ರಾಜ್ಯದ ಕಬ್ಬು ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಿ ಪ್ರತಿ ಟನ್ ಕಬ್ಬಿಗೆ ೩,೩೦೦ ರು. ದರ ನಿಗದಿ ಪಡಿಸಿ ಆದೇಶ ಹೊರಡಿಸಿರುವುದನ್ನು ಸ್ವಾಗತಿಸಿರುವ ಶಾಸಕ ಶ್ರೀನಿವಾಸ ಮಾನೆ ಉತ್ತರ ಕರ್ನಾಟಕದ ಹೆಬ್ಬಾಗಿಲು ಹಾವೇರಿ ಜಿಲ್ಲೆಯ ಕಬ್ಬು ಬೆಳೆಗಾರರಿಗೂ ಈ ಆದೇಶ ಅನ್ವಯಿಸಿ ನಿಗದಿ ಪಡಿಸಿದ ದರ ದೊರಕಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಕ್ಕರೆ ಸಚಿವ ಶಿವಾನಂದ ಪಾಟೀಲ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಹಾನಗಲ್: ರಾಜ್ಯದ ಕಬ್ಬು ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಿ ಪ್ರತಿ ಟನ್ ಕಬ್ಬಿಗೆ ೩,೩೦೦ ರು. ದರ ನಿಗದಿ ಪಡಿಸಿ ಆದೇಶ ಹೊರಡಿಸಿರುವುದನ್ನು ಸ್ವಾಗತಿಸಿರುವ ಶಾಸಕ ಶ್ರೀನಿವಾಸ ಮಾನೆ ಉತ್ತರ ಕರ್ನಾಟಕದ ಹೆಬ್ಬಾಗಿಲು ಹಾವೇರಿ ಜಿಲ್ಲೆಯ ಕಬ್ಬು ಬೆಳೆಗಾರರಿಗೂ ಈ ಆದೇಶ ಅನ್ವಯಿಸಿ ನಿಗದಿ ಪಡಿಸಿದ ದರ ದೊರಕಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಕ್ಕರೆ ಸಚಿವ ಶಿವಾನಂದ ಪಾಟೀಲ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಸರ್ಕಾರ ಕಬ್ಬಿಗೆ ಪ್ರತಿ ಟನ್‌ಗೆ ೩,೩೦೦ ರು. ಬೆಲೆ ನಿಗದಿ ಪಡಿಸಿರುವ ಆದೇಶ ಬೆಳಗಾವಿ, ಕಾರವಾರ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳಿಗೆ ಮಾತ್ರ ಅನ್ವಯವಾಗಲಿದ್ದು ಉತ್ತರ ಕರ್ನಾಟಕದ ಹೆಬ್ಬಾಗಿಲು ನಮ್ಮ ಹಾವೇರಿ ಜಿಲ್ಲೆಯ ಕಬ್ಬು ಬೆಳೆಗಾರ ರೈತರು ಇದರಿಂದ ವಂಚಿತರಾಗಿದ್ದಾರೆ. ಬೆಳಗಾವಿ, ಕಾರವಾರ, ಬಾಗಲಕೋಟೆ, ವಿಜಯಪುರ ಮತ್ತು ಹಾವೇರಿ ಜಿಲ್ಲೆಗಳು ಬೆಳಗಾವಿ ಕಂದಾಯ ವಿಭಾಗಕ್ಕೆ ಒಳಪಟ್ಟಿದ್ದರೂ ಸಹ ಹಾವೇರಿ ಜಿಲ್ಲೆಯ ಕಬ್ಬು ಬೆಳೆಗಾರರು ಸರಕಾರದ ಆದೇಶದಿಂದ ವಂಚಿತರಾಗಿರುವುದು ವಿಪರ್ಯಾಸ ಎಂದಿದ್ದಾರೆ. ಹಾವೇರಿ ಜಿಲ್ಲೆಯ ಸಂಗೂರು ಸಹಕಾರಿ ಸಕ್ಕರೆ ಕಾರ್ಖಾನೆ ೧೯೮೩ ರಿಂದ ಸಹಕಾರಿ ತತ್ವದಡಿ ಕಬ್ಬು ನುರಿಸುವ ಕಾರ್ಯ ಮಾಡುತ್ತಿದೆ. ೧೯೮೩ ರಿಂದ ೨೦೦೬ ರ ವರೆಗೆ ಕಾರ್ಖಾನೆ ಕಬ್ಬು ನುರಿಸಿದ್ದು ಈ ಅವಧಿಯಲ್ಲಿ ಸಕ್ಕರೆ ರಿಕವರಿ ಸರಾಸರಿ ೧೦.