ಕನ್ನಡಪ್ರಭ ವಾರ್ತೆ, ಕಡೂರು
ಪಟ್ಟಣ ಸಮೀಪದ ಮಲ್ಲೇಶ್ವರದ ಬೈಪಾಸ್ ರಸ್ತೆ ಬದಿಯ ಕುರಿ ಮಂದೆ ಸಾಕಾಣಿಕೆ ತೋಟದಲ್ಲಿ ಚಿರತೆ ದಾಳಿ ನಡೆಸಿದ್ದರಿಂದ 14 ಮೇಕೆ ಮತ್ತು 17 ಕುರಿ ಮರಿಗಳು ಮೃತಪಟ್ಟಿವೆ, ಸುಶೀಲಮ್ಮ ಎಂಬುವರಿಗೆ ಸೇರಿದ ತೋಟದಲ್ಲಿ ಕಡೂರು ಪಟ್ಟಣದ ನಿವಾಸಿ ಚಂದ್ರಶೇಖರ್, ಬಸವರಾಜ್, ಮಂಜು ಹಾಗೂ ಲಕ್ಷ್ಮಣ ಎಂಬುವವರಿಗೆ ಸೇರಿದ ಕುರಿ ಹಾಗೂ ಆಡಿನ 50ಕ್ಕೂ ಹೆಚ್ಚು ಮರಿಗಳನ್ನು ತೋಟದ ಬಳಿ ಕುರಿದೊಡ್ಡಿಯಲ್ಲಿ ಇರಿಸಲಾಗಿತ್ತು. ಶುಕ್ರವಾರ ತೋಟದಲ್ಲಿ ಕುರಿ ಮಂದೆಯ ಬಳಿ ಯಾರು ಇಲ್ಲದ ಸಂದರ್ಭದಲ್ಲಿ ಏಕಾಏಕಿ ತಂತಿ ಬೇಲಿಯಿಂದ ಹಾರಿ ಮರಿಗಳ ಮೇಲೆ ಚಿರತೆ ದಾಳಿಯಲ್ಲಿ 31 ಮರಿಗಳು ಮೃತಪಟ್ಟಿವೆ. ಶುಕ್ರವಾರ ಸ್ಥಳಕ್ಕೆ ಪಶುವೈದ್ಯರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಮೃತಪಟ್ಟ ಕುರಿ(17) ಹಾಗೂ ಮೇಕೆ(14) ಮರಿಗಳ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ದಾಳಿಯಿಂದ ಗಾಯಗೊಂಡಿದ್ದ ಕೆಲ ಮರಿಗಳಿಗೆ ಸ್ಥಳ ದಲ್ಲಿಯೇ ಪಶುವೈದ್ಯರು ಚಿಕಿತ್ಸೆ ನೀಡಿ ಆರೈಕೆ ಮಾಡಿದರು.ಘಟನಾ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಕಡೂರು ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಕುರಿ ಮರಿಗಳ ಸಾಕಾಣಿಕೆಯಲ್ಲಿ ಬದುಕು ಕಟ್ಟಿಕೊಂಡಿದ್ದ ರೈತರಿಗೆ ಏಕಾಏಕಿ ಚಿರತೆ ದಾಳಿಯಿಂದ ಸುಮಾರು 3 ಲಕ್ಷ ಮೌಲ್ಯದ ಮರಿಗಳು ಮೃತಪಟ್ಟಿವೆ. ಇಲಾಖೆಯ ಅಧಿಕಾರಿಗಳು ಸರಕಾರದಿಂದ ಸೂಕ್ತ ನೆರವು ದೊರಕಿಸಿಕೊಡಬೇಕು ಎಂದು ಮನವಿ ಮಾಡಿದರು. ಘಟನೆ ಕುರಿತು ಕ್ಷೇತ್ರದ ಶಾಸಕ ಕೆ.ಎಸ್ .ಆನಂದ್ ಅವರ ಬಳಿ ಚರ್ಚಿಸಿ ಅಗತ್ಯ ನೆರವು ದೊರಕಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಸ್ಥಳದಲ್ಲಿ ಚಿರತೆ ದಾಳಿ ನಡೆಸಿರುವ ಹೆಜ್ಜೆ ಗುರುತುಗಳು ಪತ್ತೆಯಾಗಿವೆ. ಕುರಿ ಮರಿಗಳು ಚದುರಿಹೋಗದಂತೆ ತಂತಿಯ ಬೇಲಿ ಹಾಕಿದ ಪರಿಣಾಮ 31 ಮರಿಗಳು ಸಾಮೂಹಿಕವಾಗಿ ಚಿರತೆಯ ದಾಳಿಗೆ ಸಿಲುಕಿ ಮೃತಪಟ್ಟಿವೆ. ಈ ಬಗ್ಗೆ ಸೂಕ್ತ ಪರಿಹಾರ ನೀಡಲು ಇಲಾಖೆ ಮಾರ್ಗಸೂಚಿಯೊಂದಿಗೆ ವರದಿ ತಯಾರಿಸಿ ಹೆಚ್ಚಿನ ಪರಿಹಾರ ದೊರಕಿಸಿಕೊಡುವ ಕಾರ್ಯ ಮಾಡಲಾಗುತ್ತದೆ ಎಂದು ವಲಯ ಅರಣ್ಯಾಧಿಕಾರಿ ಲೋಕೇಶ್ ಪ್ರತಿಕ್ರಿಯಿಸಿದರು.ಪಶು ಸಹಾಯಕ ನಿದೇಶಕ ಡಾ.ಉಮೇಶ್ ಮಾತನಾಡಿ ಚರತೆ ದಾಳಿಗೆ ಮೃತಪಟ್ಟ ಮರಿಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ ಎಂದರು. ಇದೇ ಸಂದರ್ಭದಲ್ಲಿ ಅರಣ್ಯ ಹಾಗೂ ಪಶು ಇಲಾಖೆ ಸಿಬ್ಬಂದಿ ಇದ್ದರು.15ಕೆಕೆಡಿಯು2.
ಕಡೂರು ಪಟ್ಟಣದ ಮಲ್ಲೇಶ್ವರದ ಬೈಪಾಸ್ ರಸ್ತೆಯ ಬದಿಯಲ್ಲಿನ ತೋಟದಲ್ಲಿ ಬೀಡುಬಿಟ್ಟಿದ್ದ ಕುರಿಮರಿಗಳು ಚಿರತೆದಾಳಿಗೆ ಸಿಲುಕಿ ಮೃತಪಟ್ಟಿರುವುದು. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿ ಸಿಬ್ಬಂದಿಗಳು ಭೇಟಿ ನೀಡಿದರು. ಪುರಸಭೆಯ ಮಾಡಿ ಅಧ್ಯಕ್ಷ ಭಂಡಾರಿಶ್ರೀನಿವಾಸ್ ಮತ್ತಿತರಿದ್ದರು.