ನಿವೃತ್ತ ಸರ್ಕಾರಿ ನೌಕರನಿಗೆ ₹33.97 ಲಕ್ಷ ಪಂಗನಾಮ

KannadaprabhaNewsNetwork | Published : Oct 18, 2023 1:00 AM

ಸಾರಾಂಶ

ದಿನಸಿ ಸಾಮಗ್ರಿ ಖರೀದಿಯಲ್ಲಿ ಹಣ ತೊಡಗಿಸಿ ಹೆಚ್ಚಿನ ಲಾಭ ಸಿಗುವಂತೆ ಮಾಡಲಾಗುವುದು ಎಂದು ನಂಬಿಸಿದ ವಂಚಕರು ನಿವೃತ್ತ ಸರ್ಕಾರಿ ನೌಕರರೊಬ್ಬರಿಂದ ₹33.97 ಲಕ್ಷ ಪಡೆದು ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ.
ಕಲಬುರಗಿ: ದಿನಸಿ ಸಾಮಗ್ರಿ ಖರೀದಿಯಲ್ಲಿ ಹಣ ತೊಡಗಿಸಿ ಹೆಚ್ಚಿನ ಲಾಭ ಸಿಗುವಂತೆ ಮಾಡಲಾಗುವುದು ಎಂದು ನಂಬಿಸಿದ ವಂಚಕರು ನಿವೃತ್ತ ಸರ್ಕಾರಿ ನೌಕರರೊಬ್ಬರಿಂದ ₹33.97 ಲಕ್ಷ ಪಡೆದು ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ. ದೇವಿನಗರದ ನಿವಾಸಿ, ಆರೋಗ್ಯ ಇಲಾಖೆಯ ನಿವೃತ್ತ ಸರ್ಕಾರಿ ನೌಕರ ಅಣ್ಣಾರಾವ ಹತ್ತರಕಿ (67) ವಂಚನೆಗೊಳಗಾದ ನತದೃಷ್ಟರಾಗಿದ್ದಾರೆ. ನಿವೃತ್ತಿಯ ನಂತರ ಅಣ್ಣಾರಾವ ಅವರು ಏನಾದರು ವ್ಯಾಪಾರ ಮಾಡಬೇಕು ಎಂದು ಇಚ್ಛಿಸಿದ್ದರು. ಈ ಬಗ್ಗೆ ಪರಿಚಿತರಾದ ಶಹಾಬಜಾರದ ಶಿವಪುತ್ರ ಭುಜುರ್ಕರ ಅವರ ಜೊತೆ ಚರ್ಚಿಸಿದ್ದರು. ಶಿವಪುತ್ರ ಅವರು ಪ್ರೇಮಾ ಫರತಬಾದ ಎಂಬುವವರನ್ನು ಭೇಟಿ ಮಾಡಿಸಿದರು. ಕಿರಾಣಿಯ ದಿನಸಿ ಸಾಮಗ್ರಿಗಳನ್ನು ಸಗಟು ಖರೀದಿ ಮಾಡಿದರೆ ಪ್ರತಿ ಕ್ವಿಂಟಲ್‌ ಮೇಲೆ ಹೆಚ್ಚುವರಿಯಾಗಿ ಅರ್ಧ ಕ್ವಿಂಟಲ್‌ ಕೊಡುವುದಾಗಿ ಹೇಳಿ ಪ್ರೇಮಾ ಅವರು ನಂಬಿಸಿದ್ದರು. ಅವರ ಮಾತು ನಂಬಿದ ಅಣ್ಣಾರಾವ ಅವರು ₹10.70 ಲಕ್ಷ ನೀಡಿದರು. ಇದಕ್ಕೆ ಪ್ರತಿಯಾಗಿ ಪ್ರೇಮಾ ಅವರು ₹1.39 ಲಕ್ಷ ಮೌಲ್ಯದ ದಿನಸಿ ಸಾಮಗ್ರಿ ಕಳುಹಿಸಿದ್ದರು. ಆ ನಂತರ ಸಂತೋಷ ಕೆರೂರು ಎಂಬುವವರನ್ನು ಪರಿಚಯಿಸಿ ಇವರು ನಾವು ನಡೆಸುವ ವ್ಯವಹಾರದ ಕಂಪನೀಯ ಮ್ಯಾನೇಜರ್ ಕಂ. ಮಾಲೀಕರಾಗಿದ್ದಾರೆ ಎಂದು ನಂಬಿಸಿ ಹೆಚ್ಚಿನ ಲಾಭ ಮಾಡಲು ಹೆಚ್ಚಿನ ದಿನಸಿ ಖರೀದಿಸುವಂತೆ ಉತ್ತೇಜಿಸಿದ್ದರು. ಪ್ರೇಮಾ ಅವರ ಮಾತು ನಂಬಿ ಅಣ್ಣಾರಾವ ಅವರು ಹಂತಹಂತವಾಗಿ ₹38.14 ಲಕ್ಷ ಕೊಟ್ಟಿದ್ದಾರೆ. ಆದರೆ ₹4.17 ಲಕ್ಷ ದಿನಸಿ ಸಾಮಗ್ರಿ ಮಾತ್ರ ಕಳುಹಿಸಿ ಉಳಿದ ಹಣಕ್ಕೆ ಸಾಮಗ್ರಿ ಕಳುಹಿಸುವುದಾಗಿ ಹೇಳಿ ದಿನಸಿ ಸಾಮಗ್ರಿ ಕಳುಹಿಸದೆ ಮೋಸ ಮಾಡಿದ್ದಾರೆ ಎಂದು ಅಣ್ಣಾರಾವ ಅವರು, ಪ್ರೇಮಾ ಫರತಾಬಾದ ಮತ್ತು ಸಂತೋಷ ಕೆರೂರ ಅವರ ವಿರುದ್ಧ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.

Share this article