ಕನ್ನಡಪ್ರಭ ವಾರ್ತೆ ದಾವಣಗೆರೆ
ಹೊಸ ಬಡಾವಣೆಯಾದ ಪಾಲಿಕೆ 32ನೇ ವಾರ್ಡ್‌ನಲ್ಲಿ ರಸ್ತೆ, ಮಳೆ ನೀರು ಚರಂಡಿ, ಒಳ ಚರಂಡಿ, ಪಾರ್ಕ್ ಸೇರಿ ಸಮಗ್ರ ಅಭಿವೃದ್ಧಿಗೆ ಹೆಚ್ಚು ಅನುದಾನ ಬಿಡುಗಡೆ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನರನ್ನು ಭೇಟಿ ಮಾಡಿ, ಮನವಿ ಮಾಡುವುದಾಗಿ ಬಿಜೆಪಿ ಪಾಲಿಕೆ ಸದಸ್ಯೆ, ಮಾಜಿ ಮೇಯರ್ ಡಿ.ಎಸ್.ಉಮಾ ಪ್ರಕಾಶ ತಿಳಿಸಿದರು.ನಗರದ 32ನೇ ವಾರ್ಡ್‌ನ ಜಯನಗರ ಸಿ ಬ್ಲಾಕ್‌ನ 3 ಮತ್ತು 4ನೇ ಕ್ರಾಸ್‌ನಲ್ಲಿ ಪಾಲಿಕೆ ಸಾಮಾನ್ಯ ನಿಧಿಯಡಿ ಸಿಸಿ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ವಿಶಾಲ ವ್ಯಾಪ್ತಿಯ ತಮ್ಮ ವಾರ್ಡ್ ಹಳೆ ಭಾಗದ ಜೊತೆ ಹೊಸ ಬಡಾವಣೆಗಳನ್ನೂ ಹೊಂದಿದ್ದು, ಇಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಹೆಚ್ಚಿನ ಅನುದಾನದ ಅಗತ್ಯವಿದೆ ಎಂದರು.
ಪಾಲಿಕೆ ವ್ಯಾಪ್ತಿ ದೊಡ್ಡ ವಾರ್ಡ್‌ಗಳಲ್ಲಿ 32ನೇ ವಾರ್ಡ್ ಸಹ ಒಂದಾಗಿದೆ. ವೇಗದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಈ ಭಾಗದಲ್ಲಿ ಮೂಲ ಸೌಕರ್ಯ ಕಲ್ಪಿಸಲು ಅನುದಾನದ ಅಗತ್ಯವಿದೆ. ಚರಂಡಿ, ಒಳ ಚರಂಡಿ, ರಸ್ತೆ, ಪಾರ್ಕ್‌ಗಳನ್ನು ಅಭಿವೃದ್ಧಿ ಪಡಿಸಬೇಕಾಗಿದೆ. ಇದಕ್ಕೆ ಹೆಚ್ಚು ಅನುದಾನದ ಅಗತ್ಯವೂ ಇದೆ ಎಂದು ಹೇಳಿದರು.ವಾರ್ಡ್ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿಯಾಗಬೇಕೆಂದರೆ ಇಲ್ಲಿ ಹೆಚ್ಚು ಹೆಚ್ಚು ಅನುದಾನದ ಅಗತ್ಯವಿದೆ. ಈ ಹಿನ್ನೆಲೆ ಹಂತ ಹಂತವಾಗಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು. ಮೂಲ ಸೌಕರ್ಯ ಕಲ್ಪಿಸಲು ಅಗತ್ಯ ಅನುದಾನ ಒದಗಿಸುವಂತೆ ಶೀಘ್ರವೇ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನರನ್ನು ಭೇಟಿ ಮಾಡಿ, ಮನವಿ ಮಾಡಲಿದ್ದೇವೆ ಎಂದು ತಿಳಿಸಿದರು.
ಜಯನಗರ ಸಿ ಬ್ಲಾಕ್ ನಿವಾಸಿಗಳು, ಹಿರಿಯ ವಕೀಲರೂ ಆದ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್.ಅರುಣಕುಮಾರ, ದೂಡಾ ಮಾಜಿ ಅಧ್ಯಕ್ಷ ಎ ವೈ ಪ್ರಕಾಶ್, ನಾಗರಿಕ ಸಮಿತಿ ಅಧ್ಯಕ್ಷ ಬಿಕ್ಕೋಜಪ್ಪ, ನಿವೃತ್ತ ಶಿಕ್ಷಕರಾದ ವೆಂಕಟೇಶ, ಮಹೇಶ, ಗದಗೇಶ್, ಗುತ್ತಿಗೆದಾರ ಬಸವಣ್ಣಪ್ಪ, ಕೆ.ಬಿ.ನಾಗರಾಜ ಇತರರು ಇದ್ದರು.