ಕನ್ನಡಪ್ರಭ ವಾರ್ತೆ ಮೈಸೂರು
ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧ ಹೆಚ್ಚಾಗುತ್ತಿದೆ. ಸುಶಿಕ್ಷಿತರೇ ಹೆಚ್ಚು ವಂಚನೆಗೊಳಗಾಗುತ್ತಿದ್ದಾರೆ. ಓಟಿಪಿ ಬದಲು ಪ್ರಸ್ತುತ ನಕಲಿ ಟ್ರೇಡಿಂಗ್ ಆಪ್ ಗಳನ್ನು ಬಳಸಿ 32 ಕೋಟಿ ರೂ. ವಂಚಿಸಲಾಗುತ್ತಿದೆ. ಈ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ತಿಳಿಸಿದರು.ಈ ಹಿಂದೆ ಸೈಬರ್ ಕಳ್ಳರು ಸಾರ್ವಜನಿಕರಿಂದ ಒಟಿಪಿ ಪಡೆದು ಅವರ ಬ್ಯಾಂಕ್ ಖಾತೆಗೆ ಕನ್ನ ಹಾಕುತ್ತಿದ್ದರು. ಆದರೆ, ಇದೀಗ ಅವರ ತಂತ್ರ ಬದಲಾಗಿದೆ. ಷೇರು ಮಾರ್ಕೆಟ್ ಮೇಲೆ ಹಣ ಹೂಡಿಕೆ ಮಾಡಿದರೆ ದುಪ್ಪಟ್ಟು ಮಾಡಿಕೊಡುವುದಾಗಿ ಆಮಿಷವೊಡ್ಡುತ್ತಾರೆ. ಫೇಸ್ ಬುಕ್, ವಾಟ್ಸಾಪ್ ಗ್ರೂಪ್ ಗಳ ಮೂಲಕ ಸಂದೇಶ ಕಳುಹಿಸುತ್ತಾರೆ. ಇದನ್ನು ನಂಬಿ ಜನ ಹಣ ಹೂಡಿಕೆ ಮಾಡಿ ಮೋಸ ಹೋಗುತ್ತಿದ್ದಾರೆ ಎಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.ಮೈಸೂರಿನಲ್ಲಿ ಈ ವರ್ಷ ಇಂತಹ 61 ಪ್ರಕರಣಗಳು ದಾಖಲಾಗಿದ್ದು, 32 ಕೋಟಿ ರೂ. ಹಣ ಕಳೆದುಕೊಂಡಿದ್ದಾರೆ. ಇದಲ್ಲದೆ ಡಿಜಿಟಲ್ ಅರೆಸ್ಟ್ ಅಂದರೆ ನಿಮಗೆ ಗಾಂಜಾ, ಡ್ರಗ್ಸ್ ಪಾರ್ಸೆಲ್ ಬಂದಿದೆ. ನಿಮ್ಮ ವಿರುದ್ಧ ಪ್ರಕರಣ ದಾಖಲಿಸದೆ ಇರಲು ಹಣ ಕೊಡಬೇಕು ಎಂದು ಬೆದರಿಸಿ ಸುಲಿಗೆ ಮಾಡಿರುವ 19 ಪ್ರಕರಣಗಳು ದಾಖಲಾಗಿದ್ದು, 20 ಲಕ್ಷ ರೂ. ಹೆಚ್ಚು ಹಣ ಕಳೆದುಕೊಂಡಿದ್ದಾರೆ. ಇದು ಮಾತ್ರವಲ್ಲದೆ ಪಾರ್ಟ್ ಟೈಮ್ ಜಾಬ್ ಕೊಡಿಸುವುದಾಗಿ ನಂಬಿಸಿ, ಹಣ ಪಡೆದು ವಂಚಿಸುತ್ತಿರುವುದು ಹೆಚ್ಚಾಗಿದೆ. ಹೀಗಾಗಿ ಸಾರ್ವಜನಿಕರು ಎಚ್ಚರಿಕೆಯಿಂದಿರಬೇಕು ಎಂದು ಅವರು ಕೋರಿದರು.ಸೈಬರ್ ಅಪರಾಧದ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದ್ದು, ಸಾರ್ವಜನಿಕರು ಹೆಚ್ಚು ಜಾಗರೂಕರಾಗಿರಬೇಕು. ವಂಚನೆಗೆ ಒಳಗಾದ ಸಂದರ್ಭದಲ್ಲಿ ತಕ್ಷಣ 1930 ಕರೆ ಮಾಡಿ ದೂರು ನೀಡಿದರೆ ಕ್ರಮ ವಹಿಸಲಾಗುವುದು ಎಂದರು.‘ಪ್ರಸ್ತುತ ಮೈಸೂರು ಕೇಂದ್ರ ಕಾರಾಗೃಹಕ್ಕೆ ಪೊಲೀಸ್ ಇಲಾಖೆಯಿಂದ ಮೂರು ತಿಂಗಳಿಗೊಮ್ಮೆ ದಿಢೀರ್ ದಾಳಿ ನಡೆಸಿ, ಪರಿಶೀಲಿಸಲಾಗುತ್ತಿದೆ. ಅಲ್ಲದೆ, ಅಕ್ರಮಗಳು ಕಂಡು ಬಂದಲ್ಲಿ ಪ್ರಕರಣ ದಾಖಲಿಸಿ, ಕ್ರಮ ವಹಿಸಲಾಗುತ್ತಿದೆ. ಇನ್ನು ಮುಂದೆ ಪ್ರತಿ ತಿಂಗಳು ಮೈಸೂರು ಜೈಲಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸುತ್ತೇವೆ.’- ಸೀಮಾ ಲಾಟ್ಕರ್, ನಗರ ಪೊಲೀಸ್ ಆಯುಕ್ತೆ