ಪ್ರಧಾನಮಂತ್ರಿ ಜನಜಾತೀಯ ಉನ್ನತ ಗ್ರಾಮ ಅಭಿಯಾನಕ್ಕೆ 31 ಗ್ರಾಮಗಳು ಆಯ್ಕೆ

KannadaprabhaNewsNetwork |  
Published : Sep 30, 2024, 01:21 AM IST
ಲಕ್ಷ್ಮೀಪ್ರಿಯಾ | Kannada Prabha

ಸಾರಾಂಶ

ಅಭಿಯಾನಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮೀಸಲಿರಿಸಿದ ₹79,156 ಕೋಟಿಗಳಲ್ಲಿ ಪರಿಶಿಷ್ಟ ಪಂಗಡದವರು ಹೆಚ್ಚಿನ ಸಂಖ್ಯೆ ಇರುವ ದೇಶದ 63,000 ಗ್ರಾಮಗಳನ್ನು ಅಭಿವೃದ್ಧಿಪಡಿಸಲು ಕ್ರಿಯಾಯೋಜನೆ ರೂಪಿಸಿದೆ.

ಕಾರವಾರ: ಜಿಲ್ಲೆಯಲ್ಲಿ ಪರಿಶಿಷ್ಟ ಪಂಗಡದವರು ಹೆಚ್ಚಿರುವ ವಿವಿಧ ತಾಲೂಕುಗಳ ಒಟ್ಟು 31 ಗ್ರಾಮಗಳನ್ನು ಕೇಂದ್ರ ಬುಡಕಟ್ಟು ಮಂತ್ರಾಲಯದಿಂದ ಪ್ರಧಾನಮಂತ್ರಿ ಜನಜಾತೀಯ ಉನ್ನತ ಗ್ರಾಮ ಅಭಿಯಾನದಡಿ ಅಭಿವೃದ್ಧಿಪಡಿಸಲು ಆಯ್ಕೆ ಮಾಡಲಾಗಿದೆ.

ಈ ಗ್ರಾಮಗಳಲ್ಲಿ ವಾಸಿಸುವ ಪರಿಶಿಷ್ಟ ಪಂಗಡದ ಜನಾಂಗದವರಿಗೆ ಮೂಲ ಸೌಕರ್ಯ, ಆರ್ಥಿಕ ಸಬಲೀಕರಣ, ಉತ್ತಮ ಶಿಕ್ಷಣಕ್ಕೆ ಪ್ರವೇಶ ಮತ್ತು ಆರೋಗ್ಯಕರ ಗೌರವಾನ್ವಿತ ಜೀವನ ಈ ಎಲ್ಲ ಗುರಿಗಳೊಂದಿಗೆ ಗ್ರಾಮಗಳ ಅಭಿವೃದ್ಧಿಪಡಿಸಲು ಕ್ರಿಯಾಯೋಜನೆ ರೂಪಿಸಲಾಗಿದೆ.

