ಕನ್ನಡಪ್ರಭ ವಾರ್ತೆ, ತುಮಕೂರುರಾಮಕೃಷ್ಣ-ವಿವೇಕಾನಂದ ಆಶ್ರಮವು ಇದೀಗ ತನ್ನ 33 ನೇ ವಾರ್ಷಿಕೋತ್ಸವದ ಅರ್ಥಪೂರ್ಣ ಸಂಭ್ರಮಾಚರಣೆಗೆ ಸನ್ನದ್ಧಗೊಂಡಿದೆ. ವಾರ್ಷಿಕೋತ್ಸವದ ಕಾರ್ಯಕ್ರಮಗಳು ಇದೇ ಜನವರಿ 10 ಹಾಗೂ 11 ರಂದು ಆಶ್ರಮದ ಸ್ವಾಮಿ ವಿವೇಕಾನಂದ ಸಭಾಂಗಣ ದಲ್ಲಿ ನೆರವೇರಲಿವೆ ಎಂದು ಆಶ್ರಮದ ಅಧ್ಯಕ್ಷ ಸ್ವಾಮಿ ವೀರೇಶಾನಂದ ಸರಸ್ವತಿ ಮಹಾರಾಜರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀಮಾತೆ ಶ್ರೀ ಶಾರದಾದೇವಿ ಜನ್ಮದಿನೋತ್ಸವದ ಅಂಗವಾಗಿ 10 ರಂದು 26ನೇ ವರ್ಷದ ‘ಜೀವಂತದುರ್ಗಾ ಪೂಜೆ’ ಕಾರ್ಯಕ್ರಮ ಬೆಳಿಗ್ಗೆ 10.30ಕ್ಕೆ ಆಯೋಜನೆಗೊಂಡಿದೆ. ಕಾರ್ಯಕ್ರಮವನ್ನು ಪದ್ಮಶ್ರೀ ಪುರಸ್ಕೃತೆ , ಸುಪ್ರಸಿದ್ಧ ಕ್ಯಾನ್ಸರ್ ಚಿಕಿತ್ಸಕಿಯರಾದ ಡಾ. ವಿಜಯಲಕ್ಷ್ಮೀ ದೇಶಮಾನೆರವರು ಭಾಗವಹಿಸಲಿದ್ದಾರೆ. ಖ್ಯಾತ ಅರ್ಥತಜ್ಞರು ಹಾಗೂ ಕ್ರಿಯಾಶೀಲ ಚಿಂತಕರಾದ ಮೂಕನಹಳ್ಳಿ ರಂಗಸ್ವಾಮಿಯವರು, ಬೆಂಗಳೂರಿನ ಉದ್ಯಮಿ ವೀರಭದ್ರ ಬ್ಯಾಡಗಿ, ಶಿಲ್ಪಾ ಬ್ಯಾಡಗಿಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
11ರಂದು ಭಾನುವಾರ ಬೆಳಿಗ್ಗೆ ರಾಜ್ಯಮಟ್ಟದ ಯುವ ಸಮ್ಮೇಳನ ನಡೆಯಲಿದೆ. ರಾಣೆಬೆನ್ನೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಪ್ರಕಾಶಾನಂದಜೀ ಮಹಾರಾಜರು ಸಾನ್ನಿಧ್ಯ ವಹಿಸಲಿದ್ದು, ಕರ್ನಾಟಕ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಪಿ. ಕೃಷ್ಣಭಟ್ ವಿಶೇಷ ಭಾಷಣ ಮಾಡಲಿದ್ದಾರೆ. ಬೆಂಗಳೂರಿನ ಶ್ರೀ ಭವತಾರಿಣಿ ಆಶ್ರಮದ ವಿವೇಕಮಯಿ ಮಾತಾಜಿ ಅವರು ವಿವೇಕ ವಿದ್ಯಾರ್ಥಿ ಒಂದು ಅವಲೋಕನ ವಿಷಯದ ಕುರಿತು ಮಾತನಾಡಲಿದ್ದಾರೆ. ವಿಶೇಷ ಆಹ್ವಾನಿತರಾಗಿ ನಿವೃತ್ತ ಐಎಎಸ್ ಅಧಿಕಾರಿ ಗೋಪಾಲಕೃಷ್ಣೆ ಗೌಡ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.