ಚಿಕ್ಕಮಗಳೂರುಬೇಲೂರು ತಾಲೂಕಿನಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಮೂಡಿಗೆರೆ ತಾಲೂಕಿನ ಮೂಲಕ ಭದ್ರಾ ಅರಣ್ಯಕ್ಕೆ ಓಡಿಸುವ ಅರಣ್ಯ ಇಲಾಖೆ ಕಾರ್ಯಾಚರಣೆಗೆ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಯಿತು. ಬೇಲೂರು ಮತ್ತು ಮೂಡಿಗೆರೆ ತಾಲೂಕುಗಳ ಗಡಿಯಲ್ಲಿರುವ ಬೇವಿನಗುಡ್ಡೆಯಲ್ಲಿ ಎರಡೂ ತಾಲೂಕುಗಳ ಗ್ರಾಮಸ್ಥರು ಮುಖಾಮುಖಿಯಾಗಿ ವಾಗ್ವಾದ ನಡೆಸಿದ ಘಟನೆ ಭಾನುವಾರ ನಡೆಯಿತು.

ಎರಡೂ ತಾಲೂಕುಗಳ ಗ್ರಾಮಸ್ಥರು ಮುಖಾಮುಖಿ: ವಾಗ್ವಾದ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಬೇಲೂರು ತಾಲೂಕಿನಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಮೂಡಿಗೆರೆ ತಾಲೂಕಿನ ಮೂಲಕ ಭದ್ರಾ ಅರಣ್ಯಕ್ಕೆ ಓಡಿಸುವ ಅರಣ್ಯ ಇಲಾಖೆ ಕಾರ್ಯಾಚರಣೆಗೆ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಯಿತು. ಬೇಲೂರು ಮತ್ತು ಮೂಡಿಗೆರೆ ತಾಲೂಕುಗಳ ಗಡಿಯಲ್ಲಿರುವ ಬೇವಿನಗುಡ್ಡೆಯಲ್ಲಿ ಎರಡೂ ತಾಲೂಕುಗಳ ಗ್ರಾಮಸ್ಥರು ಮುಖಾಮುಖಿಯಾಗಿ ವಾಗ್ವಾದ ನಡೆಸಿದ ಘಟನೆ ಭಾನುವಾರ ನಡೆಯಿತು.ಬೇಲೂರು ತಾಲೂಕಿನ ಗೌತಳ್ಳಿ ಸಮೀಪದ ಬೇವಿನಗುಡ್ಡೆವರೆಗೆ 38 ಕಾಡಾನೆಗಳ ಹಿಂಡನ್ನು ಅರಣ್ಯ ಇಲಾಖೆ ಸಿಬ್ಬಂದಿ ಪಟಾಕಿ ಸಿಡಿಸಿ ಬೆನ್ನಟ್ಟಿದ್ದಾರೆ. ಈ ವೇಳೆ ಕಾಡಾನೆಗಳು ಬೇವಿನಗುಡ್ಡೆ ಸುತ್ತಮುತ್ತಲಿನ ತೋಟಗಳಿಗೆ ನುಗ್ಗಿ ಅಪಾರ ಹಾನಿ ಉಂಟುಮಾಡಿ ಅಲ್ಲಿಯೇ ಬೀಡುಬಿಟ್ಟಿವೆ. ಮುಂದಿನ ಹಂತದಲ್ಲಿ ಆನೆಗಳನ್ನು ಮೂಡಿಗೆರೆ ಕಡೆಗೆ ಓಡಿಸಲು ಅರಣ್ಯ ಇಲಾಖೆ ಮುಂದಾದಾಗ ಮೂಡಿಗೆರೆ ಭಾಗದ ಗ್ರಾಮಸ್ಥರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.