ಹೂಡಿಕೆದಾರರಿಗೆ ರಿಯಾಯಿತಿ ದರದಲ್ಲಿ ಕ್ರಿಪ್ಟೋ ಟೋಕನ್‌ಗಳನ್ನು ನೀಡುವುದಾಗಿ ಭರವಸೆ ನೀಡಿ 337.12 ಕೋಟಿ ರು.(35 ಮಿಲಿಯನ್ ಯುಎಸ್‌ಡಿ) ವಂಚಿಸಿದ ಹಗರಣ ಸಂಬಂಧ ಜಾರಿ ನಿರ್ದೇಶನಾಲಯ(ಇ.ಡಿ.) ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‌ಎ) ಅಡಿ ಬೆಂಗಳೂರಿನ ವಿವಿಧೆಡೆ ದಾಳಿ ನಡೆಸಿ ಎರಡು ದಿನಗಳ ಕಾಲ ಶೋಧ ನಡೆಸಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಹೂಡಿಕೆದಾರರಿಗೆ ರಿಯಾಯಿತಿ ದರದಲ್ಲಿ ಕ್ರಿಪ್ಟೋ ಟೋಕನ್‌ಗಳನ್ನು ನೀಡುವುದಾಗಿ ಭರವಸೆ ನೀಡಿ 337.12 ಕೋಟಿ ರು.(35 ಮಿಲಿಯನ್ ಯುಎಸ್‌ಡಿ) ವಂಚಿಸಿದ ಹಗರಣ ಸಂಬಂಧ ಜಾರಿ ನಿರ್ದೇಶನಾಲಯ(ಇ.ಡಿ.) ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‌ಎ) ಅಡಿ ಬೆಂಗಳೂರಿನ ವಿವಿಧೆಡೆ ದಾಳಿ ನಡೆಸಿ ಎರಡು ದಿನಗಳ ಕಾಲ ಶೋಧ ನಡೆಸಿದೆ.
ಬೃಹತ್ ವಂಚನೆ ಹಗರಣ ಸಂಬಂಧ ಜು.18 ಮತ್ತು 19ರಂದು ನಡೆದ ಶೋಧ ಕಾರ್ಯದ ವೇಳೆ ಡಿಜಿಟಲ್ ಸಾಧನಗಳು, ಅಪರಾಧದ ಆದಾಯ ವಂಚಿಸಲು ಬಳಸುವ ವ್ಯಾಲೆಟ್‌ಗಳ ರೂಪದ ಇ-ಮೇಲ್ ಪುರಾವೆಗಳು, 8,700 ಯುಎಸ್‌ಡಿ ಮೌಲ್ಯದ ವರ್ಚುವೆಲ್ ಡಿಜಿಟಲ್ ಸ್ವತ್ತುಗಳನ್ನು ಜಪ್ತಿ ಮಾಡಿದೆ.
ಡಚ್ ಕ್ರಿಪ್ಟೋ ಇನ್ವೆಸ್ಟರ್ಸ್(ಡಿಸಿಐ) ಎಂಬ ಡಿಜಿಟಲ್ ಆಸ್ತಿ ವಹಿವಾಟು ಸಂಸ್ಥೆಯ ಘಟಕವು ಓವರ್ ದಿ ಕೌಂಟರ್ ಟ್ರೇಡ್ಸ್(ಒಟಿಸಿ)ನಲ್ಲಿ ದೊಡ್ಡ ಪ್ರಮಾಣದ ಹಗರಣ ನಡೆದಿದೆ ಎಂದು ಆರೋಪಿಸಿ ದಕ್ಷಿಣ ಅಂಡಮಾನ್‌ನ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆಗೆ ದಾಖಲಾದ ಎಫ್‌ಐಆರ್ ಆಧರಿಸಿ ಇ.ಡಿ. ತನಿಖೆ ಆರಂಭಿಸಿದೆ.
ರಿಯಾಯಿತಿ ಆಮಿಷವೊಡ್ಡಿ ಗಾಳ:
ಮೊಹಮ್ಮದ್ ವಸೀಮ್, ಸೌರಭ್ ದಿವಾನ್ ಮತ್ತು ವೈಭವ್ ಗುಪ್ತಾ ಎಂಬ ಆರೋಪಿಗಳು ಹೂಡಿಕೆದಾರರಿಗೆ ರಿಯಾಯಿತಿ ದರದ ಕ್ರಿಪ್ಟೋ ಟೋಕನ್‌ಗಳನ್ನು (ಮಲ್ಟಿವರ್ಸ್‌ಎಕ್ಸ್, ಕಾವಾ, ಬೀಮ್, ಗ್ರಾಸ್, ಎಸ್‌ಯುಐ, ವಿಎಎನ್‌ಎ, ಎಜಿಎಲ್‌ಡಿ ಇತ್ಯಾದಿ) ನೀಡುವ ಭರವಸೆ ನೀಡಿ ವಂಚಿಸಿದ್ದಾರೆ. ದೂರದಾರರ ವಿಶ್ವಾಸ ಗಳಿಸಲು ಖಾಸಗಿ ಟೆಲಿಗ್ರಾಮ್ ಗ್ರೂಪ್‌ಗಳು, ವೈಯಕ್ತಿಕ ಸಭೆಗಳು ಮತ್ತು ಸುಳ್ಳು ದೃಢೀಕರಣ ಬಳಸಿಕೊಂಡು ಆರಂಭದಲ್ಲಿ ಸಣ್ಣ ಕ್ರಿಪ್ಟೋಕರೆನ್ಸಿ ಓಟಿಸಿ ವಹಿವಾಟುಗಳನ್ನು ಪೂರೈಸಿದ್ದಾರೆ. ಬಳಿಕ ದೊಡ್ಡ ಮೊತ್ತವನ್ನು ಹೂಡಿಕೆ ಮಾಡುವಂತೆ ಪ್ರೇರಿಸಿದ್ದಾರೆ.
