ಗಣೇಶ ಹಬ್ಬದ ಪ್ರಯುಕ್ತವಾಗಿ ಪಾಂಡವಪುರ ಪಟ್ಟಣದ ಹಳೇಬಸ್ ನಿಲ್ದಾಣದಲ್ಲಿ ಶ್ರೀಸಿದ್ದಿ ವಿನಾಯಕ ಸೇವಾ ಸಮಿತಿಯಿಂದ ಪ್ರತಿಷ್ಠಾಪನೆ ಮಾಡಲಾದ 46ನೇ ವರ್ಷದ ಗಣಪತಿ ಪೂಜಾ ಮಹೋತ್ಸವವು ವಿಜೃಂಭಣೆಯಿಂದ ಜರುಗಿತು. ಅಲ್ಲದೇ, ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಭಕ್ತರು, ಸಾರ್ವಜನಿಕರು ಭಾಗವಹಿಸಿ ಭಕ್ತಿಭಾವ ಪ್ರದರ್ಶಿಸಿದರು.

ಕನ್ನಡಪ್ರಭವ ವಾರ್ತೆ ಪಾಂಡವಪುರ

ಗಣೇಶ ಹಬ್ಬದ ಪ್ರಯುಕ್ತವಾಗಿ ಪಟ್ಟಣದ ಹಳೇಬಸ್ ನಿಲ್ದಾಣದಲ್ಲಿ ಶ್ರೀಸಿದ್ದಿ ವಿನಾಯಕ ಸೇವಾ ಸಮಿತಿಯಿಂದ ಪ್ರತಿಷ್ಠಾಪನೆ ಮಾಡಲಾದ 46ನೇ ವರ್ಷದ ಗಣಪತಿ ಪೂಜಾ ಮಹೋತ್ಸವವು ವಿಜೃಂಭಣೆಯಿಂದ ಜರುಗಿತು.

ಸಮಿತಿಯಿಂದ ಗಣೇಶೋತ್ಸವ ಪೂಜಾ ಕಾರ್ಯಕ್ರಮದಲ್ಲಿ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಭಕ್ತರು, ಸಾರ್ವಜನಿಕರು ಭಾಗವಹಿಸಿ ಭಕ್ತಿಭಾವ ಪ್ರದರ್ಶಿಸಿದರು.

ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರ ಪುತ್ರ ಸಿ.ಪಿ.ಶಿವರಾಜು ಭಾಗವಹಿಸಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು. ಇಂದಿನಿಂದ 48 ದಿನಗಳ ಕಾಲ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ ನಿತ್ಯ ದೇವರಿಗೆ ವಿಶೇಷ ಪೂಜೆ ಪುನಸ್ಕಾರಗಳು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಿದ್ದಾರೆ.

ಜೊತೆಗೆ ರಂಗೋಲಿ ಸ್ಪರ್ಧೆ, ಹೋಮಹವನ, ರಕ್ತದಾನ ಶಿಬಿರ, ಆರೋಗ್ಯ ಶಿಬಿರ, ಕಣ್ಣಿನ ತಪಾಸಣೆ ಶಿಬಿರ, ಹರಿಕಥೆ, ಜನಪದ ಗೀತೆ, ಯೋಗ, ರಸಮಂಜರಿ, ಭರತನಾಟ್ಯ, ಜನಪದ-ಭಾವಗೀತೆ, ಗಹನ ಸಂಗೀತ, ತತ್ವಪದಗಳು, ವಿವಿಧ ವೇಷಭೂಷಣ ಸ್ಪರ್ಧೆ, ರಸಮಂಜರಿ, ಚಲನಚಿತ್ರ ಪ್ರದರ್ಶನ, ಮ್ಯಾಜಿಕ್ ಶೋ ಮತ್ತು ಮಾತನಾಡುವ ಬೊಂಬೆ, ವೀಣಾವದನ ಹಾಗೂ ಗುರುವಂದನೆ, ಡ್ಯಾನ್ಸ್, ಅನ್ನ ಸಂತಪರ್ಣಣೆ ಸೇರಿದಂತೆ ನಿತ್ಯ ಹಲವು ಕಾರ್ಯಕ್ರಮಗಳು 48 ದಿನಗಳ ಕಾಲ ಸಂಜೆ ಸಾರ್ವಜನಿಕರಿಗೆ ಮನರಂಜನೆ ನೀಡಲಿವೆ.

