ಬೆಂಗಳೂರು ಅಭಿವೃದ್ಧಿಯ ನಾಗಾಲೋಟ ರಿಯಲ್ ಎಸ್ಟೇಟ್ ನಿಂದಾಗಿ ಹಸಿರು ಹೊದಿಕೆ ಕಮರತೊಡಗಿದೆ. ಇದನ್ನು ಮನಗಂಡಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಹಳೆಯ ವೈಭವದ ಹಸಿರು ದಿನಗಳನ್ನು ಹಿಂತಿರುಗಿಸುವ ಉದ್ದೇಶದಿಂದ ನಗರದಲ್ಲಿ 15 ಲಕ್ಷ ಗಿಡ ನೆಡುವ ಬೃಹತ್ ಅಭಿಯಾನ ಜೂ.27ರಿಂದ ಹಮ್ಮಿಕೊಂಡಿದೆ
ಬೆಂಗಳೂರು : ಉದ್ಯಾನ ನಗರಿ, ಹಸಿರು ಸ್ವರ್ಗ ಎಂದೆಲ್ಲ ಖ್ಯಾತಿ ಹೊಂದಿದ್ದ ಬೆಂಗಳೂರು ಅಭಿವೃದ್ಧಿಯ ನಾಗಾಲೋಟ ಹಾಗೂ ರಿಯಲ್ ಎಸ್ಟೇಟ್ ಬೂಮ್‌ನಿಂದಾಗಿ ತನ್ನ ಹಸಿರು ಹೊದಿಕೆ ಕಮರತೊಡಗಿದೆ. ಇದನ್ನು ಮನಗಂಡಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಬೆಂದಕಾಳೂರಿನ ಹಳೆಯ ವೈಭವದ ಹಸಿರು ದಿನಗಳನ್ನು ಹಿಂತಿರುಗಿಸುವ ಉದ್ದೇಶದಿಂದ ನಗರದಲ್ಲಿ 15 ಲಕ್ಷ ಗಿಡ ನೆಡುವ ಬೃಹತ್ ಅಭಿಯಾನವನ್ನು ಜೂ.27ರಿಂದ ಹಮ್ಮಿಕೊಂಡಿದೆ.
ನಾಡಪ್ರಭು ಕೆಂಪೇಗೌಡ ಜಯಂತಿ
ನಾಡಪ್ರಭು ಕೆಂಪೇಗೌಡ ಜಯಂತಿ ಅಂಗವಾಗಿ ‘ಒಂದು ಮನೆ, ಒಂದು ಔಷಧೀಯ ಸಸ್ಯ’ ಎಂಬ ಪರಿಕಲ್ಪನೆಯಲ್ಲಿ ನಡೆಯಲಿರುವ ಈ ಅಭಿಯಾನದಲ್ಲಿ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ 5 ಲಕ್ಷ ಸಸಿಗಳು ಸೇರಿದಂತೆ ಬನಶಂಕರಿ 6ನೇ ಹಂತ, ಡಾ. ಶಿವರಾಮ ಕಾರಂತ ಬಡಾವಣೆ ಸೇರಿದಂತೆ ಕೆರೆಗಳ ಬಫರ್ ವಲಯಗಳು, ರಾಜಕಾಲುವೆಗಳ ಬಫರ್ ವಲಯಗಳು, ಉದ್ಯಾನವನಗಳು ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿ ಸಸಿ ನೆಡುಲು ಉದ್ದೇಶಿಸಲಾಗಿದೆ.
ಬೆಂಗಳೂರಿನ ಹಸಿರು ಹೊದಿಗೆ ವಿಸ್ತರಿಸುವುದು, ನಗರ ಉಷ್ಣ ದ್ವೀಪ (ಅರ್ಬನ್ ಹೀಟ್ ಐಲ್ಯಾಂಡ್ ) ಪರಿಣಾಮ ತಗ್ಗಿಸುವುದು, ಜೀವವೈವಿಧ್ಯತೆ ಹೆಚ್ಚಿಸುವುದು ಹಾಗೂ ಭವಿಷ್ಯದ ಪೀಳಿಗೆಗಳಿಗಾಗಿ ದೀರ್ಘಕಾಲಿಕ ಪರಿಸರ ಆಸ್ತಿಗಳನ್ನು ನಿರ್ಮಿಸುವುದನ್ನು ಈ ಅಭಿಯಾನದ ಉದ್ದೇಶವಾಗಿದೆ. ಈ ಅಭಿಯಾನದಲ್ಲಿ 50 ಸಾವಿರಕ್ಕೂ ಹೆಚ್ಚು ನಾಗರಿಕರು, ಸ್ವಯಂಸೇವಕರು, ವಿದ್ಯಾರ್ಥಿಗಳು, ಕಾರ್ಪೊರೇಟ್ ಸಂಸ್ಥೆಗಳು, ನಿವಾಸಿ ಸಂಘಗಳು, ಸರ್ಕಾರೇತರ ಸಂಸ್ಥೆಗಳು, ಹಾಗೂ ಸರ್ಕಾರಿ ಇಲಾಖೆಗಳು ಭಾಗವಹಿಸುವ ನಿರೀಕ್ಷೆಯಿದೆ.
