- ಜಗಳೂರು ತಾಪಂನಲ್ಲಿ ಬೀಳ್ಕೊಡುಗೆ । ಜನಪ್ರತಿನಿಧಿಗಳು, ಅಧಿಕಾರಿಗಳು, ಸಿಬ್ಬಂದಿ ಭಾಗಿ
ಕನ್ನಡಪ್ರಭ ವಾರ್ತೆ ಜಗಳೂರು
ಸರ್ಕಾರಿ ಸೇವೆಯಲ್ಲಿ 33 ವರ್ಷಗಳ ಕಾಲ ಯಾವುದೇ ಚ್ಯುತಿಯಿಲ್ಲದೇ ದಕ್ಷತೆಯಿಂದ ಕಾರ್ಯನಿರ್ವಹಿಸಲು ಸಾರ್ವಜನಿಕರು, ಜನಪ್ರತಿನಿಧಿಗಳು ಹಾಗೂ ಸಹೋದ್ಯೋಗಿಗಳ ಸಹಕಾರವೇ ಮುಖ್ಯ ಕಾರಣ. ನಿವೃತ್ತಿ ಎಂಬುದು ಸೇವೆಯ ಅಂತ್ಯವಲ್ಲ, ಹೊಸ ಅಧ್ಯಾಯದ ಆರಂಭ ಎಂದು ತಾಲೂಕು ಪಂಚಾಯಿತಿ ನಿವೃತ್ತ ವ್ಯವಸ್ಥಾಪಕ ಹಾಗೂ ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ರವಿಕುಮಾರ್ ಹೇಳಿದರು.ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ತಾ.ಪಂ. ವ್ಯವಸ್ಥಾಪಕ ಹಾಗೂ ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ರವಿಕುಮಾರ್ ಅವರ ವಯೋನಿವೃತ್ತಿ ಪ್ರಯುಕ್ತ ಆಯೋಜಿಸಲಾಗಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ವೀರೇಶ್ ಒಡೆನಾಪುರ ಮಾತನಾಡಿ, ಸರ್ಕಾರಿ ನೌಕರರು ತಮ್ಮ ಸೇವಾ ಅವಧಿ ಮುಗಿದು ನಿವೃತ್ತಿಯ ಅಂಚಿಗೆ ಬಂದಾಗ ಯಾವುದೇ ಕಾರಣಕ್ಕೂ ಜಿಗುಪ್ಸೆ ಪಡದೆ ಆತ್ಮಸ್ಥೈರ್ಯ ಕಾಪಾಡಿಕೊಳ್ಳಬೇಕು ಎಂದರು.
ಕೆಪಿಸಿಸಿ ಎಸ್.ಟಿ. ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಡಿ. ಕೀರ್ತಿಕುಮಾರ್ ಮಾತನಾಡಿ, ಸರ್ಕಾರಿ ನೌಕರರು ರಾಜಕೀಯ ಹಾಗೂ ಇನ್ನಿತರ ಚಟುವಟಿಕೆಗಳಿಂದ ದೂರವಿದ್ದು ವೃತ್ತಿ ಬದ್ಧತೆ ರೂಢಿಸಿಕೊಳ್ಳಬೇಕು. ಸರ್ಕಾರದ ನಿಯಮಗಳನ್ನು ಪಾಲಿಸುವುದರಿಂದ ಸಮಾಜದಲ್ಲಿ ವೃತ್ತಿಗೌರವ ಹೆಚ್ಚುತ್ತದೆ. ನಿವೃತ್ತರಾದ ರವಿಕುಮಾರ್ ಅವರ ಅನುಭವ ಮತ್ತು ಸೇವೆ ಕಿರಿಯರಿಗೆ ಮಾರ್ಗದರ್ಶಕವಾಗಿದೆ ಎಂದು ಶುಭ ಕೋರಿದರು.
ಕೆಪಿಸಿಸ ಎಸ್.ಟಿ. ಘಟಕದ ಮಾಜಿ ರಾಜ್ಯಾಧ್ಯಕ್ಷ ಕೆ.ಪಿ. ಪಾಲಯ್ಯ ಮಾತನಾಡಿ, ರವಿಕುಮಾರ್ ಅವರು ರಾಜಕೀಯ ಕುಟುಂಬದ ಹಿನ್ನೆಲೆಯಿಂದ ಬಂದವರಾಗಿದ್ದರೂ, ಅಹಂಕಾರ ತೊರೆದು 33 ವರ್ಷಗಳ ಕಾಲ ಯಾವುದೇ ಚ್ಯುತಿ ಬಾರದಂತೆ ಸೌಜನ್ಯದಿಂದ ಸೇವೆ ಸಲ್ಲಿಸಿದ್ದಾರೆ. ರಾಜಕಾರಣಿಗಳು ಮನೆಗೆ ಬಂದಾಗಲೂ ರಾಜಕೀಯ ಮಾತನಾಡದೆ ಸೇವಾಮನೋಭಾವ ಮೆರೆದಿದ್ದಾರೆ ಎಂದು ಶ್ಲಾಘಿಸಿ, ಮುಂದಿನ ದಿನಗಳಲ್ಲಿ ಸಕ್ರಿಯ ರಾಜಕೀಯಕ್ಕೆ ಬರುವಂತೆ ಆಹ್ವಾನ ನೀಡಿದರು.
ಮಾಜಿ ಜಿ.ಪಂ. ಸದಸ್ಯ ಎಸ್.ಕೆ.ಮಂಜುನಾಥ್, ಮಾಜಿ ಎಪಿಎಂಸಿ ಅಧ್ಯಕ್ಷ ಯು.ಜಿ.ಶಿವಕುಮಾರ್, ಶಿವನಗೌಡ, ಎಂ.ಎಸ್.ಪಾಟೀಲ್, ಸರ್ಕಾರಿ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಪಾಲಾಕ್ಷಿ, ತಾಲೂಕು ಅಧ್ಯಕ್ಷ ಎ.ಎಲ್. ತಿಪ್ಪೇಸ್ವಾಮಿ, ಕಾರ್ಯದರ್ಶಿ ಕಲ್ಲಿನಾಥ್, ಪದಾಧಿಕಾರಿಗಳಾದ ಲಕ್ಷ್ಮೀಕಾಂತ್, ಸಿ.ಬಿ. ನಾಗರಾಜ್, ಸತೀಶ್, ಶಿಕ್ಷಕರ ಸಂಘ, ಪಿಡಿಒ ಸಂಘದ ಪದಾಧಿಕಾರಿಗಳು, ಹಲವು ಗಣ್ಯರು ಭಾಗವಹಿಸಿ ನಿವೃತ್ತಿ ಜೀವನಕ್ಕೆ ಶುಭ ಹಾರೈಸಿದರು.
-31ಜೆ.ಜಿ.ಎಲ್.1: ಜಗಳೂರು ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಬೀಳ್ಕೊಡುಗೆ ಹಾಗೂ ಸನ್ಮಾನ ಸಮಾರಂಭದಲ್ಲಿ ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ರವಿಕುಮಾರ್ ಅವರನ್ನು ಸನ್ಮಾನಿಸಲಾಯಿತು.