ಕನ್ನಡಪ್ರಭ ವಾರ್ತೆ, ತರೀಕೆರೆ
ದೇಶೀ ಮಾದರಿಯ ನೈಸರ್ಗಿಕ ಕೃಷಿ ಪದ್ಧತಿಯಿಂದ ಭೂಮಿ ಉಳಿಯುತ್ತದೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ನೈಸರ್ಗಿಕ ಕೃಷಿ ತಜ್ಞರಾದ ಚಂದ್ರಶೇಖರ್ ನಾರಾಣಾಪುರ ಹೇಳಿದ್ದಾರೆ.ಶುಕ್ರವಾರ ಪಟ್ಟಣದ ಸಾಹಿತಿ ಮನಸುಳಿ ಮೋಹನ್ ಅವರ ನಿವಾಸದಲ್ಲಿ ಏರ್ಪಡಿಸಿದ್ದ ವಿಶ್ವಮಣ್ಣು ದಿನ ಕಾರ್ಯಕ್ರಮದ ಉದ್ಘಾಟಿಸಿ ಮಣ್ಣಿನ ಪ್ರಾಮುಖ್ಯತೆ ಕುರಿತು ಉಪನ್ಯಾಸ ನೀಡಿದರು. ಕೃಷಿಯಲ್ಲಿ ದೇಶೀಯ ಹಸುಗಳ ಸಗಣಿ, ಗಂಜಲದ ಉಪಯೋಗದಿಂದ ಭೂಮಿಯ ಜೀವಾಣುಗಳು ದ್ವಿಗುಣಗೊಳ್ಳುತ್ತದೆ, ನೈಸರ್ಗಿಕ ಗಾಳಿ, ಆಮ್ಲಜನಕ ಮತ್ತು ಇಂಗಾಲ
ಭೂಮಿಗೆ ದೊರಕುತ್ತದೆ, ದೇಶೀ ಹಸುಗಳ ಸಗಣಿ ಭೂಮಿಗೆ ಇದನ್ನು ದೊರಕಿಸಿಕೊಡುತ್ತದೆ. ಮಣ್ಣು ಜೀವಂತಿಕೆ ಪಡೆಯುತ್ತದೆ. ಮಣ್ಣಿನಲ್ಲಿ ಪೋಷಕಾಂಶಗಳು ಹೆಚ್ಚಾಗಬೇಕು. ಭೂಮಿಯ ಮೇಲ್ಪದರದಲ್ಲಿ ಒಂದು ಜಾತಿಯ ಎರೆ ಹುಳುವಿದ್ದರೆ, ಭೂಮಿಯ 24 ಅಡಿ ಒಳಭಾಗದಲ್ಲಿ ಮತ್ತೊಂದು ಜಾತಿ ಎರೆಹುಳುಗಳು ಇರುತ್ತದೆ. ಈ ಎರೆಹುಳುಗಳು ಪ್ರಕೃತಿಗೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತವೆ. ಈ ಎರೆಹುಳುಗಳು ಭೂಮಿಯ ಪೋಷಕಾಂಶ ಹೆಚ್ಚಿಸುತ್ತವೆ ಎಂದು ಹೇಳಿದರು.ಎರೆಹುಳು ರೈತರ ಮಿತ್ರ:
ಮಣ್ಣಿನ ಬಗ್ಗೆ ಹೆಚ್ಚು ಅರಿವು ಅಗತ್ಯ, ಮಣ್ಣಿನ ಫಲವತ್ತತೆ ಉಳಿಸಬೇಕು, ನಮ್ಮ ದೇಶದ ಮಣ್ಣಿಗೆ ಬಹಳ ದೊಡ್ಡ ಇತಿಹಾಸ ಇದೆ, ಅಡಿಗೆ ಮನೆಗೆ ಬೇಕಾದ ಧವಸ, ಧಾನ್ಯಗಳು ನಮ್ಮ ಹೊಲ ಜಮೀನುಗಳಲ್ಲಿ ಸಿಗುತ್ತಿತ್ತು, ನಮ್ಮಲ್ಲಿ ಅಮೃತಮಹಲ್, ಮಲೆನಾಡು ತಳಿ ಇತ್ಯಾದಿ ಗೋತಳಿಗಳ ಸಗಣಿ ಮತ್ತು ಗಂಜಲ ಔಷಧೀಯ ಗುಣಗಳನ್ನು ಹೊಂದಿದೆ. ನೈಸರ್ಗಿಕ ಕೃಷಿಗೆ ದೇಶೀ ಹಸುಗಳು ಅಗತ್ಯವಾಗಿದೆ. ಈ ಹಸುಗಳು ಐದರಿಂದ ಹತ್ತು ಕೆ.ಜಿ.ಸಗಣಿ ಕೊಡುತ್ತದೆ, ಅದರಲ್ಲಿ ಜೀವಾಣುಗಳು ಮಣ್ಣಿನ ಆರೋಗ್ಯ ರಕ್ಷಿಸುತ್ತದೆ. ದೇಶೀ ದನಗಳ ಸಗಣಿ ಗಂಜಲಗಳಿಂದ ಮಾಡುವ ಜೀವಾಮೃತ ಭೂಮಿಯ ಜೀವಾಣುಗಳು ಹೆಚ್ಚಿಸಿ, ಮಣ್ಣುಹುಳು, ಎರೆಹುಳುಗಳು ರೈತರ ಮಿತ್ರರಾಗಿವೆ, ನೈಸರ್ಗಿಕ ಕೃಷಿಯಿಂದ ಮಣ್ಣಿನ ಜೀವಾಂಶ ಹೆಚ್ಚು ಬಳಸಿಕೊಳ್ಳಬಹುದು ಎಂದು ವಿವರಿಸಿದರು.ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಎಚ್.ಮಹೇಂದ್ರ ಮಾತನಾಡಿ ನೈಸರ್ಗಿಕ ಕೃಷಿ ಅಗತ್ಯ. ದನಗಳ ಗೊಬ್ಬರ ಬಳಸಬೇಕು. ಎತ್ತಿನ ಬೆವರು ಭೂಮಿಯ ಮೇಲೆ ಬೀಳಬೇಕು. ಮನೆಗೆ ಎರಡು ಮೂರು ದನಗಳನ್ನು ಸಾಕಬೇಕು, ಕೃಷಿ ಮಾಹಿತಿಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಪತ್ರಕರ್ತ ಅಜ್ಜಂಪುರ ರೇವಣ್ಣ ಮಾತನಾಡಿ, ಈ ಹಿಂದೆ ನೈಸರ್ಗಿಕ ಕೃಷಿ ಇತ್ತು, ಕಾಯಿಲೆಗಳು ಹೆಚ್ಚು ಇರಲಿಲ್ಲ, ನಾವು ಮುಂದಿನ ಪೀಳಿಗೆಗೆ ಉತ್ತಮ ರೂಪದಲ್ಲಿ ಭೂಮಿಯನ್ನು ಉಳಿಸಬೇಕು. ನೈಸರ್ಗಿಕ ಕೃಷಿ ಅನುಸರಿಸಬೇಕು ಎಂದು ಹೇಳಿದರು.ಸಾಹಿತಿ ಮನಸುಳಿ ಮೋಹನ್ ಮಾತನಾಡಿ, ನೈಸರ್ಗಿಕ ಕೃಷಿ ತಜ್ಞ ಚಂದ್ರಶೇಖರ್ ನಾರಾಣಾಪುರ ಅವರು ನಮ್ಮ ಅಜ್ಜಂಪುರ ತಾಲೂಕಿನವರು. ಸಾಹಿತ್ಯ ಮತ್ತು ಕೃಷಿ ಕ್ಷೇತ್ರದಲ್ಲಿ ಬಹಳ ದೊಡ್ಡ ಸಾಧನೆ ಮಾಡಿದ್ದಾರೆ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು. ಇವರು ನಾಡಿನ ಬಹುತೇಕ ಎಲ್ಲ ಮಠಗಳಿಗೂ ಭೇಟಿ ನೀಡಿದ್ದಾರೆ ಎಂದು ತಿಳಿಸಿದರು.
ನೈಸರ್ಗಿಕ ಕಷಿ ತಜ್ಞರು ಚಂದ್ರಶೇಖರ್ ನಾರಾಣಾಪುರ ಅವರನ್ನು ಸನ್ಮಾನಿಸಲಾಯಿತು. ರೈತರೊಡನೆ ಸಂವಾದ ಏರ್ಪಡಿಸಲಾಗಿತ್ತು.ಶ್ರೀ ರೇವಣ ಸಿದ್ದೇಶ್ವರ ಕೃಷಿ ಪತ್ತಿನ ವ್ಯವಸಾಯ ಸೇವಾ ಸಹಕಾರ ಸಂಘದ ನಿರ್ದೇಶಕ ಗಿರಿರಾಜು ಮುಖಂಡ ಜಯ್ಯಣ್ಣ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಕೆ.ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.
15ಕೆಟಿಆರ್.ಕ.1ಃ ತರೀಕೆರೆಯಲ್ಲಿ ಸಾಹಿತಿ ಮನಸುಳಿ ಮೋಹನ್ ಅವರ ನಿವಾಸದಲ್ಲಿ ವಿಶ್ವ ಮಣ್ಣುದಿನ ಕಾರ್ಯಕ್ರಮವನ್ನು ನೈಸರ್ಗಿಕ ಕೃಷಿ ತಜ್ಞ ಚಂದ್ರಶೇಖರ್ ನಾರಾಣಾಪುರ ಉದ್ಘಾಟಿಸಿದರು. ಜಿಪಂ ಮಾಜಿ ಸದಸ್ಯ ಕೆ.ಎಚ್.ಮಹೇಂದ್ರ, ಪತ್ರಕರ್ತರು ಅಜ್ಜಂಪುರ ರೇವಣ್ಣ, ಸಾಹಿತಿ ಮನಸುಳಿ ಮೋಹನ್ ಮತ್ತಿತರರು ಇದ್ದರು.