
ಇದು ಐತಿಹಾಸಿಕ, ಪವಿತ್ರ ಕ್ಷೇತ್ರ । ಗಂಗಾಧರೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ತುರುವೇಕೆರೆ ತಾಲೂಕಿನ ಮಲ್ಲಘಟ್ಟ ಸುತ್ತಮುತ್ತ ಸುಮಾರು 35 ಕೋಟಿ ರು. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ
ಮುಖ್ಯಮಂತ್ರಿ ಆದ ಬಳಿಕ ಇದೇ ಮೊದಲ ಬಾರಿಗೆ ಶನಿವಾರ ತುಮಕೂರು ಜಿಲ್ಲೆಗೆ ಭೇಟಿ ನೀಡಿದ ಅವರು ಮಲ್ಲಘಟ್ಟದ ಗಂಗಾಧರೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ರೈತರು, ಸುತ್ತಮುತ್ತಲಿನ ಜನರಿಗೆ ಅನುಕೂಲವಾಗುವಂತೆ ಕಾಲುವೆ ವ್ಯವಸ್ಥೆ, ಸಮುದಾಯ ಭವನ, ಅತಿಥಿ ಗೃಹ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿರುವುದಾಗಿ ಹೇಳಿದರು.ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಈ ಪವಿತ್ರ ಸನ್ನಿಧಿಗೆ ಭೇಟಿ ನೀಡಿದ್ದು, ಗಂಗಾಧರೇಶ್ವರ ದೇವಾಲಯ ಹಾಗೂ ಮಲ್ಲಘಟ್ಟ ಕೆರೆ ತಮಗೆ ವಿಶೇಷ ಭಾವನಾತ್ಮಕ ನಂಟು ಹೊಂದಿರುವ ಸ್ಥಳಗಳು. ಈ ಕೆರೆಗೆ ಈ ಹಿಂದೆ ಮೂರು-ನಾಲ್ಕು ಬಾರಿ ಭೇಟಿ ನೀಡಿದ್ದು ಇದು ಐತಿಹಾಸಿಕ ಹಾಗೂ ಪವಿತ್ರ ಕ್ಷೇತ್ರವಾಗಿದೆ. ಇಲ್ಲಿನ ನೀರನ್ನು ತಮ್ಮ ಮನೆಯ ಗೃಹಪ್ರವೇಶದ ಸಂದರ್ಭದಲ್ಲೂ ತೆಗೆದುಕೊಂಡು ಹೋಗಿದ್ದಾಗಿ ಅವರು ಹೇಳಿದರು.
ಪ್ರಮಾಣವಚನ ಸ್ವೀಕಾರ ವೇಳೆ ಹಿಂದೂ ಸಂಪ್ರದಾಯ ಅನುಸರಿಸಿದ ಬಗ್ಗೆ ಪತ್ರಕರ್ತರ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಾಜಕಾರಣಕ್ಕಿಂತ ಭಕ್ತಿ ಮುಖ್ಯ. ಭಕ್ತನಿಗೂ ಭಗವಂತನಿಗೂ ಇರುವ ಸಂಬಂಧ ವೈಯಕ್ತಿಕವಾದದ್ದು. ಪ್ರಮಾಣವಚನ ಕಾರ್ಯಕ್ರಮಕ್ಕೆ ಹಿಂದೂ, ಕ್ರೈಸ್ತ, ಸಿಖ್, ಬೌದ್ಧ ಸೇರಿದಂತೆ ಎಲ್ಲಾ ಧರ್ಮದ ಧಾರ್ಮಿಕ ಮುಖಂಡರನ್ನು ಆಹ್ವಾನಿಸಲಾಗಿತ್ತು ಎಂದರು.
ಈ ವೇಳೆ ಶಾಸಕರಾದ ಕೆ.ಷಡಕ್ಷರಿ, ಎಂ.ಟಿ ಕೃಷ್ಣಪ್ಪ ಮತ್ತಿತರ ಮುಖಂಡರು, ಅಧಿಕಾರಿಗಳು ಉಪಸ್ಥಿತರಿದ್ದರು.