ಕಲಘಟಗಿ:
ಪ್ರತಿ ಟನ್ ಗೆ ₹ 3200 ಹಾಗೂ ಹಿಂದಿನ ಕಬ್ಬಿನ ಬಾಕಿ ಬಿಲ್ ಪಾವತಿ ಮಾಡುವವರಿಗೂ ಕಾರ್ಖಾನೆಗಳಿಗೆ ನುರಿಸಲು ಕಬ್ಬು ಕಳಿಸುವುದಿಲ್ಲ ಎಂದು ತಾಲೂಕಿನ ರೈತರು ಒಕ್ಕೂರಲಿನ ನಿರ್ಧಾರ ಕೈಗೊಂಡಿದ್ದಾರೆ.ಪಟ್ಟಣದ ತಾಲೂಕು ಪಂಚಾಯಿತಿಯಲ್ಲಿ ತಹಸೀಲ್ದಾರ್ ವೀರೇಶ ಮುಳುಗುಂದಮಠ ನೇತೃತ್ವದಲ್ಲಿ ನಡೆದ ಕಬ್ಬು ಬೆಳೆಗಾರರು ಹಾಗೂ ಕಾರ್ಖಾನೆ ಅಧಿಕಾರಿಗಳ ಸಭೆಯಲ್ಲಿ ಕಲಘಟಗಿ ಕಬ್ಬು ಬೆಳೆಗಾರರು ಕಾರ್ಖಾನೆಗಳಿಗೆ ಕಬ್ಬು ಕಳಿಸದಿರಲು ನಿರ್ಧಾರಕ್ಕೆ ಬಂದರು.
ಉತ್ತರ ಕರ್ನಾಟಕದ ಕಬ್ಬು ನುರಿಸಲು ಕಾರ್ಖಾನೆಗಳಿಗೆ ಸಕ್ಕರೆ ಸಚಿವರು ಈ ಮೊದಲು ನ. 15ರ ನಂತರ ಅವಕಾಶ ನೀಡಿದ್ದರು. ಕಾರ್ಖಾನೆಗಳ ಮಾಲೀಕರ ಒತ್ತಡಕ್ಕೆ ಮಣಿದು ನ. 8ರ ನಂತರ ನುರಿಸಲು ಅನುಮತಿ ನೀಡಿದ್ದಾರೆ. ಇದನ್ನು ಗಮನಿಸಿದರೆ ಕಾರ್ಖಾನೆಗಳ ಮಾಲೀಕರ ತಾಳಕ್ಕೆ ಸರ್ಕಾರವೇ ಕುಣಿಯುತ್ತಿದೆ ಎಂದು ಅನಿಸುತ್ತಿದೆ. ಕೃತಕ ಅಭಾವ ಸೃಷ್ಟಿಸುವ ಇಂತಹ ಕುತಂತ್ರದಿಂದಾಗಿ ಕಬ್ಬು ಬೆಳೆಗಾರರು ನಷ್ಟ ಅನುಭವಿಸುತ್ತಿದ್ದಾರೆ ಎಂದು ದೂರಿದರು.ಕಲಘಟಗಿ ತಾಲೂಕಿನ ಕಬ್ಬಿಗೆ ರಾಜ್ಯದಲ್ಲೇ ಅತೀ ರಿಕವರಿವಿದೆ. ಕಾರ್ಖಾನೆವರು ಘೋಷಿಸಿರುವ ₹ 2950 ಪ್ರತಿ ಟನ್ ದರಕ್ಕೆ ಕಲಘಟಗಿ ತಾಲೂಕಿನ ಕಬ್ಬು ಬೆಳೆಗಾರರ ಸಹಮತವಿಲ್ಲ. ಪ್ರತಿ ಟನ್ ಗೆ ₹ 3200 ಘೋಷಿಸಿದರೆ ಮಾತ್ರ ಕಬ್ಬು ಕಟಾವು ಮಾಡಲು ಬಿಡುತ್ತೇವೆ. ಎಲ್ಲ ಕಾರ್ಖಾನೆಯವರು ದರ ನಿಗದಿ ಮಾಡಬೇಕು. ಯಾರು ಹೆಚ್ಚು ದರ ನೀಡುತ್ತಾರೆ ಅವರಿಗೆ ನಾವು ಕಬ್ಬು ಕಳಿಸುತ್ತೇವೆ. ಅಲ್ಲಿಯವರಿಗೆ ಕಬ್ಬು ಕಳಿಸುವುದಿಲ್ಲ ಎಂದು ಗಟ್ಟಿ ಧ್ವನಿ ಮೊಳಗಿಸಿದರು.
