ಚಿಕ್ಕಮಗಳೂರು : ಧಾನ್ಯ, ಕಾಗದ, ಬಟ್ಟೆ ಸೇರಿದಂತೆ ವಿವಿಧ ವಸ್ತುಗಳನ್ನು ಕದ್ದು ಗೂಡಿನಲ್ಲಿ ಇಟ್ಟುಕೊಳ್ಳುವ ಇಲಿ ಮಧ್ಯೆ, ಇಲ್ಲೊಂದು ಕಿಲಾಡಿ ಇಲಿ, ಗಲ್ಲಾಪೆಟ್ಟಿಯಲ್ಲಿ ಇದ್ದ ನೋಟುಗಳನ್ನೇ ಕದ್ದು ಗೂಡಿನಲ್ಲಿ ಇಟ್ಟುಕೊಂಡಿದ್ದ ಅಚ್ಚರಿ ಘಟನೆ ಚಿಕ್ಕಮಗಳೂರಿನ ಅಜ್ಜಂಪುರ ಪಟ್ಟಣದಲ್ಲಿ ಜಂ-ಜಂ ಚಿಕನ್ ಅಂಗಡಿಯಲ್ಲಿ ನಡೆದಿದೆ.
10, 20 ಹಾಗೂ 50 ರು. ಮುಖಬೆಲೆಯ ನೋಟುಗಳು ಕಾಣೆಯಾಗುತ್ತಿದ್ದವು
ಕಳೆದ 1 ವಾರದಿಂದ ಅಂಗಡಿ ಮಾಲೀಕ ಸಿದ್ದಿಕ್ ಅವರು ಗಲ್ಲಾಪೆಟ್ಟಿಗೆಯಲ್ಲಿ ಇಡುತ್ತಿದ್ದ 10, 20 ಹಾಗೂ 50 ರು. ಮುಖಬೆಲೆಯ ನೋಟುಗಳು ಒಂದೊಂದಾಗಿ ಕಾಣೆಯಾಗುತ್ತಿದ್ದವು. ಇದರ ಬಗ್ಗೆ ಮಾಲೀಕರಿಗ ಅನುಮಾನ ಮೂಡಿತ್ತು. ಆದರೆ, ಭಾನುವಾರ ರಾತ್ರಿ ಮಾಲೀಕನೇ ಗಲ್ಲಾಪೆಟ್ಟಿಗೆಯಲ್ಲಿ ಹಣವಿಟ್ಟು ಬಾಗಿಲು ಮುಚ್ಚಿಕೊಂಡು ಮನೆಗೆ ಹೋಗಿದ್ದರು. ಸೋಮವಾರ ಬೆಳಗ್ಗೆ ಆತ ಅಂಗಡಿ ತೆರೆದು ಗಲ್ಲಾಪೆಟ್ಟಿಗೆ ಗಮನಿಸಿದಾಗ ಹಣ ಮಾಯವಾಗಿತ್ತು. ಈ ವೇಳೆ ಪರಿಶೀಲಿಸಿದಾಗ ಇಲಿ ಓಡಾಡುತ್ತಿದ್ದ ಬಗ್ಗೆ ತಿಳಿದು ಬಂದಿದೆ. ಇಡೀ ಅಂಗಡಿಯನ್ನು ಹುಡುಕಾಟ ನಡೆಸಿದಾಗ ಅಂಗಡಿಯ ಹಿಂಭಾಗದಲ್ಲಿ ಇಲಿಯೊಂದು ನೋಟುಗಳನ್ನು ಸಂಗ್ರಹಿಸಿಟ್ಟಿರುವುದು ಪತ್ತೆಯಾಗಿದೆ.
ಗೂಡಿನ ನಿರ್ಮಾಣ ಸಾಮಗ್ರಿ
ಇಲಿ, ಹಣವನ್ನೇ ತನ್ನ ಗೂಡಿನ ನಿರ್ಮಾಣ ಸಾಮಗ್ರಿಯನ್ನಾಗಿ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. 1 ವಾರದಲ್ಲಿ ಒಟ್ಟು 190 ರು. ಮೌಲ್ಯದ ವಿವಿಧ ನೋಟು ಪತ್ತೆಯಾಗಿವೆ.
ಇತ್ತೀಚಿಗೆ ತುಮಕೂರಿನಲ್ಲಿ ಚಿನ್ನದ ಆಭರಣಗಳ ಮೇಲೆ ಇಲಿಗೆ ಮೋಹ ತೋರಿದ ಘಟನೆ ನಡೆದಿತ್ತು. ಇದೀಗ ಕಾಫಿ ನಾಡಿನಲ್ಲಿ ಹಣದ ಮೇಲೆ ವ್ಯಾಮೋಹ ಬೆಳೆಸಿಕೊಂಡ ಕಿಲಾಡಿ ಇಲಿಯ ಕೈಚಳಕ ಬೆಳಕಿಗೆ ಬಂದಿದೆ.
