ಗೋಕರ್ಣ: ಅಜ್ಞಾನವೇ ಆವರಣ. ಸುಜ್ಞಾನವೇ ಅನಾವರಣ. ಅರಿವಿನ ಪ್ರಾಪ್ತಿಯೇ ನಿಜವಾದ ಅನಾವರಣ ಎಂದು ರಾಘವೇಶ್ವ ಭಾರತೀ ಸ್ವಾಮೀಜಿ ನುಡಿದರು.
ಪ್ರತಿಯೊಬ್ಬರ ಹೃದಯವೂ ಒಂದು ಅಮೂಲ್ಯ ರತ್ನ. ಆದರೆ ಅದರ ಕಲ್ಪನೆ ನಮಗಿಲ್ಲ. ರತ್ನಕ್ಕೆ ಮುಚ್ಚಿರುವ ಆವರಣವನ್ನು ಸುಜ್ಞಾನದ ಮೂಲಕ ಸರಿಸುವುದೇ ಅನಾವರಣ ಎಂದರು. ಆತ್ಮಗಳ ಅನಾವರಣಕ್ಕೆ ಈ ಚಾತುರ್ಮಾಸ್ಯ ವೇದಿಕೆಯಾಗಲಿ. ಆತ್ಮದ ಹಾದಿ ಶಿಷ್ಯರಿಗೆ ಕಾಣುವಂತಾಗಲಿ. ಸತ್ಯದ ಅನುಭೂತಿಯಾಗಿ ಪೂರ್ಣತೃಪ್ತಿ ಸಿಗುವಂಥ ಅನಾವರಣ ಆಗಲಿ ಎಂದು ಆಶಿಸಿದರು.
ನಮ್ಮ ಮಠದಲ್ಲೇ ಇರುವ ಅದ್ಭುತವಾದ ಸಂಗತಿಗಳೇ ಅನಾವರಣಗೊಳ್ಳಬೇಕು. ಇಂದು ಮಠ ಚಿರಪರಿಚಿತವಾದರೂ, ಗೊತ್ತಿಲ್ಲದ ಅನೇಕ ಸಂಗತಿಗಳು ಗರ್ಭದಲ್ಲಿ ಅಡಗಿವೆ. ಇವು ಹೊರಗೆ ಬರುವಂತಾಗಬೇಕು ಎನ್ನುವುದೇ ಈ ಚಾತುಮಾಸ್ಯದ ಆಶಯ ಎಂದು ಬಣ್ಣಿಸಿದರು.ಮಠವೆಂಬ ಸಮುದ್ರದ ಅನಾವರಣ. ಅಂತೆಯೇ ಸಮಾಜದಲ್ಲಿ ಅನೇಕಾನೇಕ ವ್ಯಕ್ತಿ- ವಿಷಯ-ವಸ್ತುಗಳು ಇರಬಹುದು. ಅವುಗಳ ಅನಾವರಣ ಈ ಚಾತುಮಾಸ್ಯದಲ್ಲಿ ನಡೆಯಬೇಕು. ಇಡೀ ಸಮಾಜಕ್ಕೆ ವಿಷ್ಣುಗುಪ್ತ ವಿಶ್ವವಿದ್ಯಾಪೀಠವನ್ನು ಅನಾವರಣಗೊಳಿಸಬೇಕು. ಇದರಿಂದ ಸಮಾಜಕ್ಕೆ ಉಪಯೋಗವಾಗಬೇಕು ಎಂದು ವಿವರಿಸಿದರು.
ಇರುವುದನ್ನು ತೋರದಂತೆ ತಡೆಯುವ ತೆರೆಯನ್ನು ಸರಿಸುವುದೇ ಅನಾವರಣ. ಈ ತೆರೆ ಸರಿಸುವವನು ಗುರು. ಗೀತೆಗಿಂತ ದೊಡ್ಡ ಉಪದೇಶ ವಿಶ್ವದಲ್ಲಿ ಮತ್ತೊಂದಿಲ್ಲ. ಅದನ್ನು ನೀಡಿದ ಕೃಷ್ಣ ಜಗದ್ಗುರು. ಗುರುವಿಗೆ ವಿಶಿಷ್ಟ ಸ್ಥಾನವಿದೆ. ನಮ್ಮ ಆರಾಧ್ಯದೈವ ರಾಮ ಕೂಡಾ ಬೋಧಮುದ್ರೆಯೊಂದಿಗೆ ಗುರುವಾಗಿ ಗೋಚರಿಸಿದ್ದಾನೆ ಎಂದರು.
