ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಯಾವುದೇ ಮೀಸಲಾತಿ ಬೆಂಬಲವಿಲ್ಲದ ಬ್ರಾಹ್ಮಣ ಸಮುದಾಯದ ವಿದ್ಯಾರ್ಥಿಗಳು ಓದಿನಿಂದಷ್ಟೇ ಮುಂದೆ ಬರಬೇಕು. ಆದರೆ, ಅದೇ ಓದು ವಿದೇಶಿ ಉದ್ಯೋಗ ವ್ಯಾಮೋಹ ಹೆಚ್ಚಿಸಿ ಪಾಲಕರಿಂದ ದೂರ ಉಳಿಯುವಂತೆ ಮಾಡಬಾರದು ಎಂದು ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಜಿ. ಕೃಷ್ಣಮೂರ್ತಿ ಅವರು ಹೇಳಿದರು.ನಗರದ ಬ್ರಹ್ಮಸಮುದ್ರ ರಂಗಣ್ಣನವರ ಕಲ್ಯಾಣ ಮಂಟಪದಲ್ಲಿ ಚಿಕ್ಕಮಗಳೂರು ಬ್ರಾಹ್ಮಣ ಮಹಾಸಭಾದ ಆಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಉನ್ನತ ಶಿಕ್ಷಣ ಪಡೆದು ವಿದೇಶದಲ್ಲೇ ಉದ್ಯೋಗ ಪಡೆಯಬೇಕು ಎನ್ನುವ ಉದ್ದೇಶ ನಮ್ಮ ಸಮುದಾಯದ ವಿದ್ಯಾರ್ಥಿಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ಹೀಗೆ ವಿದೇಶಕ್ಕೆ ತೆರಳಿದವರು ಅಲ್ಲೇ ನೆಲೆಯೂರಿ ಅವರ ಇಳಿ ವಯಸ್ಸಿನ ಪೋಷಕರು, ಹಿರಿಯರು ಮಾತ್ರ ಇಲ್ಲಿ ಉಳಿಯುತ್ತಾರೆ. ಮಕ್ಕಳು ತಂದೆ, ತಾಯಿಯ ಜತೆಗಿರಲು ಸಾಧ್ಯವಿಲ್ಲದ ಓದಿನ ಅವಶ್ಯಕತೆ ಇದೆಯೇ ಎಂದು ಪ್ರಶ್ನಿಸಿದರು.
ಸಮುದಾಯದ ವಿದ್ಯಾರ್ಥಿಗಳಲ್ಲಿ ಸಂಸ್ಕೃತಿ, ಧರ್ಮ ಹಾಗೂ ಸಮಾಜದ ಸ್ಥಿತಿಗತಿ ಹಾಗೂ ಕಷ್ಟ ಸುಖದ ಅರಿವು ಮೂಡಿಸಲು ನಾವು ಅವರಲ್ಲಿ ಅಗತ್ಯ ಭಾವನೆಗಳನ್ನು ರೂಢಿಸಬೇಕು. ಈ ಹಿನ್ನೆಲೆಯಲ್ಲಿ ಇಂಥಹ ಕಾರ್ಯಕ್ರಮಗಳಲ್ಲಿ ಯುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದರು.ಲೇಖಕ ಮಂಜುನಾಥ ಹಾಲುವಾಗಲು ಪೌರಾಣಿಕ ಹಿನ್ನೆಲೆಗಳನ್ನು ಉಲ್ಲೇಖಿಸಿ ಮಾತನಾಡಿ, ಹುಟ್ಟಿನಿಂದ ಮಾತ್ರ ಬ್ರಾಹ್ಮಣನಾಗಲು ಸಾಧ್ಯವಿಲ್ಲ. ಆಚರಣೆಗಳಿಂದ, ವಿಚಾರಗಳಿಂದ ನಡೆದುಕೊಂಡವನೇ ಬ್ರಾಹ್ಮಣ. ಸಮಾಜದಲ್ಲಿ ಆಚಾರ ಮತ್ತು ವಿಚಾರವನ್ನು ಸಮತೋಲಿತವಾಗಿ ಅಳವಡಿಸಿಕೊಂಡು ತಾನು ಸಮಾಜಕ್ಕೆ ಪ್ರತಿ ಸಂದೇಶವನ್ನು ಕೊಡುವವನೇ ಬ್ರಾಹ್ಮಣ. ಬ್ರಾಹ್ಮಣರಿಗೆ ವಿದ್ಯೆಯೊಂದೇ ಆದಾರ. ವಿದ್ಯೆಯಿಂದ ಸಂಸ್ಕಾರ, ವಿದ್ಯೆಯಿಂದ ಮಾತ್ರ ಸನಾತನ ಸಂಸ್ಕೃತಿಯ ಉದ್ಧಾರ ಸಾಧ್ಯ ಎಂದು ಹೇಳಿದರು.ಪ್ರತಿಯೊಬ್ಬರೂ ಜೀವನದಲ್ಲಿ ತಂದೆ ತಾಯಿಯರನ್ನು ಗೌರವಿಸಬೇಕು ಎಂದು ಹೇಳಿದ ಅವರು, ದೇಹದ 72 ಭಾಗದ ಮೂಳೆಗಳು ಒಮ್ಮೆಗೆ ಮುರಿದು ಹೋದರೆ ಅದೆಷ್ಟು ನೋವಾಗುತ್ತದೆಯೋ, ಅಷ್ಟು ನೋವು ಅನುಭವಿಸಿ ನಮಗೆ ಆ ತಾಯಿ ಜನ್ಮ ಕೊಟ್ಟಿರುತ್ತಾಳೆ. ಆ ಸಮಯದಲ್ಲಿ ತಂದೆ ಪಟ್ಟಿರುವ ಆತಂಕ ಇದೆಯಲ್ಲ ಅದೇ ಕಟ್ಟಕಡೆಯ ಆತಂಕವಾಗಬೇಕು. ನಾವು ತಂದೆ ತಾಯಿಗೆ ನೋವು ಕೊಡಲಿಲ್ಲವೆಂದರೆ ನಮ್ಮಂಥ ಮಹಾತ್ಮರು ಪ್ರಪಂಚದಲ್ಲಿ ಇನ್ಯಾರೂ ಇಲ್ಲ ಎಂದು ಹೇಳಿದರು.