೪೧ ರಿಂದ ೧೧ ರವರೆಗೆ ಇರುತ್ತದೆ. ೨೦೦೭-೦೮ ನೇ ಸಾಲಿನಿಂದ ೩೦ ವರ್ಷಗಳ ಅವಧಿಗೆ ಮೆ. ಜಿ.ಎಂ.ಶುಗರ್ಸ್ & ಎನರ್ಜಿ ಇವರಿಗೆ ಗುತ್ತಿಗೆ ನೀಡಿದ್ದು ಇವರ ಅವಧಿಯಲ್ಲಿ ಸಕ್ಕರೆ ರಿಕವರಿ ಪ್ರಮಾಣ ಸರಾಸರಿ ೮.೫ ರಿಂದ ೯.೫ ವರೆಗೆ ಮಾತ್ರ ತೋರಿಸಲಾಗುತ್ತಿದೆ. ಇದರಿಂದ ಕಬ್ಬು ಬೆಳೆಗಾರ ರೈತರಿಗೆ ಎಫ್‌ಆರ್‌ಪಿ ದರದಲ್ಲಿ ವ್ಯತ್ಯಾಸವಾಗಿ, ಮೋಸ ಮಾಡಲಾಗುತ್ತಿದೆ. ಹಾಗಾಗಿ ಕಬ್ಬು ಬೆಳೆಗಾರ ರೈತರಿಗೆ ನ್ಯಾಯ ದೊರಕಿಸಿಕೊಡಲು ಬೆಳಗಾವಿ, ಕಾರವಾರ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳಿಗೆ ದರ ನಿಗದಿ ಪಡಿಸಿದಂತೆ ಹಾವೇರಿ ಜಿಲ್ಲೆಗೂ ಸಹ ಅನ್ವಯವಾಗುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಶಾಸಕ ಮಾನೆ ಕೋರಿದ್ದಾರೆ. ಕಬ್ಬು ನಿಯಂತ್ರಣ ಕಾಯ್ದೆ ಪ್ರಕಾರ ಕಬ್ಬು ಸರಬರಾಜು ಮಾಡಿದ ೧೪ ದಿನಗಳೊಳಗೆ ಬಿಲ್ ಪಾವತಿಗೆ ಕಾರ್ಖಾನೆಯ ಗುತ್ತಿಗೆದಾರರಿಗೆ ನಿರ್ದೇಶನ ನೀಡಬೇಕು. ಅಲ್ಲದೆ ಸದ್ಯ ಗುತ್ತಿಗೆದಾರರು ಗೇಟ್ ಕೇನ್ ದರ ನೀಡುತ್ತಿದ್ದು, ಈ ಮೊದಲು ಸಹಕಾರಿ ರಂಗದಲ್ಲಿ ಕಾರ್ಖಾನೆಯನ್ನು ನಡೆಸುತ್ತಿದ್ದ ಸಂದರ್ಭದಲ್ಲಿ ಎಕ್ಸ್ ಫೀಲ್ಡ್ ರೇಟ್ ನೀಡುತ್ತಿದ್ದು, ಉತ್ತರ ಕರ್ನಾಟಕದ ಕಾರ್ಖಾನೆಗಳು ನೀಡುವಂತೆ ಎಕ್ಸ್ ಫೀಲ್ಡ್ ನಂತೆ ಕಬ್ಬಿನ ದರ ನೀಡಲು ಗುತ್ತಿಗೆದಾರರಿಗೆ ನೀಡಲು ನಿರ್ದೇಶನ ನೀಡಬೇಕು. ಬೆಳಗಾವಿ, ಕಾರವಾರ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳಿಗೆ ಅನ್ವಯವಾದಂತೆ ಹಾವೇರಿ ಜಿಲ್ಲೆಗೂ ದರ ನಿಗದಿ ಪಡಿಸಿ ಕಬ್ಬು ಬೆಳೆಗಾರ ರೈತರ ನೆರವಿಗೆ ಧಾವಿಸುವಂತೆ ಪತ್ರದಲ್ಲಿ ಮನವಿ ಮಾಡಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.