಾಕ್ಕೆ ಸಾಗಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಅವರಿಗೆ ದೂರು ಸಲ್ಲಿಸಿದ್ದರು.

ಕಾರವಾರ: ಕಾಳಿ ನದಿ ತೀರದಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ಸುಮಾರು 300 ಮೆಟ್ರಿಕ್ ಟನ್ ಮರಳನ್ನು ತಹಸೀಲ್ದಾರ್ ನಿಶ್ಚಲ್ ನಾರೋನಾ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳ ತಂಡ ಭಾನುವಾರ ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿದೆ.ಕಿನ್ನರದಲ್ಲಿ ನಡೆದ ಪ್ರಜಾಸೇವೆ ಕಾರ್ಯಕ್ರಮದಲ್ಲಿ ವಿಜಯ ಎಂಬವರು ಕಾಳಿ ನದಿಯಿಂದ ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಸಿ ಸಾಗಾಟ ಮಾಡಲಾಗುತ್ತಿದೆ. ಅಲ್ಲದೆ ಮರಳನ್ನು ಅಂತರರಾಜ್ಯವಾಗಿ ಗೋವಾಕ್ಕೆ ಸಾಗಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಅವರಿಗೆ ದೂರು ಸಲ್ಲಿಸಿದ್ದರು. ಈ ಕುರಿತು ಹಲವು ಬಾರಿ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಿದ್ದರೂ ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗುತ್ತಿಲ್ಲ ಎಂದು ಅವರು ಆರೋಪಿಸಿದ್ದರು. ಅಕ್ರಮ ಮರಳು ಗಣಿಗಾರಿಕೆ ಕುರಿತು ಮಾಹಿತಿ ನೀಡಿದ್ದಕ್ಕಾಗಿ ತಮ್ಮ ಮೇಲೆ ಹಲ್ಲೆ ನಡೆದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತಾಗಿದೆ ಎಂದೂ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದರು.ದೂರಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಅವರು ತಹಸೀಲ್ದಾರ ನಿಶ್ಚಲ್ ನಾರೋನಾ ಅವರಿಗೆ ಅಕ್ರಮ ಮರಳು ಗಣಿಗಾರಿಕೆ ಹಾಗೂ ದಾಸ್ತಾನು ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಅದರಂತೆ ತಹಸೀಲ್ದಾರ್ ನೇತೃತ್ವದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಚಿತ್ತಾಕುಲ ಪೊಲೀಸ್ ಠಾಣೆ ಸಮೀಪದ ಕಾಳಿ ನದಿ ತೀರದಲ್ಲಿರುವ ತಾರೀವಾಡ, ಸಾವರಪೈ, ಹೋಟೆಗಾಳಿ, ಹಳಗೆಜೂಗ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಿದರು.ಕಾರ್ಯಾಚರಣೆ ವೇಳೆ ವಿವಿಧೆಡೆ ದಾಸ್ತಾನು ಮಾಡಲಾಗಿದ್ದ ಅಪಾರ ಪ್ರಮಾಣದ ಮರಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ. ಮರಳು ದಾಸ್ತಾನು ಮಾಡಿದ್ದ ಸ್ಥಳದ ಸಮೀಪ ಮರಳು ತೆರವುಗೊಳಿಸಲು ಬಳಸುತ್ತಿದ್ದ ಕ್ರೇನ್ ಕೂಡ ಅಧಿಕಾರಿಗಳ ಗಮನಕ್ಕೆ ಬಂದಿದ್ದು, ದಾಸ್ತಾನು ಮಾಡಿದ್ದ ಜಾಗ ಹಾಗೂ ಕ್ರೇನ್ ಯಾರಿಗೆ ಸೇರಿದ್ದು ಎಂಬುದರ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಧಾರ್ಮಿಕತೆ ಜತೆಗೆ ಶಿಕ್ಷಣಕ್ಕೂ ಆದ್ಯತೆ ನೀಡಿ: ಸಚಿವ ಕೆ.ಎಸ್. ಬಸವಂತಪ್ಪ
ಮಾಜಿ ಸಂಸದ ಮಂಜುನಾಥ ಕುನ್ನೂರಗೆ ಕನ್ನಡದ ಕಟ್ಟಾಳು ಬಿರುದು ಪ್ರದಾನ