ಲಗಾನಿ ವಿಷಯದಲ್ಲಿ ರೈತರಿಗೆ ಬಹಳಷ್ಟು ಮೋಸವಾಗುತ್ತಿದೆ. ಕಾರ್ಖಾನೆಯವರು ಕಬ್ಬು ಕಟಾವು ಆರಂಭದ ಮೊದಲೇ ಗ್ಯಾಂಗ್‌ಗಳನ್ನು ಹಳ್ಳಿಗಳಿಗೆ ಕಳಿಸುತ್ತಾರೆ. ಕಬ್ಬು ಕಟಾವಿನ ಕೃತಕ ಅಭಾವ ಸೃಷ್ಟಿಸಿ ರೈತರಲ್ಲೇ ಜಗಳ ತಂದಿಡುವ ಹುನ್ನಾರ ನಡೆಯುತ್ತಿದೆ. ಅಲ್ಲದೇ ತೂಕದಲ್ಲೂ ಕಬ್ಬು ಬೆಳೆಗಾರರಿಗೆ ಮೋಸವಾಗುತ್ತಿದೆ. ರೈತರ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಎಲ್ಲರೂ ಒಗ್ಗೂಡಿ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ರೈತರು ಎಚ್ಚರಿಕೆ ನೀಡಿದರು.ತಹಸೀಲ್ದಾರ್ ವೀರೇಶ ಮುಳುಗುಂದಮಠ ಮಾತನಾಡಿ, ಕಾರ್ಖಾನೆಯವರು ಮೊದಲು ದರ ನಿಗದಿ ಮಾಡಿ ನೀಡಿದ ನಂತರ ಕಬ್ಬು ಕಟಾವು ನಡೆಯಲಿ. ಇಲ್ಲವಾದಲ್ಲಿ ರೈತರಿಗೆ ದರ ಬಗ್ಗೆ ಗೊತ್ತಾಗಲ್ಲ. ರೈತರು ಕೂಡ ಕಬ್ಬು ಕಳಿಸಲು ಪರಸ್ಪರ ಸ್ಫರ್ಧೆ ಮಾಡದೇ ಹೊಂದಾಣಿಕೆಯಿಂದ ನಡೆದುಕೊಳ್ಳಬೇಕು. ಎಲ್ಲ ಕಾರ್ಖಾನೆಗಳು ದರ ನಿಗದಿ ಮಾಡಿದ ನಂತರ ಕಬ್ಬು ಕಟಾವಿಗೆ ಅನುವು ಮಾಡಿಕೊಡಲಾಗುವುದು ಎಂದು ಹೇಳಿದರು.
ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯದರ್ಶಿ ನಿಜಗುಣಿ ಕೆಲಗೇರಿ, ಕಬ್ಬು ಬೆಳೆಗಾರರ ಸಂಘದ ಧಾರವಾಡ ಜಿಲ್ಲಾಧ್ಯಕ್ಷ ಮಹೇಶ ಬೆಳಗಾಂಕರ, ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ಉಪಾಧ್ಯಕ್ಷ ಉಳವಪ್ಪ ಬಳಿಗೇರ, ತಾಲೂಕು ಅಧ್ಯಕ್ಷ ವಸಂತ ಡಾಕಪ್ಪನವರ, ಉಪಾಧ್ಯಕ್ಷ ಬಸನಗೌಡ ಸಿದ್ದನಗೌಡ್ರ, ಜ್ಯೋತಿಬಾ ಹುಲಕೊಪ್ಪ, ಈಶ್ವರ ಜಾಯನಗೌಡರ, ನಾಗೇಶ ಇಟಗಿ, ಶಂಭು ಬಳಿಗೇರ, ಬಸವರಾಜ ತಡಸ, ಬಸವಣ್ಣೆಪ್ಪ ಅದರಗುಂಚಿ, ಪ್ರವೀಣ ಅರ್ಕಸಾಲಿ, ಶಿವು ತಡಸ, ಚಂದ್ರು ಇಂಗಳಗಿ, ಸುಭಾಷ ಮುದಿಗೌಡ್ರ, ಸಹದೇವ ಕುಂಬಾರ, ಮೂರುಸಾವಿರಪ್ಪ, ಶೇಖಯ್ಯ ಅಣ್ಣಿಗೇರಿ ಇತರರಿದ್ದರು.