ಹೂಡಿಕೆ ಹಣ ಬೆಂಗಳೂರಿನ ವ್ಯಕ್ತಿಗೆ ರವಾನೆ:
ಹೆಚ್ಚಿನ ರಿಯಾಯಿತಿ ಆಮಿಷವೊಡ್ಡಿ ದೂರುದಾರರಿಂದ ಕೋಟ್ಯಂತರ ರು. ಹೂಡಿಕೆ ಮಾಡಿಸಿಕೊಂಡಿದ್ದಾರೆ. ನಂತರ ಮಾರುಕಟ್ಟೆ ಪರಿಸ್ಥಿತಿಗಳು ಬದಲಾದ ಹಿನ್ನೆಲೆಯಲ್ಲಿ ಡಿಜಿಟಲ್ ಟೋಕನ್‌ಗಳ ವಿತರಣೆ ದಿಢೀರ್ ಸ್ಥಗಿತಗೊಳಿಸಿದ್ದಾರೆ. ಕ್ರಿಪ್ಟೋ ವ್ಯಾಲೆಟ್‌ಗಳ ಮುಖಾಂತರ ಪಡೆದ ಬಹು ಮಿಲಿಯನ್ ಡಾಲರ್ ಹೂಡಿಕೆಗಳು ಈ ವಂಚನೆ ಪ್ರಕರಣದ ಮಾಸ್ಟರ್ ಮೈಂಡ್ ಎನ್ನಲಾದ ಬೆಂಗಳೂರಿನ ಕೆ.ರವೀಂದ್ರ ಎಂಬಾತನಿಗೆ ರವಾನಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಸೋಶಿಯಲ್ ಮೀಡಿಯಾದಲ್ಲಿ ಪ್ರಚಾರ:
ಆರೋಪಿಗಳು ತಮ್ಮನ್ನು ಕ್ರಿಪ್ಟೋ ಉದ್ಯಮಗಳಲ್ಲಿ ಸ್ವಯಂ ಶೈಲಿಯ ಪ್ರಮುಖ ಅಭಿಪ್ರಾಯ ನಾಯಕರು ಎಂದು ಬಿಂಬಿಸಿಕೊಂಡಿದ್ದರು. ವೈಯಕ್ತಿಕ ಟೆಲಿಗ್ರಾಮ್, ವಾಟ್ಸಾಪ್, ಇನ್ಸ್‌ಸ್ಟಾಗ್ರಾಮ್, ವೆಬ್‌ಸೈಟ್ ಇತ್ಯಾದಿ ಸಾಮಾಜಿಕ ಮಾಧ್ಯಮ ನೆಟ್‌ವರ್ಕ್‌ಗಳ ಮುಖಾಂತರ ಆರಂಭಿಕ ಕ್ರಿಪ್ಟೋ ಟೋಕನ್ ಕೊಡುಗೆಗಳ ಬಗ್ಗೆ ಪ್ರಚಾರ ಮಾಡುತ್ತಿದ್ದರು. ತಾವು ಪ್ರಚಾರ ಮಾಡುವ ಕ್ರಿಪ್ಟೋ ಟೋಕನ್‌ಗಳಲ್ಲಿ ಹೂಡಿಕೆ ಮಾಡಲು ಒತ್ತಾಯಿಸುತ್ತಿದ್ದರು. ಹೂಡಿಕೆದಾರರಿಗೆ ಹೆಚ್ಚಿನ ಆದಾಯದ ಭರವಸೆ ನೀಡಿ ಹಣ ಸಂಗ್ರಹಿಸುತ್ತಿದ್ದರು. ಬಳಿಕ ಯಾವುದೇ ಆದಾಯ ನೀಡದೆ ವಂಚಿಸುತ್ತಿದ್ದರು ಎಂದು ಇ.ಡಿ.ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ವಿದೇಶಿ ಸಂಸ್ಥೆಗಳು/ಹೂಡಿಕೆದಾರರಿಗೂ ವಂಚನೆ:
ಕ್ರಿಮಿನಲ್ ಪಿತೂರಿ, ವಂಚನೆ ಇತ್ಯಾದಿಗಳ ಮುಖಾಂತರ ಪಡೆದ ಅಪರಾಧದ ಆದಾಯವನ್ನು ಆರೋಪಿಗಳು ಚರ/ಸ್ಥಿರ ಆಸ್ತಿಗಳಲ್ಲಿ ಹೂಡಿಕೆ, ವೈಯಕ್ತಿಕ ವೆಚ್ಚಗಳು, ವ್ಯವಹಾರ ಉದ್ದೇಶಗಳಿಗೆ ಬಳಸಿಕೊಂಡಿದ್ದಾರೆ. ಆರೋಪಿಗಳು ಇದೇ ರೀತಿ ಅನೇಕ ವಿದೇಶಿ ಸಂಸ್ಥೆಗಳು ಹಾಗೂ ಹೂಡಿಕೆದಾರರಿಗೆ ವಂಚಿಸಿರುವುದು ಬಯಲಾಗಿದೆ. ಈ ಸಂಬಂಧ ತನಿಖೆ ಮುಂದುವರೆದಿದೆ ಎಂದು ಇ.ಡಿ. ಪ್ರಕಟಣೆಯಲ್ಲಿ ತಿಳಿಸಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.