3300 ಎಕರೆ ಭೀಮಸಮುದ್ರ ಕೆರೇಲಿ ಭದ್ರೆಯ ನರ್ತನ

KannadaprabhaNewsNetwork |  
Published : Aug 24, 2026, 01:30 AM IST
ಭೀಮಸಮುದ್ರ ಕೆರೆಗೆ ದುಮ್ಮಿಕ್ಕೀರುವ ಭದ್ರೆಯ ನೀರುಮಹೇಶ್ವರಪ್ಪವೇದಮೂರ್ತಿ | Kannada Prabha

ಸಾರಾಂಶ

3300 acres of Bhimasamudra, the dance of the Kereli Bhadra

ಭೀಮಸಮುದ್ರ ಕೆರೆ ಒಡಲೊಳಗೆ ಭದ್ರೆಯ ಝಳು ಝುಳು ನಿನಾದ । ಆಸುಪಾಸಿನ ಅನ್ನದಾತರ ಮನದಲ್ಲಿ ತುಂಬಿದ ಹರ್ಷ

ವಿಶೇಷ ವರದಿ

ಕನ್ನಡಪ್ರಭ ವಾರ್ತೆ ಸಿರಿಗೆರೆ

ದುಮ್ಮಿಕ್ಕಿ ಹರಿಯುವ ಜಲಧಾರೆಯಲ್ಲಿ

ದುಂಬಿಯ ಹಾಡಿನ ಝೇಂಕಾರದಲ್ಲಿ ……. …..

ಚಿತ್ರದುರ್ಗ ಜಿಲ್ಲೆಯಲ್ಲಿಯೇ ಬಹುದೊಡ್ಡ ಕೆರೆಗಳಲ್ಲಿ ಒಂದೆಂಬ ಭೀಮಸಮುದ್ರದ ಭೀಮೇಶ್ವರ ಕೆರೆಗೆ ಮಲೆನಾಡಿನ ತಪ್ಪಲಿನಿಂದ ಹರಿದು ಬರುತ್ತಿರುವ ಭದ್ರೆ ನವಿಲಿನ ನರ್ತನ ಶುರು ಮಾಡಿದ್ದಾಳೆ. ಭದ್ರೆಯ ನರ್ತನದ ಗೆಜ್ಜೆಯ ಶಬ್ದಕ್ಕೆ ಆಸುಪಾಸಿನ ರೈತಾಪಿ ಜನರು ಮನದುಂಬಿ ಹೆಜ್ಜೆ ಹಾಕಿದ್ದಾರೆ.

ಬೃಹದಾಕಾರವಾದ ಪೈಪುಗಳಲ್ಲಿ ಚೀರು ಚಿಮ್ಮಿ ಕೆರೆಯ ಒಡಲು ಸೇರುತ್ತಿರುವುದನ್ನು ನೋಡುವುದೇ ಒಂದು ಸಂಭ್ರಮ, ಸೋಜಿಗ. ನೀರು ಚಿಮ್ಮುತ್ತಿದ್ದಂತೆ ಕೆರೆಯ ಅಂಗಳದದಲ್ಲಿ ಸಾಲುಗಟ್ಟಿ ಜನರು ಹರ್ಷೋದ್ಗಾರಗಳಿಂದ ನೀರನ್ನು ಬರಮಾಡಿಕೊಂಡಿದ್ದಾರೆ. ಭದ್ರೆಯ ನೀರು ತಿಂಗಳಾನುಕಾಲ ಹೀಗೆ ಹರಿದು ಬಂದರೆ ಭೀಮಸಮುದ್ರದ ಕೆರೆ ಸಮುದ್ರದೋಪಾದಿಯಲ್ಲಿ ನೋಡುಗರ ಕಣ್ಮನ ಸೆಳೆಯುತ್ತದೆ.

