ಬಾಳೆಹೊನ್ನೂರುಹಾಸನ ಜಿಲ್ಲೆಯ ಬೇಲೂರಿನಿಂದ ಮೂಡಿಗೆರೆ ಮೂಲಕ ಭದ್ರಾ ಅಭಯಾರಣ್ಯಕ್ಕೆ ಕಾಡಾನೆಗಳ ಸ್ಥಳಾಂತರ ಮಾಡುತ್ತಿರುವ ಸರ್ಕಾರ ಹಾಗೂ ಅರಣ್ಯ ಇಲಾಖೆ ಕ್ರಮ ಖಂಡಿಸಿ ಚಿಕ್ಕಮಗಳೂರಿನ ಖಾಂಡ್ಯದಲ್ಲಿ ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಅವರಿಗೆ ಅಭಿನಂದನೆ ಸಲ್ಲಿಸುವ ಬ್ಯಾನರನ್ನು ಅಳವಡಿಸಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಖಾಂಡ್ಯದಲ್ಲಿ ಬ್ಯಾನರ್ ಅಳವಡಿಸಿ ಆಕ್ರೋಶ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಹಾಸನ ಜಿಲ್ಲೆಯ ಬೇಲೂರಿನಿಂದ ಮೂಡಿಗೆರೆ ಮೂಲಕ ಭದ್ರಾ ಅಭಯಾರಣ್ಯಕ್ಕೆ ಕಾಡಾನೆಗಳ ಸ್ಥಳಾಂತರ ಮಾಡುತ್ತಿರುವ ಸರ್ಕಾರ ಹಾಗೂ ಅರಣ್ಯ ಇಲಾಖೆ ಕ್ರಮ ಖಂಡಿಸಿ ಚಿಕ್ಕಮಗಳೂರಿನ ಖಾಂಡ್ಯದಲ್ಲಿ ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಅವರಿಗೆ ಅಭಿನಂದನೆ ಸಲ್ಲಿಸುವ ಬ್ಯಾನರನ್ನು ಅಳವಡಿಸಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ವಾರ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಶಿವಲಿಂಗೇಗೌಡರ ಹೇಳಿಕೆ ಬೆನ್ನಲ್ಲೆ ಎಲ್ಲೆಡೆ ವಿರೋಧ ವ್ಯಕ್ತವಾತ್ತಿದ್ದಾಗಲೇ ಹೆನ್ನಂಗಿ ಬೆಳ್ಳಂಗಿ ಗ್ರಾಮದಲ್ಲಿ ರೈತರೊಬ್ಬರು ಆನೆ ದಾಳಿಗೆ ಬಳಿಯಾಗಿದ್ದರು. ಇದನ್ನು ಖಂಡಿಸಿ ಸ್ಥಳಿಯರು ನಡೆಸಿದ ಪ್ರತಿಭಟನೆ ಸಂದರ್ಭದಲ್ಲಿ ಶಾಸಕ ಟಿ.ಡಿ.ರಾಜೇಗೌಡ, ಜಿಲ್ಲಾಧಿಕಾರಿ ಸೇರಿದಂತೆ ಜಿಲ್ಲಾಡಳಿತ, ಅರಣ್ಯ ಇಲಾಖೆ ಅಧಿಕಾರಿಗಳು ನ.25ರಂದು ಬೆಂಗಳೂರಿನಲ್ಲಿ ಅರಣ್ಯ ಸಚಿವರ ನೇತೃತ್ವದಲ್ಲಿ ವಿಶೇಷ ಸಭೆ ನಡೆಸಿ ಕಾಡಾನೆ ಹಾವಳಿಗಳ ಕುರಿತು ಚರ್ಚಿಸಲಾಗುವುದು.