ಈ ಅಭಿಯಾನದಲ್ಲಿ ಬೆಂಗಳೂರಿನ ಪರಿಸರ ವ್ಯವಸ್ಥೆಗೆ ಸೂಕ್ತವಾದ ಸ್ಥಳೀಯ ಮರಗಳ ಜಾತಿಗಳು ಹಾಗೂ ಔಷಧೀಯ ಸಸ್ಯಗಳಿಗೆ ಆದ್ಯತೆ ನೀಡಲಾಗುವುದು. ಅಪರೂಪದ ಹಾಗೂ ವಿರಳವಾದ ಹಲವು ಸ್ಥಳೀಯ ಸಸ್ಯ ಪ್ರಭೇದಗಳನ್ನೂ ನೆಡಲಾಗುವುದು. ವೈಜ್ಞಾನಿಕವಾಗಿ ಯೋಜಿತವಾದ, ಹೆಚ್ಚಿನ ಸಾಂದ್ರತೆಯ ಮಿಯಾವಾಕಿ ವಿಧಾನವನ್ನು ಅಳವಡಿಸಿಕೊಂಡು ಸ್ವಾವಲಂಬಿ ನಗರ ಆಮ್ಲಜನಕ ಉದ್ಯಾನಗಳನ್ನು ನಿರ್ಮಿಸುವ ಗುರಿಯನ್ನು ಕಾರ್ಯಕ್ರಮ ಹೊಂದಿದೆ.
ಈ ಕುರಿತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎನ್.ಎ.ಹ್ಯಾರೀಸ್ ಮಾತನಾಡಿ, ಸಿಎಂ ಡಿ.ಕೆ.ಶಿವಕುಮಾರ್ ಅವರ ನಿರ್ದೇಶನದ ಮೇರೆಗೆ ನಾವು ಕೆಂಪೇಗೌಡ ಜಯಂತಿಯಂದು ಬಿಡಿಎ ವತಿಯಿಂದ 15 ಲಕ್ಷ ಸ್ಥಳೀಯ ಸಸಿಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಇದು ಕೇವಲ ಸಸಿ ನೆಡುವ ಕಾರ್ಯಕ್ರಮವಲ್ಲ. ನಮ್ಮ ನಗರದ ಪರಿಸರ ಭವಿಷ್ಯವನ್ನು ಸುರಕ್ಷಿತಗೊಳಿಸುವ ಜನಾಂದೋಲನವಾಗಿದೆ ಎಂದರು.
15 ಲಕ್ಷ ಸ್ಥಳೀಯ ಸಸಿಗಳ ನೆಡುವ ಮೂಲಕ ನಾವು ಭವಿಷ್ಯದ ಪೀಳಿಗೆಗಳಿಗೆ ಶಾಶ್ವತ ಹಸಿರು ಪರಂಪರೆ ನಿರ್ಮಿಸುತ್ತಿದ್ದೇವೆ. ಹೆಚ್ಚುತ್ತಿರುವ ತಾಪಮಾನ, ಜೀವವೈವಿಧ್ಯತೆಯ ಕುಸಿತ ಹಾಗೂ ಹವಾಮಾನ ಬದಲಾವಣೆಯಂತಹ ಸವಾಲುಗಳನ್ನು ಎದುರಿಸುತ್ತಿದ್ದೇವೆ. ಭಾರತದ ಉದ್ಯಾನ ನಗರಿ ಎಂಬ ತನ್ನ ಗುರುತನ್ನು ಮರುಸ್ಥಾಪಿಸಿಕೊಳ್ಳಲು ಬೆಂಗಳೂರಿನ ಪ್ರತಿಯೊಬ್ಬ ನಾಗರಿಕರೂ ಈ ಐತಿಹಾಸಿಕ ಅಭಿಯಾನದ ಪಾಲುದಾರರಾಗಬೇಕು ಎಂದು ನಾನು ಮನವಿ ಮಾಡುತ್ತೇನೆ ಎಂದು ಹೇಳಿದರು.