3300 ಎಕರೆಯಷ್ಟು ವಿಸ್ತೀರ್ಣದ ಬಹು ದೊಡ್ಡ ಕೆರೆ ಇದು. ದುರ್ಗದ ಪಾಳೇಗಾರರಾದ ಭರಮಣ್ಣನಾಯಕ ಐತಿಹ್ಯವೂ ಈ ಕೆರೆಗೆ ಇದೆ. ಚಿಕ್ಕ ತೊರೆಯಂತೆ ಇದ್ದ ಕೆರೆಯನ್ನು ವಿಸ್ತಾರಗೊಳಿಸಿ ಅಭಿವೃದ್ಧಿಪಡಿಸಿದ ಧೀಮಂತರು ಭರಮಣ್ಣನಾಯಕ. ಈ ಕೆರೆಗೆ 8000 ಎಕರೆ ವಿಸ್ತೀರ್ಣದ ಅಚ್ಚುಕಟ್ಟು ಭೂಮಿ ಇದೆ. ಕೆರೆ ತುಂಬಿದಾಗ 8000 ಎಕರೆ ಭೂಮಿಯಲ್ಲಿ ಸಮೃದ್ಧಿ ಎದ್ದುಕಾಣುತ್ತದೆ. ಸುತ್ತಲ 33 ಹಳ್ಳಿಗಳ ಕೃಷಿ ಬದುಕಿಗೆ ಇದು ಇಂಬುಕೊಡುತ್ತದೆ. ಭೀಮಸಮುದ್ರದ ಕೆರೆ ಬತ್ತಿದರೆ 33 ಹಳ್ಳಿಗರ ಕೃಷಿಯೂ ಸೊರಗುತ್ತದೆ.

ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆ ಈ ಭಾಗದ ಜನರಿಗೆ ವರದಾನವಾಗಿದೆ. ವಿಶೇಷವಾಗಿ ಭೀಮಸಮುದ್ರದ ಆಸುಪಾಸಿನ ಜನರು ಭದ್ರೆಯ ನೀರು ತಮ್ಮೂರಿನ ಐತಿಹಾಸಿಕ ಕೆರೆಗೆ ಹರಿದು ಬಂದು ಪಾತಾಳ ಸೇರಿದ್ದ ಅಂತರ್ಜಲಕ್ಕೆ ಮರು ಹುಟ್ಟು ಕೊಟ್ಟಿದ್ದಕ್ಕೆ ಕೃತಜ್ಞತೆಯ ಭಾವವನ್ನು ತೋರಿದ್ದಾರೆ. ಸಾವಿರಾರು ಎಕರೆ ವಿಸ್ತೀರ್ಣದ ಅಡಿಕೆ ತೋಟಗಳಿಗೆ ಇದರಿಂದ ಜೀವಸೆಲೆ ಸಿಕ್ಕಂತಾಗಿದೆ.