ಶ್ರೀಮಠದ ಪ್ರಶಾಸನಾಧಿಕಾರಿ ಸಂತೋಷ್ ಹೆಗಡೆ, ವಿತ್ತಾಧ್ಯಕ್ಷ ಗಣೇಶ್ ಜೆ.ಎಲ್, ವಿವಿವಿ ಗೌರವಾಧ್ಯಕ್ಷ ಡಿ.ಡಿ. ಶರ್ಮಾ, ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಮಂಜುನಾಥ ಸುವರ್ಣಗದ್ದೆ, ಕಾರ್ಯದರ್ಶಿ ಶ್ರೀಕಾಂತ್ ಪಂಡಿತ್, ಕೋಶಾಧ್ಯಕ್ಷ ಸುಧಾಕರ್, ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ವಿವಿವಿ ಗೌರವಾಧ್ಯಕ್ಷ ಆರ್.ಎಸ್. ಹೆಗಡೆ ಹರಗಿ, ಅಧ್ಯಕ್ಷ ಎಸ್.ಎಸ್. ಹೆಗಡೆ, ಆಡಳಿತಾಧಿಕಾರಿ ಡಾ. ಪ್ರಸನ್ನ ಕುಮಾರ್, ಪಾರಂಪರಿಕ ವಿಭಾಗದ ವರಿಷ್ಠಾಚಾರ್ಯ ಸತ್ಯನಾರಾಯಣ ಶರ್ಮ, ಸಂಯೋಜಕಿ ಅಶ್ವಿನಿ ಉಡುಚೆ, ಹಿರಿಯ ಲೋಕ ಸಂಪರ್ಕಾಧಿಕಾರಿ ಜಿ.ಕೆ. ಹೆಗಡೆ, ಹರಿಪ್ರಸಾದ್ ಪೆರಿಯಾಪು, ಕಾರ್ಯದರ್ಶಿ ಮಧು ಜಿ.ಕೆ., ವ್ಯವಸ್ಥಾಪಕ ಪ್ರಮೋದ್ ಮುಡಾರೆ, ಮಹಾಮಂಡಲ ಪದಾಧಿಕಾರಿಗಳಾದ ನಾಗರಾಜ ಭಟ್ ಪೆದಮಲೆ, ಜಿ.ಎಸ್. ಹೆಗಡೆ, ಬಾಲಸುಬ್ರಹ್ಮಣ್ಯ ಸರ್ಪಮಲೆ, ವೇಣುಗೋಪಾಲ ಕೆದ್ಲ, ಈಶ್ವರಪ್ರಸಾದ್ ಕನ್ಯಾನ, ಕೇಶವ ಪ್ರಕಾಶ್ ಎಂ., ಪ್ರಸನ್ನ ಉಡುಚೆ, ಮಹೇಶ್ ಭಟ್ ಚೂಂತಾರು, ರುಕ್ಮಾವತಿ ಸಾಗರ, ರಾಜಗೋಪಾಲ ಜೋಶಿ, ವಿವಿಧ ಮಂಡಲಗಳ ಅಧ್ಯಕ್ಷರಾದ ಉದಯಶಂಕರ ನೀರ್ಪಾಜೆ, ಈಶ್ವರ ಪ್ರಸನ್ನ, ಕೃಷ್ಣಮೂರ್ತಿ ಮಾಡಾವು, ಮಹೇಶ್ ಚಟ್ನಳ್ಳಿ, ಎಲ್.ಆರ್. ಹೆಗಡೆ, ಆರ್.ಜಿ. ಹೆಗಡೆ, ಸುಬ್ರಾಯ ಭಟ್, ಪ್ರಕಾಶ್ ಬೇರಾಳ ಮತ್ತಿತರರು ಉಪಸ್ಥಿತರಿದ್ದರು.
ಶ್ರೀಮಠದ ಶಾಸ್ತ್ರಿಗಳಾದ ಸುಬ್ರಾಯ ಅಗ್ನಿಹೋತ್ರಿ, ವಿನಾಯಕ ಶಾಸ್ತ್ರಿ, ಶ್ರೀಶ, ಅಮೃತೇಶ ಹಿರೇ, ಪರಮೇಶ್ವರ ಮಾರ್ಕಂಡೆ, ಸುಬ್ರಹ್ಮಣ್ಯ ಭಟ್, ಶೇಷಗಿರಿ ಭಟ್ ಮತ್ತಿತರರು ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.