ಅಲ್ಲಿವರೆಗೂ ಕಾಡಾನೆಗಳನ್ನು ಎಲ್ಲಿಗೂ ಓಡಿಸುವುದಿಲ್ಲ, ಸ್ಥಳಾಂತರ ಮಾಡು ವುದಿಲ್ಲ ಎಂದು ಭರವಸೆ ನೀಡಿ 3 ದಿನ ಆಗುವುದರೊಳಗೆ ಕಾಡಾನೆ ಕಾರ್ಯಾಚರಣೆ ಆರಂಭಿಸಿ ಹಾಸನ ಜಿಲ್ಲೆ ಯಿಂದ ಅರಣ್ಯ ಇಲಾಖೆ ಸಿಬ್ಬಂದಿ, ಅಧಿಕಾರಿಗಳು ಸುಮಾರು 38ಕ್ಕೂ ಅಧಿಕ ಕಾಡಾನೆಗಳನ್ನು ಚಿಕ್ಕಮಗಳೂರು ಜಿಲ್ಲೆಗೆ ಓಡಿಸಿದ್ದು, ಭಾನುವಾರದ ವೇಳೆಗೆ ಮೂಡಿಗೆರೆ ತಾಲೂಕಿಗೆ ಆನೆಗಳು ಬಂದಿವೆ. ಇಲ್ಲಿಂದ ಆನೆಗಳನ್ನು ಭದ್ರಾ ಅಭಯಾರಣ್ಯಕ್ಕೆ ಓಡಿಸಲು ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.ಈ ಹಿನ್ನೆಲೆಯಲ್ಲಿ ಖಾಂಡ್ಯ ಹೋಬಳಿ ಸಾರ್ವಜನಿಕರು ಖಾಂಡ್ಯ ಗ್ರಾಮದಲ್ಲಿ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಶಾಸಕರನ್ನುಅಣಕಿಸುವಂತೆ ಬ್ಯಾನರ್‌ ಕಟ್ಟಿದ್ದಾರೆ.

ಬ್ಯಾನರ್‌ನಲ್ಲಿ ನಮ್ಮ ಮಲೆನಾಡಿನ ರೈತರ ಬದುಕನ್ನು ಕಸಿದುಕೊಳ್ಳಲು ಬೇರೆ ಜಿಲ್ಲೆಯಿಂದ ನಮ್ಮ ಭದ್ರಾ ಅಭಯಾರಣ್ಯಕ್ಕೆ ಸುಮಾರು 50ಕ್ಕೂ ಹೆಚ್ಚು ಆನೆಗಳನ್ನು ಕರೆತರುತ್ತಿರುವ ನಮ್ಮ ಕ್ಷೇತ್ರದ ಶಾಸಕರು ಮತ್ತು ಸರ್ಕಾರಕ್ಕೂ ಅಭಿನಂದನೆ ಕೋರುತ್ತಿರುವ ಮಲೆನಾಡಿನ ರೈತರು. ಸ್ವಾಗತ ಬಯಸುವ ಖಾಂಡ್ಯ ಹೋಬಳಿ ಮುಗ್ಧ ಜನರು ಎಂದು ಬರೆದಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ಬ್ಯಾನರ್ ವೈರಲ್ ಆಗಿದ್ದು, ಪ್ರತಿಭಟನೆ ವೇಳೆ ಹೇಳಿದಂತೆ ನಡೆಯದೆ, ಸುಳ್ಳು ಹೇಳಿಕೆ ನೀಡಿ ಹೋರಾಟದ ಹಾದಿಯನ್ನು ಶಾಸಕರು, ಅಧಿಕಾರಿಗಳು ತಪ್ಪಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ನಡುವೆ ಶಾಸಕ ಟಿ.ಡಿ.ರಾಜೇಗೌಡ ಆನೆಗಳ ಸ್ಥಳಾಂತರ ವಿರೋಧಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿ ದ್ದಾರೆ. ಅಧಿಕಾರಕ್ಕಿಂತ ಕ್ಷೇತ್ರದ ಜನರ ಹಿತವೇ ಮುಖ್ಯ ಎಂದು ಹೇಳಿದ್ದಾರೆ.

೨೨ಬಿಹೆಚ್‌ಆರ್ ೧:

ಕಾಡಾನೆಗಳ ಸ್ಥಳಾಂತರ ಖಂಡಿಸಿ ಬಾಳೆಹೊನ್ನೂರು ಸಮೀಪದ ಖಾಂಡ್ಯದಲ್ಲಿ ಅಳವಡಿಸಿರುವ ಬ್ಯಾನರ್.