ದೊಡ್ಡದಾದ ಯೋಜನೆ

ಹೊನ್ನಾಳಿ ತಾಲೂಕಿನ ಸಾಸ್ವೆಹಳ್ಳಿ ಬಳಿಯ ಭದ್ರಾ ನದಿಯಿಂದ 1.692 ಟಿಎಂಸಿ ನೀರನ್ನು ಬಳಸಿಕೊಂಡು ಚಿತ್ರದುರ್ಗ, ದಾವಣಗೆರೆ ಹಾಗೂ ಶಿಮೊಗ್ಗ ಜಿಲ್ಲೆಗಳ ವ್ಯಾಪ್ತಿಯ ಒಟ್ಟು 121 ಕೆರೆಗಳನ್ನು ತುಂಬಿಸುವ ಬಹುದೊಡ್ಡ ಯೋಜನೆ ಇದು. ಯೋಜನೆಯ ವ್ಯಾಪ್ತಿಗೆ 116 ಗ್ರಾಮಗಳು ಸೇರ್ಪಡೆಯಾಗಿವೆ. ಯೋಜನೆಯ ವ್ಯಾಪ್ತಿಗೆ ಒಳಪಡುವ ಎಲ್ಲಾ ಕೆರೆಗಳಿಗೂ ಸಮರ್ಪಕವಾಗಿ ನೀರು ಒದಗಿಸಲು ಹೊನ್ನಾಳಿ ತಾಲ್ಲೂಕಿನ ಸಾಸ್ವೆಹಳ್ಳಿ, ಚನ್ನಗಿರಿ ತಾಲ್ಲೂಕಿನ ಚನ್ನಕೇಶವಪುರ, ಜಕ್ಕಲಿ (ಸೂಳೆಕೆರೆ ಸಮೀಪ) ಹಾಗೂ ಮುತ್ತುಗದೂರು ಗ್ರಾಮದ ಕೆರೆಗಳಲ್ಲಿ ಜಾಕ್‌ವೆಲ್‌ಗಳನ್ನು ವೈಜ್ಞಾನಿಕ ರೀತಿಯಲ್ಲಿ ನಿರ್ಮಾಣ ಮಾಡಲಾಗಿದೆ. ಸಾಸ್ವೆಹಳ್ಳಿಯಿಂದ ಮುತ್ತುಗದೂರು ಕೆರೆಗೆ ಬಂದು ಸಂಗ್ರಹವಾಗುವ ನೀರು ಅಲ್ಲಿಂದ ಮುಂದೆ ಹತ್ತಾರು ಹಳ್ಳಿಗಳ ಕೆರೆಗಳನ್ನು ತುಂಬಿಸುತ್ತಲೇ ಭೀಮಸಮುದ್ರ ತಲುಪುತ್ತದೆ.

ಭಾಷ್ಯ ಬರೆದ ಹರಿಕಾರ

ಇಂತಹದೊಂದು ಯೋಜನೆ ಸರ್ಕಾರದ ಮಟ್ಟದಲ್ಲಿ ಸಾಕಾರ ರೂಪ ಪಡೆಯಲು ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ವಹಿಸಿದ ಪಾತ್ರ ಎಲ್ಲರ ಕೃತಜ್ಞತೆಗೆ ಪಾತ್ರವಾಗಿದೆ. ಬರದ ನಾಡಿನ ಜನರ ಬದುಕಿನ ಸಂಕಟಗಳನ್ನು ಅರಿತ ಶ್ರೀಗಳವರು ಉಬ್ರಾಣಿ ಏತ ನೀರಾವರಿ, ಜಗಳೂರು ಏತ ನೀರಾವಿ ಹಾಗೂ ಭರಮಸಾಗರ ಏತ ನೀರಾವರಿಯಂತಹ ಬಹುಕೋಟಿ ವೆಚ್ಚದ ಯೋಜನೆಗಳನ್ನು ಸರ್ಕಾರದ ಮಟ್ಟದಲ್ಲಿ ಮಂಜೂರು ಮಾಡಿಸಿ ಅವೆಲ್ಲವೂ ಅವರದೇ ಕಣ್ಗಾವಲಿನಲ್ಲಿ ರೂಪುಗೊಳ್ಳುವಂತೆ ಮಾಡಿದರು. ಯೋಜನೆ ಮಂಜೂರಾಗುತ್ತಲೆ ಜನಪ್ರತಿನಿಧಿಗಳು, ಅಧಿಕಾರಿಗಳು, ತಾಂತ್ರಿಕ ತಜ್ಞರ ತಂಡದೊಂದಿಗೆ ನಿತ್ಯವೂ ಚರ್ಚಿಸುತ್ತಾ ರೈತಸಮುದಾಯಕ್ಕೆ ನೆರವಾಗುವ ಚಿಂತನೆಗೆ ಇಳಿದ ಫಲ ಇಂದು ಕೈಗೂಡಿ ಜನರ ಬದುಕಿಗೆ ಈಗ ಆಸರೆಯಾಗಿದೆ.