ಕಾರ್ಯಾಚರಣೆ ಸ್ಥಗಿತಗೊಳಿಸಿ ಆನೆಗಳನ್ನು ಮತ್ತೆ ಬೇಲೂರು ಭಾಗದತ್ತ ಓಡಿಸುವಂತೆ ಅರಣ್ಯ ಅಧಿಕಾರಿಗಳನ್ನು ಒತ್ತಾಯಿಸಿದರು. ಆದರೆ ಬೇಲೂರು ಗಡಿಭಾಗದ ಗ್ರಾಮಸ್ಥರು ಸರ್ಕಾರದ ಆದೇಶದಂತೆ ಕಾರ್ಯಾಚರಣೆ ಮುಂದು ವರಿಸಬೇಕು ಎಂದು ಪಟ್ಟು ಹಿಡಿದರು. ಇದರಿಂದ ಎರಡೂ ಭಾಗದ ಜನರ ನಡುವೆ ಮಾತಿನ ಚಕಮಕಿ ನಡೆಯಿತು.ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ವಿಧಾನ ಪರಿಷತ್ ಮಾಜಿ ಸಭಾಪತಿ ಎಂ.ಕೆ.ಪ್ರಾಣೇಶ್, ಮೂಡಿಗೆರೆ ಮೂಲಕ ಭದ್ರಾ ಅರಣ್ಯಕ್ಕೆ ಕಾಡಾನೆಗಳನ್ನು ಓಡಿಸುವ ಸರ್ಕಾರದ ನಿರ್ಧಾರ ಒಪ್ಪಲು ಸಾಧ್ಯವಿಲ್ಲ. ಭದ್ರಾ ಅರಣ್ಯ ಸುಮಾರು 100 ಕಿ.ಮೀ. ದೂರದಲ್ಲಿದೆ. ಇಷ್ಟು ದೂರ ಕಾಡಾನೆಗಳನ್ನು ಓಡಿಸುವುದು ಅವೈಜ್ಞಾನಿಕ ಕ್ರಮ. ಇದರಿಂದ ಸಾವಿರಾರು ಎಕರೆ ಕಾಫಿ ತೋಟ ಗಳು ನಾಶವಾಗುವ ಆತಂಕವಿದೆ. ಸಾಲಸೋಲ ಮಾಡಿ ತೋಟಗಳನ್ನು ಬೆಳೆಸಿರುವ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.ಈ ಕಾರ್ಯಾಚರಣೆ ಸ್ಥಗಿತಗೊಳಿಸದಿದ್ದರೆ ಮೂಡಿಗೆರೆ ತಾಲೂಕು ಬಂದ್‌ಗೆ ಕರೆ ನೀಡಲಾಗುವುದು ಎಂದು ಎಚ್ಚರಿಸಿದರು. ಸೋಮವಾರ ವಿವಿಧ ಸಂಘಟನೆಗಳ ಮುಖಂಡರೊಂದಿಗೆ ಚರ್ಚಿಸಿ ಮುಂದಿನ ಹೋರಾಟದ ರೂಪುರೇಷೆ ಸಿದ್ಧಪಡಿಸ ಲಾಗುವುದು ಎಂದರು.ಈ ಸಂದರ್ಭದಲ್ಲಿ ಡಿಎಫ್‌ಒ ಕೆ.ಟಿ.ಬೋರಯ್ಯ, ಎಸಿಎಫ್ ಆಕರ್ಷ್, ವಲಯ ಅರಣ್ಯಾಧಿಕಾರಿ ಶಿವಕುಮಾರ್, ಮುಖಂಡರಾದ ಅನುಕುಮಾರ್, ಕಾರ್ತಿಕ್, ಅವಿನಾಶ್, ಸಂದೀಪ್, ಸಿದ್ದಯ್ಯ, ಪ್ರಸಾದ್ ಬಕ್ಕಿ, ಪ್ರಹ್ಲಾದ್, ಎಂ.ಎನ್.ಅಶ್ವಥ್, ಸುಜಯ್ ಕನ್ನಾಪುರ, ಗಬ್ಬಳ್ಳಿ ಚಂದ್ರೇಗೌಡ, ಜಯಕುಮಾರ್ ಮತ್ತಿತರರು ಇದ್ದರು.