ದಿವಿಜ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತ ನಿರ್ದೇಶಕ ಎನ್.ಎಸ್. ನಾಗೇಂದ್ರ ಮಾತನಾಡಿ, ತಮ್ಮ ಬ್ಯಾಂಕ್‌ಗೆ ಬರುವ ಲಾಭಾಂಶದಿಂದ ‘ಗುಡ್‌ಕಾಸ್’ ಎಂಬ ನಿಧಿಯೊಂದನ್ನು ಹುಟ್ಟು ಹಾಕಿಕೊಂಡು ಸಮಾಜದ ಅಪೇಕ್ಷಿತರಿಗೆ ನೀಡಲು, ಕಳೆದ ವರ್ಷದವರೆಗೆ ಚಿಕ್ಕಮಗಳೂರು ಬ್ರಾಹ್ಮಣ ಮಹಾಸಭಾಕ್ಕೆ ₹10,58,434 ಒದಗಿಸಲಾಗಿದೆ ಎಂದು ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಪಿ. ಮಂಜುನಾಥ ಜೋಷಿ ಮಾತನಾಡಿ, ಒಂದು ಕಾಲಘಟ್ಟದಲ್ಲಿ ಮನೆ ಮನೆಯಿಂದ ಹಣ ಸಂಗ್ರಹಿಸಿ ಈ ಕಾರ್ಯಕ್ರಮ ಆಯೋಜಿಸಲಾಗುತ್ತಿತ್ತು. ನಮ್ಮ ಸಮಾಜದ ಡಾ. ಭಾಗ್ಯಲಕ್ಷ್ಮೀ ಅವರು ಸಲಹೆ ನೀಡಿದ ಮೇರೆಗೆ ಸಂಪನ್ಮೂಲ ಕ್ರೂಢೀಕರಿಸಿ ಮಹಾಸಭಾ ಈ ಮಟ್ಟಕ್ಕೆ ಬೆಳೆದಿದೆ. ನಮ್ಮ ಕರೆಗೆ ಸಮುದಾಯದವರು ಸ್ಪಂದಿಸಿದ್ದೇಯಾದರೆ ಸಮಾಜ ಇನ್ನಷ್ಟು ಗಟ್ಟಿಯಾಗುತ್ತದೆ ಎಂದು ಹೇಳಿದರು.ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿ ವೇತನ ವಿತರಣೆಗೆ ಪ್ರತೀ ವರ್ಷ ಗೀತಾ ವೆಂಕಟೇಶ್ ಪ್ರಸಾದ್, ಉಮಾ ಜಯಚಂದ್ರ ತಲಾ 5 ಸಾವಿರ ರೂ. ಗುರುಮೂರ್ತಿ ಹಾಗೂ ನಾಯಕ್ ಸಚ್ಚಿದಾನಂದ ತಲಾ 10 ಸಾವಿರ ರೂ. ಮತ್ತು ಬಿಎಂಎಸ್ ಜಂಟಿ ಕಾರ್ಯದರ್ಶಿ ಎ.ಎನ್.ಗೋಪಾಲಕೃಷ್ಣ ಪ್ರತೀ ವರ್ಷ ಡಿಪ್ಲೊಮಾ ವ್ಯಾಸಂಗ ಮಾಡುವ ವಿದ್ಯಾರ್ಥಿಗೆ 5 ಸಾವಿರ ರೂ. ನೀಡುವುದಾಗಿ ಪ್ರಕಟಿಸಿದ ಹಿನ್ನೆಲೆಯಲ್ಲಿ ಅವರನ್ನು ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ 27 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, 29 ವಿದ್ಯಾರ್ಥಿಗಳಿಗೆ ವ್ಯಾಸಂಗ ವೇತನ ನೀಡಲಾಯಿತು. ಸುಜಯ್ ಕಶ್ಯಪ್ ಪ್ರಾರ್ಥನೆ, ಬ್ರಾಹ್ಮಣ ಮಹಾಸಭಾದ ನಿರ್ದೇಶ ಕ ಎ.ಎನ್. ಗೋಪಾಲಕೃಷ್ಣ ಸ್ವಾಗತ, ಬಿ.ಎಂ.ಎಸ್.ನಿರ್ದೇಶಕಿ ಎಸ್. ಶಾಂತಕುಮಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿಎಂಎಸ್ ನಿರ್ದೇಶಕರಾದ ಸುಮಾ ಪ್ರಸಾದ್ ಹಾಗೂ ಎಂ.ಎಸ್. ಚೈತ್ರಾ ಕಾರ್ಯಕ್ರಮ ನಿರೂಪಣೆ, ಬಿ.ಎಂ.ಎಸ್. ನಿರ್ದೇಶಕಿ ಕೆ.ಕೆ. ತಾರಾಮಣಿ ವಂದನಾರ್ಪಣೆ ನೆರವೇರಿಸಿದರು.