ಸರ್ಕಾರಿ ಗೋಮಾಳ ಜಮೀನು ಕುಲುವನಹಳ್ಳಿ ಗ್ರಾಪಂಗೆ ಹಸ್ತಾಂತರ

KannadaprabhaNewsNetwork | Published : Aug 27, 2024 1:36 AM

ಸಾರಾಂಶ

ತ್ಯಾಮಗೊಂಡ್ಲು ಹೋಬಳಿಯ ರಾಷ್ಟ್ರೀಯ ಹೆದ್ದಾರಿ 48ರ ಪಕ್ಕದ ದೊಡ್ಡೇರಿ ಗ್ರಾಮದ ಸರ್ವೆ ನಂ.22 ರ ಸರ್ಕಾರಿ ಗೋಮಾಳವನ್ನು ಕಂದಾಯ ಅಧಿಕಾರಿಗಳು ಅಳತೆ ಮಾಡಿ ಸ್ಥಳೀಯ ಕುಲುವನಹಳ್ಳಿ ಗ್ರಾಪಂಗೆ ದಾಖಲಾತಿಗಳನ್ನು ಹಸ್ತಾಂತರ ಮಾಡಿದ್ದಾರೆ.

ದಾಬಸ್‌ಪೇಟೆ: ತ್ಯಾಮಗೊಂಡ್ಲು ಹೋಬಳಿಯ ರಾಷ್ಟ್ರೀಯ ಹೆದ್ದಾರಿ 48ರ ಪಕ್ಕದ ದೊಡ್ಡೇರಿ ಗ್ರಾಮದ ಸರ್ವೆ ನಂ.22 ರ ಸರ್ಕಾರಿ ಗೋಮಾಳವನ್ನು ಕಂದಾಯ ಅಧಿಕಾರಿಗಳು ಅಳತೆ ಮಾಡಿ ಸ್ಥಳೀಯ ಕುಲುವನಹಳ್ಳಿ ಗ್ರಾಪಂಗೆ ದಾಖಲಾತಿಗಳನ್ನು ಹಸ್ತಾಂತರ ಮಾಡಿದ್ದಾರೆ. ಬೆಂ.ಗ್ರಾ. ಜಿಲ್ಲಾಧಿಕಾರಿ ಹಾಗೂ ನೆಲಮಂಗಲ ತಾಲೂಕು ತಹಸೀಲ್ದಾರ್ ಆದೇಶದ ಹಿನ್ನಲೆ, ಆಶ್ರಯ ಯೋಜನೆಯಲ್ಲಿ ಮಂಜೂರಾದ ಜಮೀನನ್ನು, ಉಪತಹಸೀಲ್ದಾರ್ ನಾರಾಯಣಸ್ವಾಮಿ ಸಮ್ಮುಖದಲ್ಲಿ ಸರ್ಕಾರಿ ಭೂಮಿಯನ್ನು ಅಳತೆ ಮಾಡಿ ನಂತರ ಕುಲುವನಹಳ್ಳಿ ಗ್ರಾ.ಪಂ.ಪಿಡಿಓ ಮೋಹನ್ ಕುಮಾರ್, ಗ್ರಾ.ಪಂ.ಅಧ್ಯಕ್ಷೆ ಸುನಂದಮ್ಮ ಸೇರಿದಂತೆ ಗ್ರಾಮಸ್ಥರ ಸಮ್ಮುಖದಲ್ಲಿ ದಾಖಲಾತಿ ಮತ್ತು ಜಮೀನನ್ನು ಕುಲುವನಹಳ್ಳಿ ಪಂಚಾಯತಿಗೆ ಹಸ್ತಾಂತರ ಮಾಡಲಾಗಿದೆ. ಗ್ರಾ.ಪಂ.ಅಧ್ಯಕ್ಷೆ ಸುನಂದಮ್ಮ ಮಾತನಾಡಿ ಸರ್ಕಾರಿ ಗೋಮಾಳದ ಜಾಗ ಪಂಚಾಯತಿ ಆಡಳಿತ ಚೌಕಟ್ಟಿಗೆ ಬಂದಿರುವುದು ಉತ್ತಮ ಬೆಳವಣಿಗೆಯಾಗಿದೆ. ಮುಂದಿನ ನಡೆಗಳನ್ನು ಎಲ್ಲಾ ಸದಸ್ಯರ ಸಮ್ಮಖದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ. ಸರ್ಕಾರ ಮತ್ತು ಕಂದಾಯ ಇಲಾಖೆ ಸಹಕಾರದಿಂದ ಸರ್ಕಾರಿ ಜಮೀನು ಅರ್ಹರಿಗೆ ಅನುಕೂಲವಾಗಲಿ ಎಂದರು.

ಗ್ರಾ.ಪಂ.ಸದಸ್ಯ ಚಂದ್ರಶೇಖರಯ್ಯ ಮಾತನಾಡಿ ಬಹುದಿನಗಳ ಕನಸು ಸರ್ವೆ ನಂ 22 ರಲ್ಲಿ 7.3 ಎಕರೆ ಜಮೀನಿನಲ್ಲಿ ನಿವೇಶನ ತಯಾರಿಸಿ ಹಂಚಿಕೆ ಮಾಡುವ ಉದ್ದೇಶ ಅಧಿಕೃತವಾಗಿ ಪ್ರಾರಂಭವಾಗಿದೆ. ನಮ್ಮ ಶಾಸಕರಾದ ಎನ್.ಶ್ರೀನಿವಾಸ್ ರವರಿಗೆ ನಿವೇಶನದ ಬಗ್ಗೆ ಮನವರಿಕೆ ಮಾಡಿದ್ದೇವು. ಇದೀಗ ಅಧಿಕಾರಿಗಳ ಕಾರ್ಯವೈಖರಿ ಸಂತಸವಾಗಿದೆ, ಮುಂದಿನ ದಿನಗಳಲ್ಲಿ ಶಾಸಕರ ಮುಖಾಂತರವೇ ಗ್ರಾ.ಪಂ.ವ್ಯಾಪ್ತಿಯ ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡಿಸುವ ಕೆಲಸಕ್ಕೆ ಮುಂದಾಗುತ್ತೇವೆ ಎಂದರು. ಈ ಸಂದರ್ಭದಲ್ಲಿ ಗ್ರಾ.ಪಂ.ಮಾಜಿ ಅಧ್ಯಕ್ಷ ಗಂಗಣ್ಣ, ಮಾಜಿ ಅಧ್ಯಕ್ಷೆ ರತ್ನ.ಬಿ.ಆರ್, ಗ್ರಾ.ಪಂ. ಸದಸ್ಯರಾದ ರಂಗಸ್ವಾಮಿ, ಕುಮಾರಯ್ಯ, ಪಿಡಿಓ ಮೋಹನ್ ಕುಮಾರ್, ಕಾರ್ಯದರ್ಶಿ ಧನಂಜಯ್ ಮತ್ತು ಗ್ರಾಮಸ್ಥರು ಊರಿನ ಮುಖಂಡರು ಹಾಜರಿದ್ದರು.

Share this article