ಬುಡಕಟ್ಟು ಸಮುದಾಯಗಳ ಸಾಮಾಜಿಕ- ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಪ್ರಧಾನ ಮಂತ್ರಿ ಜನಜಾತಿಯ ಉನ್ನತ ಗ್ರಾಮ ಅಭಿಯಾನ ಕಾರ್ಯಕ್ರಮ ದೇಶಾದ್ಯಂತ ನಡೆಯಲಿದೆ. ಅಭಿಯಾನಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮೀಸಲಿರಿಸಿದ ₹79,156 ಕೋಟಿಗಳಲ್ಲಿ ಪರಿಶಿಷ್ಟ ಪಂಗಡದವರು ಹೆಚ್ಚಿನ ಸಂಖ್ಯೆ ಇರುವ ದೇಶದ 63,000 ಗ್ರಾಮಗಳನ್ನು ಅಭಿವೃದ್ಧಿಪಡಿಸಲು ಕ್ರಿಯಾಯೋಜನೆ ರೂಪಿಸಿದೆ. ಕೇಂದ್ರ ಬುಡಕಟ್ಟು ಮಂತ್ರಾಲಯ ಈ ಯೋಜನೆಯನ್ನು ಅನುಷ್ಠಾನಗೊಳಿಸುವ ಜವಾಬ್ದಾರಿಯೊಂದಿಗೆ 5 ಕೋಟಿ ಜನರಿಗೆ ಯೋಜನೆಯಿಂದ ಅನುಕೂಲವಾಗಲಿದೆ. ಆಯ್ಕೆಯಾಗಿರುವ 31 ಗ್ರಾಮಗಳಲ್ಲಿ 17 ವಿವಿಧ ಇಲಾಖೆಗಳು ಬೇರೆ ಬೇರೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಿದೆ. ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಪಕ್ಕಾ ಮನೆ, ಸಂಪರ್ಕ ರಸ್ತೆಗಳು, ಗ್ರಾಮೀಣ ನೀರು ಸರಬರಾಜು ಇಲಾಖೆಯಿಂದ ನೀರು ಸರಬರಾಜು, ವಿದ್ಯುತ್ ಇಲಾಖೆಯಿಂದ ಮನೆಗಳಿಗೆ ವಿದ್ಯುದ್ದೀಕರಣ, ಇಂಧನ ಇಲಾಖೆಯಿಂದ ಸೌರ ವಿದ್ಯುತ್ ಯೋಜನೆ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಇಲಾಖೆಯಿಂದ ಎಲ್‌ಪಿಜಿ ಅನಿಲ ಪಿಎಂ ಉಜ್ವಲ ಯೋಜನೆಯಡಿ ಸಂಪರ್ಕಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅಂಗನವಾಡಿ ಕೇಂದ್ರಗಳ ಅಭಿವೃದ್ಧಿ, ಪೋಷಣ್ ಅಭಿಯಾನ, ಶಿಕ್ಷಣ ಇಲಾಖೆಯಿಂದ ವಿದ್ಯಾರ್ಥಿನಿಲಯಗಳ ನಿರ್ಮಾಣ, ಆಯುಷ್ ಇಲಾಖೆಯಿಂದ ಪೋಷಣ್ ವಾಟಿಕಾಸ್, ಟೆಲಿಕಾಂ ಇಲಾಖೆಯಿಂದ ಯುನಿವರ್ಸಲ್ ಸೇವೆ (ನೆಟ್) ಕೌಶಲ್ಯಾಭಿವೃದ್ಧಿ ಇಲಾಖೆಯಿಂದ ಸ್ಕಿಲ್ ಇಂಡಿಯಾ, ಮಾಹಿತಿ ತಂತ್ರಾಜ್ಞಾನ, ಎಲೆಕ್ಟ್ರಾನಿಕ್ಸ್ ಇಲಾಖೆಯಿಂದ ಡಿಜಿಟಲ್ಇ ಇನಿಶಿಯೇಟಿವ್ಸ್, ಕೃಷಿ ಇಲಾಖೆಯಿಂದ ಸುಸ್ಥಿರ ಕೃಷಿ ಉತ್ತೇಜನ, ಮೀನುಗಾರಿಕೆ ಇಲಾಖೆಯಿಂದ ಮೀನುಗಾರಿಕೆಗೆ ಬೆಂಬಲ, ಪಶುಸಂಗೋಪನೆ ಇಲಾಖೆಯಿಂದ ಜಾನುವಾರು ಪಾಲನೆ, ಪಂಚಾಯತ್ ರಾಜ್ ಇಲಾಖೆಯಿಂದ ಸಾಮರ್ಥ್ಯ ಕಟ್ಟಡ ನಿರ್ಮಾಣ, ಪ್ರವಾಸೋದ್ಯಮ ಇಲಾಖೆಯಿಂದ ಟ್ರೈಬಲ್ ಹೋಂ ಸ್ಟೇಸ್ ಸ್ವದೇಶ ದರ್ಶನ, ಬುಡಕಟ್ಟು ವ್ಯವಹಾಗಳ ಸಚಿವಾಲಯದಿಂದ ಪ್ರಧಾನ ಮಂತ್ರಿ ಆದರ್ಶ ಗ್ರಾಮ ಯೋಜನೆಗಳು ಅನುಷ್ಠಾನಗೊಳ್ಳಲಿವೆ.

ಈ ಅಭಿಯಾನದಡಿ ಜಿಲ್ಲೆಯಲ್ಲಿ ಹಳಿಯಾಳ ತಾಲೂಕಿನ 1, ಭಟ್ಕಳದ 3 ಜೋಯಿಡಾದ 4 ಮತ್ತು ಮುಂಡಗೋಡ ತಾಲೂಕಿನ 23 ಸೇರಿದಂತೆ ಒಟ್ಟು 31 ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ.ಮೂಲ ಸೌಕರ್ಯ: ಗ್ರಾಮಗಳಲ್ಲಿ ಬುಡಕಟ್ಟು ಬಹು ಉಪಯೋಗಿ ಮಾರ್ಕೆಟಿಂಗ್ ಕೇಂದ್ರಗಳು, ಆಶ್ರಮ ಶಾಲೆಗಳು, ವಿದ್ಯಾರ್ಥಿನಿಲಯಗಳು ಸರ್ಕಾರಿ ಅಥವಾ ರಾಜ್ಯ ಬುಡಕಟ್ಟು ವಸತಿ ಶಾಲೆಗಳ ಮೂಲ ಸೌಕರ್ಯಗಳನ್ನು ಸುಧಾರಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