ರೈಲು ಸಂಚಾರ ಮತ್ತೆ ಅನಿರ್ದಿಷ್ಟಾವಧಿ ರದ್ದು

KannadaprabhaNewsNetwork |  
Published : Aug 17, 2024, 12:51 AM IST
16ಎಚ್ಎಸ್ಎನ್16 : ಹಳಿ ಮೇಲೆ ಕುಸಿದಿರುವ ಮಣ್ಣನ್ನು ಹಿಟಾಚಿಗಳ ಮೂಲಕ ತೆರವು ಮಾಡುತ್ತಿರುವುದು. | Kannada Prabha

ಸಾರಾಂಶ

ಸಕಲೇಶಪುರ ತಾಲೂಕಿನ ಆಚಂಗಿ ಗ್ರಾಮ ಸಮೀಪ ಶುಕ್ರವಾರ ರೈಲ್ವೆ ಹಳಿ ಮೇಲೆ ಮತ್ತೆ ಭೂ ಕುಸಿತ ಸಂಭವಿಸಿದ್ದರಿಂದ ಬೆಂಗಳೂರು-ಮಂಗಳೂರು ನಡುವೆ ರೈಲು ಸಂಚಾರವನ್ನು ಅನಿರ್ದಿಷ್ಟಾವಧಿಯವರೆಗೆ ರದ್ದುಗೊಳಿಸಲಾಗಿದೆ. ಭೂಕುಸಿತ ಸಂಭವಿಸಿದ ಪ್ರದೇಶದಲ್ಲೇ ಮತ್ತೆ ಹಳಿಗಳ ಮೇಲೆ ಭೂಮಿ ಕುಸಿದ ಪರಿಣಾಮ ರೈಲನ್ನು ಬಾಳ್ಳುಪೇಟೆ ಬಳಿ ತಡೆಹಿಡಿಯಲಾಗಿದೆ. ಮಂಗಳೂರಿನಿಂದ ಬೆಂಗಳೂರಿಗೆ ಸಂಚರಿಸುತ್ತಿದ್ದ ಕಾರವಾರ ಎಕ್ಸ್‌ಪ್ರೆಸ್ ರೈಲನ್ನು ಸಕಲೇಶಪುರ ರೈಲ್ವೆ ನಿಲ್ದಾಣದಲ್ಲಿ ತಡೆಹಿಡಿಯಲಾಗಿದೆ. ಇದರಿಂದಾಗಿ ನಿಗದಿತ ಸ್ಥಳಕ್ಕೆ ಸರಿಯಾದ ಸಮಯಕ್ಕೆ ತಲುಪಲಾಗದೆ ಎರಡು ರೈಲಿನಲ್ಲಿದ್ದ ಸಾವಿರಾರು ಪ್ರಯಾಣಿಕರು ಪರದಾಡುವಂತಾಗಿತ್ತು.

ಕನ್ನಡಪ್ರಭ ವಾರ್ತೆ ಸಕಲೇಶಪುರ

ತಾಲೂಕಿನ ಆಚಂಗಿ ಗ್ರಾಮ ಸಮೀಪ ಶುಕ್ರವಾರ ರೈಲ್ವೆ ಹಳಿ ಮೇಲೆ ಮತ್ತೆ ಭೂ ಕುಸಿತ ಸಂಭವಿಸಿದ್ದರಿಂದ ಬೆಂಗಳೂರು-ಮಂಗಳೂರು ನಡುವೆ ರೈಲು ಸಂಚಾರವನ್ನು ಅನಿರ್ದಿಷ್ಟಾವಧಿಯವರೆಗೆ ರದ್ದುಗೊಳಿಸಲಾಗಿದೆ.

ವಾರದ ಹಿಂದೆ ಭೂಕುಸಿತ ಸಂಭವಿಸಿದ ಪ್ರದೇಶದಲ್ಲೇ ಮತ್ತೆ ಹಳಿಗಳ ಮೇಲೆ ಭೂಮಿ ಕುಸಿದ ಪರಿಣಾಮ ಬೆಂಗಳೂರಿನಿಂದ ಮಂಗಳೂರಿಗೆ ಸಂಚರಿಸುತಿದ್ದ ಗೋಮ್ಮಟೇಶ್ವರ ಎಕ್ಸಪ್ರೆಸ್ ರೈಲನ್ನು ಬಾಳ್ಳುಪೇಟೆ ಬಳಿ ತಡೆಹಿಡಿಯಲಾಗಿದೆ. ಮಂಗಳೂರಿನಿಂದ ಬೆಂಗಳೂರಿಗೆ ಸಂಚರಿಸುತ್ತಿದ್ದ ಕಾರವಾರ ಎಕ್ಸ್‌ಪ್ರೆಸ್ ರೈಲನ್ನು ಸಕಲೇಶಪುರ ರೈಲ್ವೆ ನಿಲ್ದಾಣದಲ್ಲಿ ತಡೆಹಿಡಿಯಲಾಗಿದೆ. ಇದರಿಂದಾಗಿ ನಿಗದಿತ ಸ್ಥಳಕ್ಕೆ ಸರಿಯಾದ ಸಮಯಕ್ಕೆ ತಲುಪಲಾಗದೆ ಎರಡು ರೈಲಿನಲ್ಲಿದ್ದ ಸಾವಿರಾರು ಪ್ರಯಾಣಿಕರು ಪರದಾಡುವಂತಾಗಿತ್ತು.