ಬಿಡಿಎ ಆಯುಕ್ತ ಮೇಜರ್ ಪಿ. ಮಣಿವಣ್ಣನ್ ಮಾತನಾಡಿ, ಸಸಿ ನೆಡುವ ಅಭಿಯಾನವು ಸುಸ್ಥಿರ ನಗರಾಭಿವೃದ್ಧಿಯತ್ತ ಬಿಡಿಎಯ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಬೆಂಗಳೂರಿನಾದ್ಯಂತ ಬೃಹತ್ ಪ್ರಮಾಣದ ಹಸಿರು ಪ್ರದೇಶಗಳು ಹಾಗೂ ಪರಿಸರ ಸಂರಕ್ಷಣಾ ವಲಯಗಳನ್ನು ನಿರ್ಮಿಸುವ ಮೂಲಕ ನಗರದ ದೀರ್ಘಕಾಲಿಕ ಪರಿಸರ ಸ್ಥೈರ್ಯಕ್ಕೆ ನಾವು ಹೂಡಿಕೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಗಿನ್ನಿಸ್ ದಾಖಲೆ!
ಈ ಬೃಹತ್ ಸಸಿ ನೆಡುವ ಅಭಿಯಾನಕ್ಕೆ ಗಿನ್ನೆಸ್ ವಿಶ್ವ ದಾಖಲೆ ಮಾನ್ಯತೆ ಪಡೆಯುವ ಸಾಧ್ಯತೆಗಳನ್ನೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಪರಿಶೀಲಿಸುತ್ತಿದೆ. ನಾಗರಿಕರ ಸಹಭಾಗಿತ್ವದ ನಗರ ಪರಿಸರ ಸಂರಕ್ಷಣಾ ಚಟುವಟಿಕೆಗಳಲ್ಲಿ ಬೆಂಗಳೂರನ್ನು ಜಾಗತಿಕ ಮಟ್ಟದಲ್ಲಿ ಮುಂಚೂಣಿಯ ನಗರವಾಗಿ ಗುರುತಿಸುವ ಗುರಿ ಹೊಂದಿದೆ.
350 ಬಗೆಯ ಸಸ್ಯಗಳು:
ಡಾ.ಶಿವರಾಮ ಕಾರಂತ, ನಾಡಪ್ರಭು ಕೆಂಪೇಗೌಡ, ಬನಶಂಕರಿ ಬಡಾವಣೆಗಳು ಸೇರಿ ಒಟ್ಟು 240 ಎಕರೆಯಲ್ಲಿ ಗಿಡಗಳನ್ನು ನೆಡುವ ಮೂಲಕ ನ್ಯೂ ಆಕ್ಸಿಜನ್ ಪಾರ್ಕ್‌ಗಳ ನಿರ್ಮಾಣಕ್ಕೆ ಬಿಡಿಎ ಉದ್ದೇಶಿಸಿದೆ. ಅರಣ್ಯ ಇಲಾಖೆಯ ಅಧಿಕಾರಿಗಳ ಜತೆಗೆ ಚರ್ಚಿಸಿ, ಇಲ್ಲಿ ಮಾವು, ಹಲಸು, ಬೇವಿನ ಮರ, ಸಪೋಟ ಮುಂತಾದ ವೈವಿಧ್ಯಮಯ ಸ್ಥಳೀಯ ಮತ್ತು ಔಷಧೀಯ ಪ್ರಬೇಧಗಳೊಂದಿಗೆ 350 ಬಗೆಯ ಸ್ಥಳೀಯ ಸಸಿಗಳನ್ನು ನೆಡುವ ಮೂಲಕ, ಪೊದೆಗಳು ಮತ್ತು ಔಷಧಿಯ ಸಸ್ಯಗಳನ್ನು ಒಳಗೊಂಡ ಬಹು-ಪದರದ ಅರಣ್ಯ ರಚನೆಗೆ ನಿರ್ಧರಿಸಿದೆ.