ಯುವ ನಾಯಕ ಸಿ.ಪಿ.ಶಿವರಾಜು ಮಾತನಾಡಿ, ಗಣೇಶ ಚತುರ್ಥಿ ಪ್ರಯುಕ್ತ ಪಟ್ಟಣದ ಶ್ರೀಸಿದ್ಧಿ ವಿನಾಯಕ ಸೇವಾ ಸಮಿತಿ ವತಿಯಿಂದ ಪ್ರತಿವರ್ಷವು ವಿಜೃಂಭಣೆಯಿಂದ ಗಣೇಶೋತ್ಸವ ನಡೆಸಿಕೊಂಡು ಬರುತ್ತಿದ್ದಾರೆ. ಗಣೇಶೋತ್ಸವ ನೇತೃತ್ವದಲ್ಲಿ ವಹಿಸಿರುವ ಎಲ್ಲರಿಗೂ ಒಳ್ಳೆಯದಾಗಲಿ ಎಂದರು ಹಾರೈಸಿದರು.

ಈ ವೇಳೆ ಸಮಿತಿಯ ಹಿರಿಯರಾದ ಶ್ರೀಸುಬ್ರಮಣ್ಯಂ ಅವರ ನೇತೃತ್ವದಲ್ಲಿ ಯುವಕರು, ಭಕ್ತರು ಭಾಗವಹಿಸಿದ್ದರು.

ಬೃಹನ್ಮಠದಲ್ಲಿ ಸ್ವರ್ಣಗೌರಿಗೆ ವಿಶೇಷ ಪೂಜೆ

ಹಲಗೂರು: ಮಠದ ಬೀದಿಯ ಬೃಹನ್ಮಠದಲ್ಲಿ ಸ್ವರ್ಣ ಗೌರಿಗೆ ಮುತ್ತೈದೆಯರು ಬಾಗಿನ ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಿ ಮುತ್ತೈದೆಯರಿಗೆ ಅರಿಶಿನ ಕುಂಕುಮ ನೀಡಿ ವಿಶೇಷವಾಗಿ ಪೂಜೆ ಸಲ್ಲಿಸಿದರು.ಶಿಂಷಾ ನದಿಯ ದಡದಲ್ಲಿ ಅರಸಿನದಿಂದ ತಯಾರಿಸಿದ ಸ್ವರ್ಣ ಗೌರಿಯನ್ನು ತಂದು ಹಲಗೂರಿನ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮುಖಾಂತರ ಬೃಹನ್ಮಠಕ್ಕೆ ತಂದಾಗ ಮುತ್ತೈದೆಯರು ಆರತಿ ಎತ್ತಿ ವಿಶೇಷ ಪೂಜೆ ಸಲ್ಲಿಸಿ ಸ್ವರ್ಣ ಗೌರಿಯನ್ನು ಬರಮಾಡಿಕೊಂಡರು.

ಶ್ರೀ ವಿದ್ಯಾ ಗಣಪತಿ ದೇವಸ್ಥಾನದ ಪ್ರಸಾದ್ ಮಾತನಾಡಿ, ಪ್ರತಿವರ್ಷದಂತೆ ಈ ವರ್ಷವೂ ಶಿಂಷಾ ನದಿಯಿಂದ ಅರಸಿನ ಮತ್ತು ಮರಳಿನಿಂದ ಸ್ವರ್ಣ ಗೌರಿಯನ್ನು ಮಾಡಿಕೊಂಡು ಮಠಕ್ಕೆ ತರಲಾಯಿತು. ನಂತರ ಗೃಹಿಣಿಯರು ವಿಶೇಷವಾಗಿ ಪೂಜೆ ಸಲ್ಲಿಸುತಿದ್ದಾರೆ ಎಂದರು.ಸ್ವರ್ಣ ಗೌರಿ ಭಕ್ತ ಮಂಡಳಿ ತೋಂಟದಾರ್ಯ ನಾಗೇಂದ್ರ ಮಾತನಾಡಿ, ಸ್ವರ್ಣ ಗೌರಿ ಮಹೋತ್ಸವವನ್ನು ಸ್ವರ್ಣಗೌರಿ ಭಕ್ತ ಮಂಡಳಿ ವತಿಯಿಂದ ಆಚರಿಸಿಕೊಂಡು ಬಂದು 9 ದಿನಗಳ ಕಾಲ ಪ್ರತಿದಿನ ಸಂಜೆ ವಿಶೇಷ ಪೂಜಾ ಕಾರ್ಯಕ್ರಮವನ್ನು ನಡೆಸಿ ಮಹಾಮಂಗಳಾರತಿ ನಂತರ ಪ್ರಸಾದ ವಿನಯೋಗಿಸಲಾಗುತ್ತದೆ. ಸೆ.22 ರಂದು ಸ್ವರ್ಣ ಗೌರಿಯನ್ನು ಮುತ್ತಿನ ಪಲ್ಲಕಿಯಲ್ಲಿ ಕೂರಿಸಿ ಮೆರವಣಿಗೆ ಮುಖಾಂತರ ವಿಸರ್ಜಿಸಲಾಗುತ್ತದೆ ಎಂದು ಹೇಳಿದರು.

ಈ ವೇಳೆ ಭಕ್ತಮಂಡಳಿ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.