ಕಾರ್ಯಾಚರಣೆ ಆರಂಭ: ಮಣ್ಣು ಕುಸಿತ ಸಂಭವಿಸಿದ ಕೆಲವೇ ಗಂಟೆಗಳಲ್ಲಿ ನೂರಾರು ರೈಲು ಕಾರ್ಮಿಕರು ಮಣ್ಣು ತೆರವು ಕಾರ್ಯಾಚರಣೆಗೆ ಇಳಿದಿದ್ದು ಬಿರುಸಿನ ಕಾರ್ಯಾಚರಣೆ ನಡೆಯುತ್ತಿದೆ. ತೆರವು ಕಾರ್ಯಾಚರಣೆ ಇನ್ನು ಎರಡು ದಿನಗಳ ಕಾಲ ಹಿಡಿಯಲಿದೆ ಎನ್ನಲಾಗುತ್ತಿದ್ದು, ಭಾರಿ ಪ್ರಮಾಣದ ಭೂಕುಸಿತ ಸಂಭವಿಸಿರುವ ಪ್ರದೇಶದಲ್ಲಿ ಅಂತರ್ಜಲ ಉಕ್ಕುತ್ತಿರುವುದರಿಂದ ಮತ್ತಷ್ಟು ಭೂಕುಸಿತದ ಭಯ ಅಧಿಕಾರಿಗಳನ್ನು ಕಾಡುತ್ತಿದೆ. ಇದರಿಂದಾಗಿ ಅನಿರ್ದಿಷ್ಟಾವಧಿಯವರೆಗೆ ಈ ಮಾರ್ಗದ ಎಲ್ಲ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ಪರ್ಯಾಯ ವ್ಯವಸ್ಥೆ:

ಹಳಿಯ ಮೇಲೆ ಭೂಕುಸಿತದಿಂದ ತಡೆಹಿಡಿಯಲಾಗಿರುವ ರೈಲು ಪ್ರಯಾಣಿಕರಿಗೆ ಹಾಸನ ಹಾಗೂ ಸಕಲೇಶಪುರ ಡಿಪೋಗಳಿಗೆ ಸೇರಿದ ಬಸ್‌ಗಳ ಮೂಲಕ ನಿಗದಿತ ಸ್ಥಳಗಳಿಗೆ ಕಳುಹಿಸಿಕೊಡಲಾಯಿತು.

ತಿಂಗಳಲ್ಲಿ ೧೫ ದಿನ ಸಂಚಾರವಿಲ್ಲ: ಶಿರಾಡಿಘಾಟ್‌ನಲ್ಲಿ ರೈಲ್ವೆ ಹಳಿಯ ತಳಪಾಯ ಕುಸಿದಿದ್ದರಿಂದ ಜುಲೈ ೨೭ರಿಂದ ಆಗಸ್ಟ್ ೭ರವರೆಗೆ ಸಂಚಾರ ತಡೆಹಿಡಿಯಲಾಗಿದ್ದು ಅಗಸ್ಟ್ ೮ರಿಂದ ಸಂಚಾರ ಆರಂಭಿಸಲಾಗಿತ್ತು. ಆಗಸ್ಟ್ ೧೧ರಂದು ಆಚಂಗಿ ಸಮೀಪ ಹಳಿಯ ಮೇಲೆ ಗುಡ್ಡ ಕುಸಿತ ಸಂಬಂಧಿಸಿದ್ದರಿಂದ ಮತ್ತೆ ರೈಲು ಸಂಚಾರ ಬಂದ್ ಮಾಡಲಾಗಿದ್ದು ಆಗಸ್ಟ್ ೧೪ರಂದು ಸಂಚಾರಕ್ಕೆ ಮುಕ್ತಗೊಳಿಸಲಾಗಿತ್ತು. ರೈಲುಗಳು ಸಂಚಾರ ಆರಂಭಿಸಿದ ಒಂದು ದಿನದಲ್ಲೆ ಮತ್ತೆ ಭೂಕುಸಿತದಿದ್ದ ಸಂಚಾರ ತಡೆಹಿಡಿಯಲಾಗಿದೆ.

PREV

Recommended Stories

ಬಾಗಲಕೋಟೆ ತೋಟಗಾರಿಕಾ ವಿಜ್ಞಾನ ವಿವಿಗೆ ಅನುದಾನ: ಸಚಿವ
ಸಂಭ್ರಮದ ಮೌನೇಶ್ವರ ಜಾತ್ರಾ ಮಹೋತ್ಸವ