ಏತ ನೀರಾವರಿ ಯೋಜನೆ ವ್ಯಾಪ್ತಿಯ ಎಲ್ಲಾ ರೈತರೂ ಶ್ರೀಗಳವರ ಅವಿರತ ಹೋರಾಟವನ್ನು ಸ್ಮರಿಸುತ್ತಾ ಅವರಿಗೆ ಧನ್ಯತಾಭಾವ ತೋರುತ್ತಿದ್ದಾರೆ.

ಕೋಟ್-1

2014 ರಿಂದ 2018 ರ ವರೆಗೆ ಭೀಮಸಮುದ್ರದ ಆಸುಪಾಸಿನಲ್ಲಿ ಭೀಕರ ಬರ ಆವರಿಸಿತ್ತು. ತೋಟ ಇರಲಿ ಕುಡಿಯುವ ನೀರೂ ಇಲ್ಲದ ಕಾಲ ಅದು. ಆಗ ಈ ಭಾಗದ ಜನರು ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಯವರ ಮೊರೆ ಹೋದೆವು. ಅಲ್ಲಿಂದ ಕಾರ್ಯತತ್ಪರರಾದ ಶ್ರೀಗಳು ಬೃಹತ್‌ ಯೋಜನೆಯ ಮೂಲಕ ಕೆರೆಗೆ ನೀರು ತಂದು ಕೊಡುವ ಕೆಲಸ ಮಾಡಿದ್ದಾರೆ. ಅವರ ಪರಿಶ್ರಮ ಇಲ್ಲದೇ ಇದ್ದರೆ ನಮ್ಮ ಭಾಗದ ರೈತರ ಬದುಕು ವಿನಾಶದ ಕಡೆಗೆ ಸಾಗುತ್ತಿತ್ತು.

ಮಹೇಶ್ವರಪ್ಪ

ಕೃಷಿಕರು ಹಾಗೂ ನೀರಾವರಿ ಹೋರಾಟ ಸಮಿತಿ ಸದಸ್ಯರು, ಭೀಮಸಮುದ್ರ.ಕೋಟ್-2

ಸರ್ಕಾರ ಮತ್ತು ಜಿಲ್ಲಾಡಳಿತ ಜನರ ಬದುಕಿಗೆ ಆಸರೆಯಾಗಿ ನಿಲ್ಲದೇ ಇದ್ದ ಕಾಲದಲ್ಲಿ ರೈತರ ಕೈಹಿಡಿದದ್ದು ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು. ನೂರಾರು ಮಠಗಳಿಗೆ, ಆದರೆ ಸಿರಿಗೆರೆಯ ಮಠ ರೈತರ ಅಭ್ಯುದಯವೇ ತನ್ನ ಕೆಲಸವೆಂದು ಭಾವಿಸಿದೆ. ಈಗ ಜನರಿಗಷ್ಟೇ ಅಲ್ಲ, ಪ್ರಾಣಿಪಕ್ಷಿಗಳಿಗೂ ನೀರು ಸಿಕ್ಕು, ಅವೂ ಕೂಡ ಗರಿಬಿಚ್ಚಿ ಹಾರಾಡುವಂತಾಗಿದೆ.

ವೇದಮೂರ್ತಿ

ಪರಿಸರಪ್ರೇಮಿ, ಭೀಮಸಮುದ್ರ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಂದಿನ ದಿನ ಪಿಯುಸಿ ಮಕ್ಕಳಿಗೂ ಉಚಿತ ನೋಟ್‌ಬುಕ್‌: ಸಚಿವ ಮಧು ಬಂಗಾರಪ್ಪ
ಅಂಗಾಂಗ ದಾನದ ಕುರಿತು ಜಾಗೃತಿ ಅಗತ್ಯ: ಡಾ.ಆರ್‌.ವಿ.ಪ್ರದೀಪ್ ಕೃಷ್ಣ